ಫಿಫಾ ವಿಶ್ವಕಪ್: ಹ್ಯಾರಿ ಸಾಹಸದಲ್ಲಿ ಇಂಗ್ಲೆಂಡ್ ಶುಭಾರಂಭ

Update: 2018-06-22 10:33 GMT

ವೊಲ್ಗೊರ್ಗಾಡ್ (ರಷ್ಯಾ), ಜೂ. 19: ನಾಯಕ ಹ್ಯಾರಿ ಕೇನ್ ಎರಡು ಗೋಲುಗಳನ್ನು ಗಳಿಸುವ ಮೂಲಕ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ವಿಜಯದ ರೂವಾರಿ ಎನಿಸಿಕೊಂಡರು.

ಟ್ಯುನೇಶಿಯಾ ಸವಾಲನ್ನು 2-1 ಗೋಲುಗಳಿಂದ ಬಗ್ಗುಬಡಿದ ಇಂಗ್ಲಿಷ್ ತಂಡ ಶುಭಾರಂಭ ಮಾಡಿತು.

ವಿಶ್ವಕಪ್‌ನಲ್ಲಿ ನಿರಾಸಾದಾಯಕ ಪ್ರದರ್ಶನವನ್ನು ಇಂಗ್ಲೆಂಡ್ ಮುಂದುವರಿಸುತ್ತದೆ ಎಂಬ ಸ್ಥಿತಿಯಲ್ಲಿದ್ದಾಗ 91ನೇ ನಿಮಿಷದಲ್ಲಿ ಕೇನ್, ಹೆಡ್ಡರ್ ಒಂದನ್ನು ಗೋಲಾಗಿ ಪರಿವರ್ತಿಸಿ ನಿರ್ಣಾಯಕ ಗೋಲು ತಂದಿತ್ತರು. ಗ್ರೂಪ್ ಜಿ ಪಂದ್ಯದಲ್ಲಿ 11ನೇ ನಿಮಿಷದಲ್ಲೇ ಟ್ಯೂನೇಶಿಯಾ ಗೋಲ್‌ಕೀಪರ್ ಮೌಜ್ ಹುಸೈನ್ ಅವರನ್ನು ವಂಚಿಸಿ ಗೋಲು ಗಳಿಸಿದ ನಾಯಕ ಆರಂಭಿಕ ಮುನ್ನಡೆ ತಂದುಕೊಟ್ಟರು.

ಕೇನ್ ಅವರ ಈ ಗೋಲಿನೊಂದಿಗೆ ಭರವಸೆಯ ಅಭಿಯಾನವನ್ನು ವಿಶ್ವಕಪ್‌ನಲ್ಲಿ ಆರಂಭಿಸುವ ರೀತಿಯಲ್ಲಿ ಇಂಗ್ಲೆಂಡ್ ಪ್ರದರ್ಶನ ನೀಡಿತು. ಆಕ್ರಮಣಕಾರಿ ಪ್ರದರ್ಶನ ನೀಡಿ, ಎದುರಾಳಿಗಳನ್ನು ನಿಯಂತ್ರಿಸಿತು. ಆದರೆ ಹಲವು ಒದೆತಗಳನ್ನು ಅಂತಿಮವಾಗಿ ಗೋಲಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ನ ರಕ್ಷಣಾ ಆಟಗಾರ ಕೈಲ್ ವಾಕರ್, ಫಕ್ರುದ್ದೀನ್ ಬೆನ್ ಯೂಸೆಫ್ ಅವರನ್ನು ತಡೆದಾಗ ಕೊಲಂಬಿಯಾ ರೆಫ್ರಿ ವಿಲ್ಮರ್ ರೋಲ್ಡನ್ ಪೆನಾಲ್ಟಿ ನೀಡಿದರು. ಆಗ ಫೆರ್ಜಾನಿ ಸೆಸ್ಸಿ ಇಂಗ್ಲೆಂಡ್ ಕೀಪರ್ ಜೋರ್ಡಾನ್ ಪಿಕ್‌ಫೋರ್ಡ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ಸಮಬಲ ಸಾಧಿಸಿದರು.

ವಿರಾಮದ ಬಳಿಕ ಆರಂಭಿಕ ರಭಸವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸಿದ ಟ್ಯೂನೇಷಿಯಾ ಉತ್ತರಾರ್ಧದಲ್ಲಿ ಪ್ರಭುತ್ವ ಸ್ಥಾಪಿಸಿತ್ತು. ಆದರೆ 91ನೇ ನಿಮಿಷದಲ್ಲಿ ಕೇನ್ ನಿರ್ಣಾಯಕ ಗೋಲು ತಂದಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News