ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರೋಧಿಸಿ ಸಿಪಿಐ ಪ್ರತಿಭಟನೆ

Update: 2018-06-20 13:45 GMT

ಬೆಂಗಳೂರು, ಜೂ.20: ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳ ಮಾಡುವ ಮೂಲಕ ಜನವಿರೋಧಿ ಸರಕಾರವೆಂದು ಸಾಬೀತು ಪಡಿಸುತ್ತಿದೆ. ಕೇಂದ್ರ ಸರಕಾರದ ಅವೈಜ್ಞಾನಿಕ ಹಾಗೂ ಪಕ್ಷಪಾತ ನೀತಿಯಿಂದಾಗಿ ರೈತ, ಕಾರ್ಮಿಕ ವರ್ಗ ಸಮಸ್ಯೆಗಳಿಂದ ನರಳುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದು ಜನ ಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ ಎಂದು ತಿಳಿಸಿದರು.

ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 47.04ರೂ ಇದೆ, ಡೀಸೆಲ್ 54.33ರೂ, ಶ್ರೀಲಂಕಾದಲ್ಲಿ ಪೆಟ್ರೋಲ್ 48.94, ಡಿಸೇಲ್ 39.74 ಇದ್ದು, ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಭಾರತದಲ್ಲಿ ಮಾತ್ರ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ದರವನ್ನು ಹೆಚ್ಚಿಸುತ್ತಲೇ ಹೋಗಿದೆ ಎಂದು ಅವರು ಕಿಡಿಕಾರಿದರು.

ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಅಬಕಾರಿ ಸುಂಕವು ಕ್ರಮವಾಗಿ ಶೇ.205 ಮತ್ತು ಶೇ.430ರಷ್ಟು ಹೆಚ್ಚಾಗಿದ್ದು, ಇದರಿಂದಾಗಿ ಕೇಂದ್ರ ಸರಕಾರಕ್ಕೆ ನೇರವಾಗಿ ಸುಮಾರು 7ಲಕ್ಷ ಕೋಟಿ ರೂ.ಅಧಿಕ ಆದಾಯ ಲಭಿಸಿದೆ. ಈ ಹಣವನ್ನು ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಮಾಡಲು ಉಪಯೋಗಿಸುತ್ತಿದೆ. ಹೀಗಾಗಿ ಕೇಂದ್ರ ಸರಕಾರ ಜನ ಸಾಮಾನ್ಯರ ವಿರೋಧಿಯಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಜಾರಿಯಲ್ಲಿರುವ ಡೈನಾಮಿಕ್ ಪ್ರೈಸಿಂಗ್ ಕ್ರಮವನ್ನು ರದ್ದುಗೊಳಿಸಬೇಕೆಂದು ಮತ್ತು ಆಡ್ಮಿನಿಸ್ಟರ್ಡ್‌ ಪ್ರೈಸಿಂಗ್ ಪದ್ಧತಿಯನ್ನು ಅನ್ವಯವಾಗುವಂತೆ ತೈಲ ದರದ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಶೇ.50ಕ್ಕಿಂತ ಹೆಚ್ಚು ಕಡಿತಗೊಳಿಸಿ 2014ರ ಸ್ಥಿತಿಗೆ ಮರಳಿಸಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಬಿನಯ್ ವಿಶ್ವಮ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಬಾಬು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News