ಕ್ಲೀನ್ ಜಯನಗರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಶಾಸಕಿ ಸೌಮ್ಯರೆಡ್ಡಿ

Update: 2018-06-20 14:25 GMT

ಬೆಂಗಳೂರು, ಜೂ.20: ಕ್ಲೀನ್ ಜಯನಗರ ಎಂಬ ಘೋಷವಾಕ್ಯದಡಿ ಜಯನಗರ ವಿಧಾನ ಸಭಾ ಕ್ಷೇತ್ರವನ್ನು ಸಂಪೂರ್ಣ ಸ್ವಚ್ಛವಾಗಿಡಲಾಗುವುದು. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕಿ ಸೌಮ್ಯರೆಡ್ಡಿ ಮನವಿ ಮಾಡಿದ್ದಾರೆ.

ವಿಧಾನಸಭಾ ಕ್ಷೇತ್ರದಲ್ಲಿ ಕಸ ಗುಡಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಲಾಗುವುದು. ತಮ್ಮ ವಾರ್ಡ್‌ನಲ್ಲಿ ಯಾವುದೇ ರೀತಿಯ ಕಸದ ಸಮಸ್ಯೆ ಇದ್ದರೂ ಸಾರ್ವಜನಿಕರು ಆ ಬಗ್ಗೆ ಖುದ್ದಾಗಿ ನನಗೆ ಅಥವಾ ಪಾಲಿಕೆ ಸದಸ್ಯರಿಗೆ ತಿಳಿಸಬಹುದು ಎಂದರು.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ತಿಲಕನಗರದ ರಸ್ತೆ ಬದಿ ಇರುವಂತಹ ಕಸದ ತೊಟ್ಟಿಯನ್ನು ಒಡೆದು ಹಾಕಿದ್ದಾರೆ ಹಾಗೂ ಇದು ಸುಮಾರು ವರ್ಷಗಳಿಂದ ಕಸದ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿತ್ತು. ಆದುದರಿಂದ ಇದನ್ನು ಕಸ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಬಂದಿದ್ದರಿಂದ ಅದನ್ನು ಸ್ವಚ್ಛಗೊಳಿಸಿ ಕಸದ ಪಾಯಿಂಟ್ ಬೇರೆ ಕಡೆಗೆ ಸ್ಥಳಾಂತರ ಮಾಡುವಂತೆ ಸೂಚಿಸಿದರು.

ಅಭಿಯಾನದಲ್ಲಿ ಪಾಲ್ಗೊಂಡಿದ್ದ ಭೈರಸಂದ್ರ ವಾರ್ಡ್ ಪಾಲಿಕೆ ಸದಸ್ಯ ಎನ್.ನಾಗರಾಜು ಮಾತನಾಡಿ, ವಾರ್ಡನ್ನು ಸಂಪೂರ್ಣ ಕಸಮುಕ್ತ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಅದಕ್ಕಾಗಿ ಬಾಂಧವ್ಯ ಎಂಬ ಸಂಸ್ಥೆ ಕೈಜೋಡಿಸಿದೆ. ಹೀಗಾಗಿ, ವಾರ್ಡ್‌ನಲ್ಲಿ ಯಾವುದೇ ರೀತಿಯ ಕಸದ ಸಮಸ್ಯೆ ಬಂದರೂ ಸಾರ್ವಜನಿಕರು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಹೇಳಿದರು.

ವಾರ್ಡ್‌ನ ಎಲ್ಲಾ ಬಡಾವಣೆಗಳನ್ನು ಕಸಮುಕ್ತ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಶಾಲೆ ಬಿಟ್ಟು ಮಕ್ಕಳನ್ನು ಮರಳಿ ಶಾಲೆಗೆ ತನ್ನಿ ಎಂಬ ಯೋಜನೆಯಡಿ ನಡೆಸಿರುವ ಈ ಜಾಗೃತಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಂತಹ ಮಕ್ಕಳಿದ್ದಲ್ಲಿ ಪತ್ತೆ ಮಾಡಿ ಶೀಘ್ರ ಶಾಲೆಗೆ ಸೇರಿಸಲಾಗುವುದು. ಅದೇ ರೀತಿ ಮಕ್ಕಳಿಗೆ ಶಾಲೆಯಲ್ಲಿ ಬೇಕಿರುವ ಅಗತ್ಯ ಸೌಕರ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News