ಖಾಸಗಿ ವನ್ಯಜೀವಿ ಸಂರಕ್ಷಣಾಲಯ ರಚನೆಗೆ ಸಿದ್ಧತೆ

Update: 2018-06-20 14:21 GMT

ಬೆಂಗಳೂರು, ಜೂ.20: ರಾಜ್ಯದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಅಥವಾ ಕಾಳಿ, ಭಿಮ್ ಗಡ್ ಅಥವಾ ಭದ್ರಾ ಹುಲಿ ಸಂರಕ್ಷಣಾಲಯದ ಸುತ್ತ ಶೀಘ್ರದಲ್ಲಿಯೇ ಖಾಸಗಿ ವನ್ಯಜೀವಿ ಸಂರಕ್ಷಣಾಲಯ ತಲೆ ಎತ್ತುವ ಸಾಧ್ಯತೆಯಿದೆ.

ಮಾನವ- ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಹಾಗೂ ವನ್ಯಜೀವಿಗಳ ತಿರುಗಾಟಕ್ಕೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. ಆದರೆ, ಇದರ ಅವಶ್ಯಕತೆ ಇರಲಿಲ್ಲ. ರೆಸಾರ್ಟ್ ಮಾಲಕರು ಹಾಗೂ ಅವರ ಬೆಂಬಲಿಗರು ಹಿಂಬಾಗಿಲ ಮೂಲಕ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಪರಿಸರ ಹೋರಾಟಗಾರರು ಆರೋಪ ಮಾಡಿದ್ದಾರೆ.

ಸಂರಕ್ಷಣಾಲಯಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರತಿ ಸಿದ್ಧವಾಗಿದ್ದು, ಚರ್ಚೆ ನಡೆಯುತ್ತಿದೆ. ಮುಂದಿನ ವಾರ ಅಂತಿಮಗೊಳಿಸುವ ಸಾಧ್ಯತೆ ಇದೆ. ರಾಜ್ಯ ಅರಣ್ಯ ಕಾನೂನು 1963 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಕಾಯ್ದೆ 39ರ ವ್ಯಾಪ್ತಿಯಡಿ ಖಾಸಗಿ ವನ್ಯಜೀವಿ ಸಂರಕ್ಷಣಾಲಯವನ್ನು ಸ್ಥಾಪಿಸಲಾಗುತ್ತಿದೆ. ಖಾಸಗಿ ವನ್ಯಜೀವಿ ಸಂರಕ್ಷಣೆಗಾಗಿ ಸಂರಕ್ಷಿತ ಪ್ರದೇಶ ಒಳಗೆ ಅಥವಾ ಅದರ ಸುತ್ತ ಜನರು ಭೂಮಿ ಹೊಂದಲು ರಾಜ್ಯ ಖಾಸಗಿ ಸಂರಕ್ಷಣಾ ಕಾನೂನು 2018ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೂ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತಿತರ ಚಟುವಟಿಕೆಗಾಗಿ ಈ ಭೂಮಿಯಲ್ಲಿ ಶೇ.5 ರಷ್ಟು ರೆಸಾರ್ಟ್, ಹೊಟೇಲ್, ಹೋಮ್ ಸ್ಟೇಂ ಕಟ್ಟಲು ಬಳಸಿಕೊಳ್ಳಬಹುದಾಗಿದೆ.

ನಿರ್ವಹಣಾ ಸಮಿತಿ: ಮೀಸಲು ಅರಣ್ಯ ಸಂರಕ್ಷಣೆ, ನಿರ್ವಹಣೆಗಾಗಿ ನಿರ್ವಹಣಾ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿ ವನ್ಯಜೀವಿಗಳ ಸಿಬ್ಬಂದಿಯ ಮುಖ್ಯಸ್ಥರಿಗೆ ಎಲ್ಲಾ ಸಲಹೆ ನೀಡುತ್ತದೆ. ಈ ಸಮಿತಿಯಲ್ಲಿ ಖಾಸಗಿ ವನ್ಯಜೀವಿ ಸಂರಕ್ಷಣಾಲಯದ ಮಾಲಕರು, ವನ್ಯಜೀವಿ ಸಂರಕ್ಷಣಾ ತಜ್ಞ ಹಾಗೂ ಆರ್‌ಎಫ್‌ಓಗಿಂತ ಕಡಿಮೆ ಇಲ್ಲದ ಅರಣ್ಯ ಅಧಿಕಾರಿಗಳು ಇರುತ್ತಾರೆ. ಈ ಸಮಿತಿ ತಮ್ಮದೇ ಆದ ಸ್ವಂತ ಯೋಜನೆಯನ್ನು ರೂಪಿಸುತ್ತದೆ.

ಮಿಶ್ರ ಪ್ರತಿಕ್ರಿಯೆ: ಖಾಸಗಿ ವನ್ಯಜೀವಿ ಸಂರಕ್ಷಣಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ವಿಷಯ ಕುರಿತಂತೆ ಚರ್ಚಿಸಲು ಜೂ.25 ರಂದು ಅರಣ್ಯ ಇಲಾಖೆ ಸಭೆ ಕರೆದಿದೆ. ಈ ಯೋಜನೆ ಉತ್ತಮವಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ಮಾಡಬೇಕು, ಮಾಡಬಾರದು: ಖಾಸಗಿ ಸಂರಕ್ಷಣಾಲಯ ಒಳಗೆ ಪ್ರವೇಶಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿಯನ್ನು 15 ದಿನಕ್ಕಿಂತಲೂ ಹೆಚ್ಚು ವಿಸ್ತರಿಸುವುದಿಲ್ಲ, ಪ್ರವೇಶ ಶುಲ್ಕವನ್ನು ನಿರ್ವಹಣಾ ಸಮಿತಿಯೇ ನಿಗದಿ ಮಾಡುತ್ತದೆ. ನಿಯಮ ಉಲ್ಲಂಘಿಸಿದ್ದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಅಪರಾಧ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ವನ್ಯಜೀವಿ ದಾಳಿಯಾದಾಗ ಯಾವುದೇ ಪರಿಹಾರ ನೀಡುವುದಿಲ್ಲ. ರಾತ್ರಿ ಸಪಾರಿ ಇರುವುದಿಲ್ಲ, ವನ್ಯಜೀವಿ ಸಂರಕ್ಷಣೆ ಮಾಲಕರ ಜವಾಬ್ದಾರಿಯಾಗಿರುತ್ತದೆ. ಡೈರಿ, ಕುಕ್ಕುಟ ಉದ್ಯಮ ಮತ್ತಿತರ ಚಟವಟಿಕೆಗಳನ್ನು ನಡೆಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News