ಗೌರಿಬಿದನೂರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-20 13:40 GMT

ಬೆಂಗಳೂರು, ಜೂ. 20: ಗೌರಿಬಿದನೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ವಿಜ್ಞಾನ ಕೇಂದ್ರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ವಿಜ್ಞಾನ ಪ್ರಚಾರಕ್ಕೆ ಶ್ರಮಿಸಿದ ಡಾ.ಎಚ್.ನರಸಿಂಹಯ್ಯ ಅವರ ನೆನಪಿಗಾಗಿ ಗೌರಿಬಿದನೂರು ಪಟ್ಟಣದಲ್ಲಿರುವ 200ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ರೈತರು, ಡಿಆರ್‌ಡಿಐ ಮತ್ತು ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಹಯೋಗ ಪಡೆಯುವುದು ಹಾಗೂ ಕೇಂದ್ರಕ್ಕೆ ಅಗತ್ಯವಿರುವ ಜಾಗ ಒದಗಿಸುವುದು. ವಿದ್ಯಾರ್ಥಿಗಳಿಗೆ ವಿಜ್ಞಾನ ತಿಳಿಸಲು ಪ್ರಯೋಗಾಲಯ ಮಾದರಿಯಲ್ಲಿ ಅಭಿವೃದ್ದಿ ಪಡಿಸುವುದರ ಕುರಿತು ಆಯೋಗದೊಂದಿಗೆ ಚರ್ಚಿಸಿದ ಅವರು, ವಿಜ್ಞಾನ ಕೇಂದ್ರದ ರೂಪುರೇಷೆ ಕುರಿತು ವಿಸ್ತೃತ ವರದಿ ನೀಡಲು ಐಐಎಸ್‌ಸಿ ವಿಜ್ಞಾನಿ ಕೆಪಿಜೆ ರೆಡ್ಡಿ ಅವರಿಗೆ ಕೋರಿದ್ದೇವೆ ಎಂದರು.

ಸಭೆಯಲ್ಲಿ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಕೆಪಿಜೆ ರೆಡ್ಡಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸಿಎಂ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News