ಮುಖ್ಯಮಂತ್ರಿಗಳು ಮೆಟ್ರೋ ಬಳಸಲಿ

Update: 2018-06-19 18:35 GMT

ಮಾನ್ಯರೇ,
ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ನಿತ್ಯ ಜೆ. ಪಿ. ನಗರದಿಂದ ವಿಧಾನಸೌಧಕ್ಕೆ ಬರುವುದು ಮತ್ತು ವಿಧಾನ ಸೌಧದಿಂದ ಮನೆಗೆ ಹೋಗುವ ವೇಳೆಯಲ್ಲಿ, ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಮುಖ್ಯಮಂತ್ರಿಗಳ ವಾಹನಮುಕ್ತ ಸಂಚಾರಕ್ಕಾಗಿ ಸಿಗ್ನಲ್ ರಹಿತ ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ಪ್ರತಿ ದಿನ ಸಾವಿರಾರು ನಾಗರಿಕರಿಗೆ ತೊಂದರೆಯಾಗುತ್ತಿದೆ. ಜೆಸಿ ರಸ್ತೆ, ಜಯನಗರದ ರಸ್ತೆಗಳು, ಊರ್ವಶಿ ಚಿತ್ರಮಂದಿರದ ರಸ್ತೆ ಮುಂತಾದ ಕಡೆಗಳಲ್ಲಿ ಪ್ರತಿ ನಿತ್ಯ ಈ ಸಮಸ್ಯೆಯ ತೀವ್ರತೆಯನ್ನು ಕಾಣಬಹುದು.

ಹಾಗಾಗಿ ಮುಖ್ಯಮಂತ್ರಿಗಳು ಪ್ರತಿದಿನ ಬೆಂಗಳೂರಿನಲ್ಲಿರುವ ಸಂದರ್ಭದಲ್ಲಿ ವಿಧಾನಸೌಧದಿಂದ ಜಯನಗರದ ಆರ್.ವಿ. ನಿಲ್ದಾಣ ಅಥವಾ ಬನಶಂಕರಿಯ ಹೊರಗೆ ಹೋಗುವಾಗ ಮತ್ತು ಬರುವಾಗ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದರೆ ಇದರಿಂದ ಪ್ರತಿದಿನ ವಾಹನ ಸವಾರರಿಗೆ ಆಗುವ ತೊಂದರೆ ತಪ್ಪುತ್ತದೆ ಮತ್ತು ಮುಖ್ಯಮಂತ್ರಿಗಳಿಗೂ ಸಮಯ ಉಳಿಯುತ್ತದೆ. ಅದಕ್ಕಿಂತ ಮಿಗಿಲಾಗಿ ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಒಂದು ಮಾದರಿ ಬದಲಾವಣೆಯಾಗುತ್ತದೆ. ಹಾಗೆಯೇ ಮಂತ್ರಿಗಳು ಕೂಡಾ ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಕಾರ್ಯಕ್ರಮಗಳಿಗೆ ಹೋಗುವಾಗ ಮೆಟ್ರೋ ರೈಲಿನ ಬಳಕೆಯನ್ನು ಮಾಡಿದರೆ ಸಮಯವೂ ಉಳಿಯುತ್ತದೆ, ಅನವಶ್ಯಕವಾದ ಖರ್ಚು ಉಳಿಯುತ್ತದೆ. ನಮ್ಮ ಜನಪ್ರತಿನಿಧಿಗಳು ಆದಷ್ಟು ಹೆಲಿಕಾಪ್ಟರ್‌ಗಳ ಬಳಕೆಯನ್ನು ಕಡಿಮೆ ಮಾಡಿ ಸಮೂಹ ಸಂಚಾರ ವ್ಯವಸ್ಥೆಯಲ್ಲಿ (ಬಸ್ಸು, ರೈಲುಗಳಲ್ಲಿ) ಸಂಚರಿಸಿದರೆ ರಾಜ್ಯಕ್ಕೆ ಒಂದಷ್ಟು ಉಳಿತಾಯವಾಗುತ್ತದೆ ಮತ್ತು ಜನರಲ್ಲಿ ವಿಶ್ವಾಸವೂ ಮೂಡುತ್ತದೆ.
 

Similar News