ವಿದಾಯ ಹೇಳುವ ಮುನ್ನ..

Update: 2018-06-20 07:26 GMT

ಅಂತರ್ಜಾಲದಲ್ಲಿ ಸ್ವಲ್ಪ ಜಾಲಾಡಿದರೂ ಸಾಕು ಬದುಕುವ ಕಲೆಯ ಬಗ್ಗೆ ಅಸಂಖ್ಯ ಉಪನ್ಯಾಸಗಳು ಸಿಗುತ್ತವೆ. ಸರಿಯಾದ ದಾರಿಯಲ್ಲಿ ಬದುಕಲು ಕಲಿಸುವ ಸಂತರ ಪ್ರವಚನ ಮಾಲಿಕೆಗಳನ್ನು ಗಂಟೆಗಟ್ಟಲೆ ಕುಳಿತು ನಾವೆಲ್ಲರೂ ಈಗಾಗಲೇ ಕೇಳಿದ್ದೇವೆ ಮುಂದೆಯೂ ಕೇಳಲಿದ್ದೇವೆ. ಆದರೆ ಇವೆಲ್ಲವುಗಳ ಮಧ್ಯೆ ಯಾರೊಬ್ಬರೂ ‘ART OF LEAVING’ ಪ್ರಚಾರ ಮಾಡುವುದಿಲ್ಲ! 

ಹೀಗೆ ಸಾಯೋಣ-ಹೀಗೆಯೇ ಸಾಯೋಣ ಎಂದು ಸಾಯಲು ಸರಿಯಾದ ಮಾರ್ಗವಿದು ಎಂದವರ ನಾ ಕಾಣೆ. ಹೊರಡಲು ಪೂರ್ವ ತಯಾರಿ ಹಿೀಗಿರಲಿ ಎಂದು ಹೇಳಿ ಕೊಡುವವರಿಲ್ಲ.

ಸರಿಯಾದ ದಾರಿಯಲ್ಲಿ ಬದುಕುವುದು, ಪರರ ಕಷ್ಟದಲ್ಲಿ ನೆರವು ನೀಡುವುದು, ದಾರಿದೀಪವಾಗುವುದು, ಊರುಗೋಲಾಗುವುದು, ಮಕ್ಕಳಿಗೆ ಸದ್ವಿಚಾರ ನೀಡಿ ಬೆಳೆಸುವುದು... ಹೀಗೆ ಲೋಕೋಪಕಾರದ ಸನ್ನುಡಿಗಳನ್ನು ಹೆಜ್ಜೆಹೆಜ್ಜೆಗೂ ಕೇಳಿ ಅದನ್ನು ಅನುಸರಿಸುವ ನಮಗೆ ನಮ್ಮ ಜೀವನದ ಸಮಾರೋಪವು ಅರ್ಥಪೂರ್ಣವಾಗಬೇಕೆನ್ನುವ ಹಠ ಇದ್ದ ಹಾಗಿಲ್ಲ. ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇ ಬೇಕೆನ್ನುವ ವೇದಾಂತ ಮಾತನಾಡುವ ನಾವು ಅಂತ್ಯಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದನ್ನು ಮುಂದೂಡುತ್ತಲೇ ಬಂದಿದ್ದೇವೆ. ಸಿದ್ಧತೆ ನಡೆಸಿದ ಮಾತ್ರಕ್ಕೆ ಸಾವು ಓಡೋಡಿ ಬಂದು ಅಪ್ಪಿಕೊಂಡೀತೆನ್ನುವ ಭಯವೇ? ಇರಬಹುದು. ಎಲ್ಲಿಯಾದರೂ ಅಷ್ಟೇ, ಎಲ್ಲವೂ ಚೆನ್ನಾಗಿರುವಾಗ ನಾವು ನಾವಾಗಿ ಹೋಗಲು ಒಲ್ಲೆವು. ಇನ್ನು ಸಾಕು ಅಧಿಕಾರ ಎಂದು ಅಧಿಕಾರದಲ್ಲಿರುವಾಗಲೇ ಘೋಷಿಸಿದ ರಾಜಕಾರಣಿಗಳಿಲ್ಲವೋ ಹಾಗೆಯೇ ನಮ್ಮನ್ನು ನಾವು ಬಿಟ್ಟುಹೋಗಲು ಸಿದ್ಧತೆ ನಡೆಸಲು ಯಾರೂ ತಯಾರಿಲ್ಲ. ಈ ರಗಳೆಗಳು ಇನ್ನೂ ಸರಿಯಾಗಿ ಅರ್ಥವಾಗಲು ಸಹಾಯವಾಗಲೆಂದು ನಾನು ಇತ್ತೀಚಿನ ಒಂದು ಉದಾಹರಣೆಯನ್ನೇ ನಿಮಗೆ ಹೇಳುತ್ತೇನೆ.

ಅವರ ಹೆಸರು ರಘು. ವರ್ಷವೊಂದಕ್ಕೆ ಕನಿಷ್ಠ ಕೋಟಿ ರೂಪಾಯಿ ಆದಾಯ ತರುವ ಕೈಗಾರಿಕೆಯೊಂದರ ಮಾಲಕ. ಇವರಿಗೆ ನಾಲ್ವರು ಗಂಡು ಮಕ್ಕಳು. ಹೆಣ್ಣು ಮಕ್ಕಳಿಲ್ಲ. ಹೆಂಡತಿ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಗಂಡು ಮಕ್ಕಳು ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬಂತಿದ್ದರು. ಈ ನಾಲ್ವರು ಪರಸ್ಪರ ಕಿತ್ತಾಡದ ದಿನವಿಲ್ಲ. ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಇವರ ಹೊಡೆದಾಟವನ್ನು ನೋಡಿದ ರಘು ಪ್ರತಿಯೊಬ್ಬರಿಗೂ ಮದುವೆ ಮಾಡಿ ಪ್ರತ್ಯೇಕ ಮನೆಯನ್ನು ಕಟ್ಟಿಸಿಕೊಟ್ಟಿದ್ದರು. ನಾಲ್ವರಿಗೂ ಪ್ರತ್ಯೇಕ ವ್ಯಾಪಾರದ ಮಳಿಗೆಗಳನ್ನು ವ್ಯವಸ್ಥೆಗೊಳಿಸಿದ್ದರು. ಇಷ್ಟೆಲ್ಲ ಮಾಡಿದರೂ ನಾಲ್ವರಲ್ಲಿ ಯಾರೊಬ್ಬರ ಅಂಗಡಿಯೂ ಲಾಭ ತರಲೇ ಇಲ್ಲ. ಆದರೆ ರಘು ಅವರ ಬೃಹತ್ ಕೈಗಾರಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಹೋಯಿತು. ಸಹಜವಾಗಿಯೇ ನಾಲ್ವರು ಮಕ್ಕಳಿಗೂ ಅಪ್ಪನ ಕೈಗಾರಿಕೆ ತನಗೊಬ್ಬನಿಗೇ ಸಿಗಬೇಕು ಎನ್ನುವ ಮಹದಾಸೆ. ಮಕ್ಕಳು ಪರಸ್ಪರ ಎಷ್ಟು ದ್ವೇಷಿಸುತ್ತಲಿದ್ದರೆಂದರೆ ಅವರ ಹೆತ್ತ ತಾಯಿಯ ವಾರ್ಷಿಕ ಶ್ರಾದ್ಧಕ್ಕೆ ನಾಲ್ವರಲ್ಲಿ ಯಾರಾದರೊಬ್ಬರು ಮಾತ್ರವೇ ಹಾಜರಿರುತ್ತಿದ್ದರು! ತಮಗಾಗಿ ಇಷ್ಟೆಲ್ಲ ಶ್ರಮವಹಿಸಿ ವ್ಯವಸ್ಥೆಗೊಳಿಸಿದ ಅಪ್ಪಯ್ಯ ತನ್ನ ಮನೆಯಲ್ಲಿದ್ದು ನಿವೃತ್ತ ಜೀವನವನ್ನು ನಡೆಸಬೇಕು ಎಂದು ಒಬ್ಬನೂ ಆಶಿಸಲಿಲ್ಲ. ಮಕ್ಕಳಾದ ನಾವು ಊರಿನಲ್ಲೇ ಇದ್ದರೂ ಕೆಲಸದಾಳುಗಳು ಅಡುಗೆ ಮಾಡಿ ತಮ್ಮ ಅಪ್ಪಯ್ಯನಿಗೆ ಬಡಿಸುತ್ತಿರುವುದು ದುರದೃಷ್ಟಕರ ... ಮಕ್ಕಳಾದ ತಾವು ತಮ್ಮ ಕರ್ತವ್ಯವನ್ನು ಮರೆತಿದ್ದೇವೆಂದು ಯಾರೊಬ್ಬರಿಗೂ ಅನಿಸಲೇ ಇಲ್ಲ.

ಇದ್ದಕ್ಕಿದ್ದಂತೆ ರಘು ಆರೋಗ್ಯ ಕೈಕೊಟ್ಟಿತು. ಆಸ್ಪತ್ರೆಗೆ ಭರ್ತಿಯಾದರು. ರೋಗಿಯ ಕಿಡ್ನಿ ಮತ್ತು ಲಿವರ್ ವೈಫಲ್ಯದ ಮಾಹಿತಿಯನ್ನು ವೈದ್ಯರು ಮಕ್ಕಳಿಗಷ್ಟೇ ಹೇಳಿದರು. ಮಕ್ಕಳು ಈ ಸುದ್ದಿಯನ್ನು ತಂದೆಗೆ ಹೇಳಲು ಹಿಂಜರಿದರು. ಆಸ್ಪತ್ರೆಗೆ ಧಾವಿಸಿದ ಸಂಬಂಧಿಕರಲ್ಲಿ ತೀರಾ ಆಪ್ತರಾದ ಒಬ್ಬಿಬ್ಬರು ‘‘ವೀಲುನಾಮೆ (will) ಬರೆದಿದ್ದೀರಾ? ಬರೆದಿಲ್ಲವಾದರೆ ತಡಮಾಡಬೇಡಿ. ನಿಮ್ಮ ಎದುರಿನಲ್ಲಿಯೇ ಕಚ್ಚಾಡುತ್ತಿರುವ ಮಕ್ಕಳು ನಿಮ್ಮ ನಂತರ ತಲವಾರು ಹಿಡಿದುಕೊಂಡು ತಿರುಗಾಡಿಯಾರು’’ ಎಂದು ನೇರವಾಗಿ ಹೇಳಿದರು.

ಇವೆಲ್ಲವನ್ನು ಕೇಳಿಸಿಕೊಂಡ ರಘು ಆಸ್ಪತ್ರೆಯಿಂದ ಮರಳಿದ ನಂತರ ‘‘ಈ ಸಲ ಮೊದಲು ಅದನ್ನೇ ಮಾಡ್ತೇನೆ. ಇಷ್ಟು ದಿನ ವಹಿವಾಟಿನ ಒತ್ತಡದಿಂದ ಈ ಬಗ್ಗೆ ನಿರ್ಧಾರಕ್ಕೆ ಬರದೇ ಆಸ್ತಿಯ ವಿಲೇವಾರಿ ಮಾಡದೆಯೇ ದಿನ ಕಳೆದೆ. ಈ ಸಲ ಖಂಡಿತ ಮಾಡುತ್ತೇನೆ’’ ಎಂದರು.

ಲೆಕ್ಕಾಚಾರ ತಲೆಕೆಳಗಾಯಿತು. ರಘು ಹೆಚ್ಚು ದಿನ ಉಳಿಯಲಿಲ್ಲ. ರೋಗ ಉಲ್ಭಣಿಸಿತು. ಉಸಿರಾಟ ನಿಂತಿತು. ಅಂತ್ಯಸಂಸ್ಕಾರಕ್ಕೆ ಮೊದಲೇ ಮಕ್ಕಳ ಕಾದಾಟ ಆರಂಭವಾಯಿತು. ಕೋಟಿ ಲಾಭ ತರುತ್ತಿದ್ದ ಕೈಗಾರಿಕೆ ಮುಂದಿನ ನಾಲ್ಕೇ ತಿಂಗಳುಗಳ ಒಳಗೆ ಮುಚ್ಚಿಹೋಯಿತು. ಆಸ್ತಿ ವಿವಾದ ಪೊಲೀಸ್ ಸ್ಟೇಷನ್ ಮತ್ತು ಕೋರ್ಟಿನ ಮೆಟ್ಟಿಲು ಹತ್ತಿತು. ನಾಲ್ವರು ಮಕ್ಕಳಿಗೂ ಸ್ವತಂತ್ರವಾದ ಮನೆಯನ್ನು ಕಟ್ಟಿ ವಾಸಕ್ಕೆ ನೀಡಿದ್ದ ರಘು ಆ ಎಲ್ಲ ಮನೆಗಳ ಮಾಲಕತ್ವವನ್ನು ತಾನೇ ಉಳಿಸಿಕೊಂಡಿದ್ದರು.

ಇದಕ್ಕಿಂತ ದುರಂತ ಇನ್ನೇನು ಬೇಕು? ಬಹುಕೋಟಿಗಳ ಪಿತ್ರಾರ್ಜಿತ ಆಸ್ತಿಯನ್ನು ಜಂಟಿಯಾಗಿ ಹೊಂದಿರುವ ನಾಲ್ವರು ಸಹೋದರರು ಈಗ ಕಾಣಸಿಗುವುದು ವಕೀಲರ ಆಫೀಸುಗಳಲ್ಲಿ. ಒಂದು ವೇಳೆ ರಘು ತನ್ನ ಜೀವಿತಾವಧಿಯಲ್ಲಿಯೇ ತನ್ನ ಆಸ್ತಿಪಾಸ್ತಿಗಳ ವಿಲೇವಾರಿಯನ್ನು ಕಾನೂನು ಪ್ರಕಾರ ಮಾಡಿರುತ್ತಿದ್ದರೆ ಮಕ್ಕಳಿಗೆ ಕಿತ್ತಾಡಲು ಅವಕಾಶವೇ ಇರುತ್ತಿರಲಿಲ್ಲ. ತಾನು ಆರೋಗ್ಯವಂತನಾಗಿರುವಾಗಲೇ ತನ್ನ ಆಸ್ತಿಯನ್ನು ಐದು ಭಾಗಗಳಾಗಿ ವಿಭಜಿಸಿ ತಾನೂ ಒಂದು ಪಾಲನ್ನು ಉಳಿಸಿಕೊಂಡು ಜೀವನದ ಸಂಜೆಯನ್ನು ನೆಮ್ಮದಿಯಲ್ಲಿ ಕಳೆಯಲು ಇರುವ ಆಯ್ಕೆಯನ್ನು ರಘು ತನ್ನದಾಗಿಸಿಕೊಳ್ಳಲಿಲ್ಲ. ವ್ಯವಸ್ಥಾ ಪತ್ರವನ್ನು (settlement deed) ನೋಂದಾಯಿಸಿ ಮಾಲಕತ್ವ ನೀಡಿದರೆ ತಾವು ಪಡೆದ ಪಾಲನ್ನು ಮಕ್ಕಳು ಮಾರಾಟ ಮಾಡಿ ಮೋಜು ಮಾಡುತ್ತಾರೆ ಎನ್ನುವ ಭೀತಿ ಅಥವಾ ಕಾಳಜಿ ಇದ್ದರೆ ಪಡೆದ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ತನ್ನ ಜೀವಿತಾವಧಿಯಲ್ಲಿ ಮಾರಾಟ ಮಾಡುವಂತಿಲ್ಲ ಎನ್ನುವ ನಿಷೇಧವನ್ನು ಹೇರಲು ಕೂಡಾ ರಘು ಅವರಿಗೆ ಅವಕಾಶವಿತ್ತು. ಇದೂ ಬೇಡ ಎಂದಾದರೆ ವ್ಯವಸ್ಥಾ ಪತ್ರದ ಬದಲು ವೀಲುನಾಮೆ (will) ನೋಂದಾಯಿಸಿ ತನ್ನ ಮರಣಾನಂತರವೂ ಎಲ್ಲವೂ ಸುಖಾಂತ್ಯಗೊಳಿಸಲು ಅವಕಾಶವಿತ್ತು. ಆದರೆ ಅರ್ಥಪೂರ್ಣ ವಿದಾಯದ ಬಗ್ಗೆ ಕಿಂಚಿತ್ತು ಯೋಚಿಸದೆ ತನ್ನ ಬೃಹತ್ ಆಸ್ತಿಯೇ ತನ್ನ ಕುಟುಂಬದಲ್ಲಿ ಕಲಹಕ್ಕೂ, ವಿನಾಶಕ್ಕೂ ಹೇತುವಾಗಬಹುದು ಎನ್ನುವ ದೂರದೃಷ್ಟಿ ಹೊಂದಿರದೇ ಇರುವುದರಿಂದ ರಘು ಆಸ್ತಿ ನರಿನಾಯಿ ತಿನ್ನುವಂತಾಯಿತು. ಈ ಉದಾಹರಣೆ ಕಾಲ್ಪನಿಕವಲ್ಲ. ಇಂತಹ ಘಟನೆಗಳು ನಮ್ಮ ಅಕ್ಕಪಕ್ಕದಲ್ಲಿಯೇ ಘಟಿಸುತ್ತಲೇ ಇರುತ್ತವೆ. ಕೆಲವೊಮ್ಮೆ ನಮ್ಮ ಮನೆಯೊಳಗೂ!

ಹೀಗೊಂದು ಸ್ಯಾಂಪಲ್ ಪ್ರಕರಣ: ರಾಮರಾವ್ ಮಧ್ಯಮವರ್ಗದ ಕುಟುಂಬವೊಂದರ ಯಜಮಾನ. ನಿವೃತ್ತ ಸರಕಾರಿ ಉದ್ಯೋಗಿ. ವೀಲುನಾಮೆಯನ್ನು ರಿಜಿಸ್ಟರ್ ಮಾಡಿದ್ದಾರೆ. ಈ ಬಗ್ಗೆ ಅವರ ಹೆಂಡತಿ ಮಕ್ಕಳಿಗೂ ಅರಿವು ಇದೆ. ರಾಮರಾಯರಿಗಾಗಲೀ ಅವರ ಕುಟುಂಬದ ಸದಸ್ಯರಿಗಾಗಲೀ ಆಸ್ತಿಯ ಪಾಲಿನ ಆತಂಕ ಕಾಡುವುದಿಲ್ಲ. ವರ್ಷಕ್ಕೊಮ್ಮೆ ನಾರ್ತ್ ಇಂಡಿಯಾ ಟೂರ್ ಹೋಗಿ ಬರುತ್ತಿದ್ದ ರಾಯರ ಕುಟುಂಬ ಮೊನ್ನೆ ದುಬೈ ವಿಸಿಟ್ ಮಾಡಿ ಬಂದಿದ್ದಾರೆ. ಮಕ್ಕಳು ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ರಾುರಿಗೂ ಮಕ್ಕಳ ಬಗ್ಗೆ ಅಭಿಮಾನವಿದೆ.

ಮೂರನೇ ಉದಾಹರಣೆ ತೀರಾ ವಿಭಿನ್ನ. ಮುಸ್ಲಿಂ ಉದ್ಯಮಿಯೊಬ್ಬರ ಮನೆಗೆ ಆದಾಯ ತೆರಿಗೆಯವರು ದಾಳಿ ನಡೆಸಿದರು. ತಲಾಶ್ ಮಾಡುವಾಗ ಮನೆಯ ಹಾಲ್‌ನ ಕನ್ನಡಿ ಕಪಾಟಿನ ಒಳಗೊಂದು ಬಿಳಿಯ ಬಟ್ಟೆಯನ್ನು ನೀಟಾಗಿ ಮಡಿಸಿ ಇರಿಸಲಾಗಿರುವುದನ್ನು ಗಮನಿಸಿದರು. ಅದೇನೆಂದು ಕೇಳಿದ ಸುಂಕದವರಿಗೆ ಬಹುಕೋಟಿಗಳ ಒಡೆಯಹೇಳಿದರಂತೆ: ‘‘ಅದು ಶವವಸ್ತ್ರ. ನಾನು ಸತ್ತರೆ ನನಗೆ ಹೊದಿಸಲು ಬೇಕೆಂದು ತಂದಿರಿಸಿದ್ದೇನೆ. ಮನೆಯವರಿಗೂ ಈ ಬಗ್ಗೆ ಹೇಳಿದ್ದೇನೆ...’’

ಐವತ್ತರ ಹರೆಯದ ಉದ್ಯಮಿಯದು ಇದೆಂಥ ತಯಾರಿ! ಈ ರೀತಿ ಮನೆಯ ಶೋಕೇಸ್‌ನಲ್ಲಿ ಶವವಸ್ತ್ರ ತಂದಿಟ್ಟು ಸುಖೀಜೀವನ ನಡೆಸುವುದನ್ನು ಪ್ರಬುದ್ಧತೆ ಎನ್ನೋಣವೇ ಅಥವಾ ವೈರಾಗ್ಯ ಎನ್ನೋಣವೇ? ಶವವಸ್ತ್ರವನ್ನೇ ತಯಾರು ಇಟ್ಟುಕೊಂಡವರು ತಮ್ಮ ಆಸ್ತಿ ಪಾಸ್ತಿ - ಸಾಲ ಸೋಲಗಳ ಪಕ್ಕಾ ನಿರ್ವಹಣೆಯನ್ನೇ ಮಾಡಿರಬಹುದಲ್ಲವೇ? ‘‘ಸಾವು ನೋಟಿಸ್ ಕೊಟ್ಟು ಬರುವುದಿಲ್ಲ. ನಾನು ಸತ್ತಾಗ ನನ್ನ ಮನೆ ಮಂದಿ ಮುಂದೇನು ಎಂದು ದಿಕ್ಕು ತೋಚದೇ ಅಳುವಂತಾಗಬಾರದು. ನನ್ನ ನಂತರ ನನ್ನ ಉದ್ಯಮವನ್ನು ಯಾರು, ಹೇಗೆ ಮುನ್ನಡೆಸಬೇಕು ಎನ್ನುವುದನ್ನು ಸ್ವಷ್ಟವಾಗಿಸಬೇಕು. ಹೀಗೆ ಮಾಡದೆ ಇದ್ದರೆ ನಮ್ಮ ಸಂಸ್ಥೆಯನ್ನು ನಂಬಿರುವ ನೂರಾರು ಸಿಬ್ಬಂದಿಯ ಕುಟುಂಬಗಳೂ ಅನಾಥವಾಗಬಹುದು. ಹಾಗಾಗಬಾರದು. ಅದಕ್ಕಾಗಿ ಎಲ್ಲವನ್ನೂ ಲಿಖಿತರೂಪದಲ್ಲಿ ದಾಖಲಿಸಿದ್ದೇನೆ...’’ ಎನ್ನುತ್ತಾರವರು

ಈ ಲೇಖನದ ಎರಡನೇ ಪ್ರಕರಣದಲ್ಲಿ ಆಸ್ತಿಯಲ್ಲಿ ಪಾಲು-ವಸೂಲು ಮಾಡಿಕೊಳ್ಳುವ ಸ್ಪರ್ಧೆಯಿಲ್ಲ. ಅಣ್ಣ ತಮ್ಮಂದಿರು ಪ್ರತಿವಾದಿಗಳಾಗುವ ಪ್ರಮೇಯವಿಲ್ಲ. ಹೀಗಾಗಿ ಸಂಬಂಧಗಳು ಬಣ್ಣಗೆಡುವುದಿಲ್ಲ. ಮೂರನೇ ಪ್ರಕರಣವಂತೂ ದೈವಿಕವೆನಿಸುತ್ತದೆ. ವಯಸ್ಸು ಎಂಬತ್ತು ತೊಂಬತ್ತಾಗುವುದಕ್ಕೆ ಕಾಯದೆ ಅರ್ಧ ಸೆಂಚುರಿ ದಾಟಿದಂತೆ, ಸಂಪಾದಿಸಿರುವ ಆಸ್ತಿಯ ವಿಲೇವಾರಿ ಹಾಗೂ ಮಾಡಿರುವ ಸಾಲದ ಬಗ್ಗೆ ಮಾಹಿತಿಯನ್ನು ಬರವಣಿಗೆಯಲ್ಲಿ ನಮ್ಮ ಉತ್ತಾರಾಧಿಕಾರಿಗಳಿಗೆ ಮನವರಿಕೆ ಮಾಡುವುದು ಪ್ರಾಕ್ಟಿಕಲ್ ಅನಿಸುತ್ತದೆ. ದಿನ ಕಳೆದಂತೆ ಹೆಚ್ಚುತ್ತಿರುವ ಆಸ್ತಿ ವಿವಾದಗಳನ್ನು ಗಮನಿಸುವಾಗ ಇದನ್ನೆಲ್ಲ ನಾವು ನಮ್ಮ ಮನೆಗೆ ತಂದುಕೊಳ್ಳಬಾರದು ಎಂದು ನಿರ್ಧರಿಸು ವಾಗ ಇದೆಲ್ಲವೂ ನೆನಪಾಯಿತು.

Writer - ರಾಜು, ಮೂಡುಬಿದಿರೆ

contributor

Editor - ರಾಜು, ಮೂಡುಬಿದಿರೆ

contributor

Similar News