ಉನ್ನತ ಶಿಕ್ಷಣ ಪರಿಷತ್ತಿಗೆ ಪ್ರೊ.ರಂಗಪ್ಪ ನೇಮಕ ಚಿಂತನೆ ಕೈಬಿಡಲು ಬಿಜೆಪಿ ಆಗ್ರಹ

Update: 2018-06-19 15:59 GMT

ಬೆಂಗಳೂರು, ಜೂ. 19: ಮೈಸೂರು ವಿವಿ ಹಾಗೂ ಕರ್ನಾಟಕ ಮುಕ್ತ ವಿವಿ ಅಧೋಗತಿಗೆ ಕಾರಣರಾದ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷರನ್ನಾಗಿ ನೇಮಿಸುವ ಚಿಂತನೆಯನ್ನು ಸರಕಾರ ಕೈಬಿಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಎಚ್ಚರಿಸಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿವಿಯಿಂದ ನಕಲಿ ಅಂಕಪಟ್ಟಿ ಸೃಷ್ಟಿಸಿ ಮಾರಾಟ ಮಾಡಿದ್ದ ಖ್ಯಾತಿ ಪ್ರೊ.ರಂಗಪ್ಪ ಅವರಿಗೆ ಸಲ್ಲುತ್ತದೆ. ಅಂತಹ ವ್ಯಕ್ತಿಗೆ ಸಂಪುಟ ದರ್ಜೆ ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷರಾಗಿ ನೇಮಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ಪ್ರೊ.ರಂಗಪ್ಪಗೆ ಉನ್ನತ ಸ್ಥಾನ ನೀಡುವ ಮೂಲಕ ಶಿಕ್ಷಣ ಇಲಾಖೆಯನ್ನು ಹದಗೆಡಿಸಲು ಹೊರಟಂತೆ ಇದೆ ಎಂದು ಟೀಕಿಸಿದರು.

ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಇಲಾಖೆ ತಿರಸ್ಕರಿಸಿದ್ದು, ಇದೀಗ ಪ್ರೊ.ರಂಗಪ್ಪ ಪ್ರವೇಶದ ಮುನ್ಸೂಚನೆ ನೋಡಿದರೆ ಇಲಾಖೆಯನ್ನು ಅವರೇ ಹಿಡಿತ ಸಾಧಿಸುವ ಸಾಧ್ಯತೆಗಳಿವೆ. ಕೋಟ್ಯಂತರ ರೂ.ಅವ್ಯವಹಾರ ನಡೆಸಿರುವ ಪ್ರೊ.ರಂಗಪ್ಪ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News