20 ನಿಮಿಷ ಮೊದಲು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು: ವಿಟಿಯು ಆದೇಶ

Update: 2018-06-20 14:00 GMT

ಬೆಂಗಳೂರು, ಜೂ.20: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ರಾಜ್ಯದ ಎಲ್ಲ ಅನುದಾನಿತ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಪರೀಕ್ಷೆಗೆ 20 ನಿಮಿಷ ಮೊದಲೇ ಹಾಜರಿರಬೇಕು ಎಂದು ಆದೇಶ ಹೊರಡಿಸಿದೆ.

ಪರೀಕ್ಷೆ ಬರೆಯುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಡ್ಡಾಯವಾಗಿ 20 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ವಿಟಿಯು ಆದೇಶ ಹೊರಡಿಸಿದೆ. ಅದರ ಪ್ರಕಾರ ಪರೀಕ್ಷೆಗೆ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯುವ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಕುರಿತು ತನ್ನ ಅಧೀನದಲ್ಲಿ ಬರುವ ಎಲ್ಲ ಅನುದಾನಿತ ಕಾಲೇಜುಗಳಿಗೂ ವಿಟಿಯು ಸುತ್ತೋಲೆ ನೀಡಿದೆ.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಿಟಿಯು ಅಧಿಕಾರಿಗಳು ವಿಶ್ವವಿದ್ಯಾಲಯಗಳ ಪ್ರಾಧಿಕಾರ ಈ ಬಗ್ಗೆ ಗಂಭೀರ ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದೆ. ಪರೀಕ್ಷೆಗಳನ್ನು ಗಂಭೀರವಾಗಿ ಮತ್ತು ಕಠಿಣವಾಗಿ ಆಯೋಜನೆ ಮಾಡಲು ನಿರ್ಧರಿಸಿದೆ. ಇತ್ತೀಚೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕೇಳಿಬಂದಿದೆ. ಹೀಗಾಗಿ, ಪ್ರಾಧಿಕಾರ ಇಂತಹ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ವಿಟಿಯು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ತಡವಾಗಿ ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿರುವ ಕುರಿತು ನಮಗೆ ಶಂಕೆ ವ್ಯಕ್ತವಾಗಿದೆ. ಆ ಕಾಣದಿಂದಾಗಿ ಪರೀಕ್ಷೆ ಆರಂಭವಾಗುವ 20 ನಿಮಿಷ ಮೊದಲು ಪರೀಕ್ಷಾ ಕೇಂದ್ರಕ್ಕೆ ಬರಬೇಕು, ಇಲ್ಲದಿದ್ದರೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ.

ಬೆಂಗಳೂರು ನಗರ ಸೇರಿದಂತೆ ಟ್ರಾಫಿಕ್ ಮತ್ತು ಇನ್ನಿತರೆ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಅರ್ಧಗಂಟೆ ಸಮಯ ನೀಡುವಂತೆ ಕೇಳುತ್ತಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಗಳನ್ನು ಹತ್ತಿಕ್ಕಲು ಕಠಿಣ ನಿರ್ಧಾರ ಅಗತ್ಯ. ಹೀಗಾಗಿ, ವಿದ್ಯಾರ್ಥಿಗಳು ಬೇಗ ಮನೆಯಿಂದ ಹೊರಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News