ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ?

Update: 2018-06-20 13:08 GMT

ಬೆಂಗಳೂರು, ಜೂ. 20: ‘ನನ್ನ ಮನೆಯಲ್ಲಿ ಸಿಕ್ಕಿದ್ದ ಹಣ ನನ್ನದಲ್ಲ, ಆ ಹಣ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದು’ ಎಂಬ ಕರ್ನಾಟಕ ಭವನದ ಮಾಜಿ ಸಂಪರ್ಕಾಧಿಕಾರಿ ಆಂಜನೇಯ ಹೇಳಿಕೆ, ಜಲಸಂಪನ್ಮೂಲ ಸಚಿವ ಶಿವಕುಮಾರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಆದರೆ, ‘ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಐಟಿ ವಿಚಾರಣೆಗೆ ಹಾಜರಾಗುತ್ತೇನೆ, ಈಗ ನಾನೂ ಏನೂ ಮಾತನಾಡುವುದಿಲ್ಲ. ಸೂಕ್ತ ಸಮಯ ಬಂದಾಗ ನಾನೂ ಎಲ್ಲವನ್ನು ಹೇಳುತ್ತೇನೆ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಬಿಜೆಪಿ, ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದು, ಅವರೇಕೆ ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ ರಾಜಕೀಯದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.

ಈ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ‘ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕು’ ಎಂದು ಗೌಡರು ಸಲಹೆ ಮಾಡಿದ್ದಾರೆಂದು ಗೊತ್ತಾಗಿದೆ.

ಏನಿದು ಪ್ರಕರಣ: ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಸಂದರ್ಭದಲ್ಲಿ ದಿಲ್ಲಿಯಲ್ಲಿ ಅವರ ಆಪ್ತರ ನಿವಾಸಗಳ ಮೇಲೆಯೂ ದಾಳಿ ನಡೆಸಲಾಗಿತ್ತು. ಆ ವೇಳೆ ಸುಮಾರು 12ಕೋಟಿ ರೂ.ಗಳಷ್ಟು ಅಧಿಕ ಮೊತ್ತದ ಹಣ ಪತ್ತೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಆಪ್ತರೆನ್ನಲಾದ ರಾಜೇಂದ್ರ, ಸುನೀಲ್ ಶರ್ಮಾ, ಆಂಜನೇಯ ಐಟಿ ಅಧಿಕಾರಿಗಳಿಗೆ ವಿಭಿನ್ನ ಹೇಳಿಕೆ ನೀಡಿದ್ದರು. ಆದರೆ, ಅವರು ಇದೀಗ ದಾಳಿ ನಡೆದ 7 ತಿಂಗಳ ಬಳಿಕ ಲಿಖಿತ ಪತ್ರದ ಮೂಲಕ ಐಟಿಗೆ ಮತ್ತೊಂದು ಹೇಳಿಕೆ ನೀಡಿದ್ದು, ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ದಿಲ್ಲಿಯ ನಾಲ್ಕು ಫ್ಲಾಟ್‌ಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ 8.56 ಕೋಟಿ ರೂ.ಹಣ ಪತ್ತೆಯಾಗಿತ್ತು. ಶರ್ಮಾ ಟ್ರಾನ್ಸ್‌ಫೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆ ಮೇಲೆ ನಡೆದ ದಾಳಿ ವೇಳೆ ಡೈರಿ, ಕೆಲ ಟಿಪ್ಪಣಿಗಳು ಸಿಕ್ಕಿದ್ದವು. ಅದರಲ್ಲಿ ಕೆಲ ಕೋಡ್ ವರ್ಡ್‌ಗಳಿದ್ದವು.
ಇದೀಗ ತನಿಖೆಯಿಂದ ಅವುಗಳ ಮೂಲ ಗೊತ್ತಾಗಿದ್ದು, ಆ ಪೈಕಿ 5 ಕೋಟಿ ರೂ. ಮುಳಗುಂದ ಎಂಬವರ ಮೂಲಕ ಎಐಸಿಸಿಗೆ ಕಳುಹಿಸಿಕೊಟ್ಟ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಣವನ್ನು ಶಿವಕುಮಾರ್ ಸೂಚನೆ ಮೇರೆಗೆ ಪಾವತಿಸಿದ್ದು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News