ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಯಿಂದ ಹೊರಬಂದ ಅಮೆರಿಕ

Update: 2018-06-20 04:59 GMT
ನಿಕ್ಕಿ ಹಾಲೆ

ವಾಷಿಂಗ್ಟನ್, ಜೂ. 20: ಮಾನವಹಕ್ಕು ವಿಚಾರದಲ್ಲಿ ಇಸ್ರೇಲ್ ವಿರುದ್ಧ ತೀವ್ರ ಪಕ್ಷಪಾತ ಧೋರಣೆ ಪ್ರದರ್ಶಿಸಲಾಗುತ್ತಿದೆ ಎಂದು ಅಮೆರಿಕ ಆಪಾದಿಸಿದೆ. ಜತೆಗೆ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯಿಂದ ಹೊರ ನಡೆದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಮಾನವಹಕ್ಕು ಹೋರಾಟ ಕಷ್ಟಕರವಾಗಲಿದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹಾಲೆ, ಮಂಡಳಿಯಲ್ಲಿ ಸುಧಾರಣೆ ತರುವ ಅಮೆರಿಕ ಪ್ರಯತ್ನಗಳಿಗೆ ರಷ್ಯಾ, ಚೀನಾ, ಕ್ಯೂಬಾ ಮತ್ತು ಈಜಿಪ್ಟ್ ಅಡ್ಡಿಪಡಿಸುತ್ತಿವೆ ಎಂದು ಆಪಾದಿಸಿದ್ದಾರೆ. ಅಮೆರಿಕದ ಮೌಲ್ಯವನ್ನು ಗೌರವಿಸುವ ಕೆಲ ದೇಶಗಳು ಕೂಡಾ ವಾಷಿಂಗ್ಟನ್‌ಗೆ ಉತ್ತೇಜನ ನೀಡಿವೆ. ಆದರೆ ಯಥಾಸ್ಥಿತಿಯನ್ನು ಪ್ರಶ್ನಿಸುವ ಇಚ್ಛೆ ಹೊಂದಿಲ್ಲ ಎಂದು ಹಾಲೆ ಟೀಕಿಸಿದರು.

47 ಸದಸ್ಯರ ಜಿನೀವಾ ಮೂಲದ ಈ ಮಂಡಳಿಯಿಂದ ಹೊರಬರುವ ಬಗ್ಗೆ ಟ್ರಂಪ್ ಆಡಳಿತ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಮೂರು ವರ್ಷಗಳ ಅಮೆರಿಕದ ಸದಸ್ಯತ್ವ ಅವಧಿಯಲ್ಲಿ ಇನ್ನೂ ಒಂದೂವರೆ ವರ್ಷ ಬಾಕಿ ಇದೆ.

"ಮಂಡಳಿಯ ಸದಸ್ಯತ್ವವನ್ನು ನೋಡಿ. ಬಹುತೇಕ ಮೂಲಭೂತ ಹಕ್ಕುಗಳಿಗೇ ಅಗೌರವ ತೋರಲಾಗುತ್ತಿದೆ" ಎಂದು ಹಾಲೆ ಕಿಡಿಕಾರಿದರು. ವೆನೆಜುವೆಲಾ, ಚೀನಾ, ಕ್ಯೂಬಾ ಹಾಗೂ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ ಸದಸ್ಯತ್ವವನ್ನು ಹಾಲೆ ಉಲ್ಲೇಖಿಸಿದರು. ಇಸ್ರೇಲ್ ಬಗೆಗೆ ದ್ವೇಷ ಭಾವನೆ ನಿರಂತರವಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ಮಾನವ ಹಕ್ಕುಗಳ ವಿಚಾರವಲ್ಲ ಎಂದು ಹಾಲೆ ಸ್ಪಷ್ಟಪಡಿಸಿದರು.

ಈಗಾಗಲೇ ಪ್ಯಾರೀಸ್ ಹವಾಮಾನ ಒಪ್ಪಂದ ಹಾಗೂ 2015ರ ಇರಾನ್ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕ ಹೊರಬಂದಿದೆ. ಅಮೆರಿಕ- ಮೆಕ್ಸಿಕೊ ಗಡಿಯಲ್ಲಿ ವಲಸೆ ಪೋಷಕರಿಂದ ಅವರ ಮಕ್ಕಳನ್ನು ಬೇರ್ಪಡಿಸಿ ಬಂಧನದಲ್ಲಿಟ್ಟಿರುವ ಬಗ್ಗೆ ಕೂಡಾ ಅಮೆರಿಕ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿವೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್ ಝಿಯಾದ್ ರಾದ್ ಅಲ್ ಹುಸೈನ್ ಅವರು, ಅಮೆರಿಕ ತನ್ನ ಅಸಂಯಮ ನೀತಿಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News