×
Ad

‘ನಿಮ್ಮ ಮನೆಯನ್ನು ಹೀಗೆ ಇಟ್ಕೋಳ್ತೀರಾ..ನಿಮ್ಮನ್ನೆಲ್ಲ ಮೊದಲು ಅಮಾನತು ಮಾಡಬೇಕು’

Update: 2018-06-20 21:01 IST

ಬೆಂಗಳೂರು, ಜೂ. 20: ‘ಧೂಳು, ಜೇಡರ ಬಲೆ ತುಂಬಿರುವ ಕಚೇರಿ, ಮೂಗು ಹಿಡಿದುಕೊಂಡರೂ ಒಳಗೆ ಹೋಗಲು ಸಾಧ್ಯವಿಲ್ಲದ ಶೌಚಾಲಯ. ನಿಮ್ಮ ಮನೆಯನ್ನೂ ಹೀಗೆ ಇಟ್ಕೋಳ್ತೀರಾ...ಕೆಲಸ ಮಾಡದ ನಿಮ್ಮಂತಹವರನ್ನು ಮೊದಲು ಅಮಾನತು ಮಾಡಬೇಕು’ ಹೀಗೆಂದು ಕಾರ್ಮಿಕ ಸಚಿವ ವೆಂಕಟರಮಣ್ಣಪ್ಪ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ಇಲ್ಲಿನ ಡೈರಿ ವೃತ್ತದಲ್ಲಿನ ಕಾರ್ಮಿಕ ಭವನಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಚೇರಿ ಆದೇಶ ಇಷ್ಟು ಹೊತ್ತು ಹುಡುಕಿದರೂ ಸಿಗಲಿಲ್ಲ ಅಂದಮೇಲೆ ಆಮೇಲೆ ಎಲ್ಲಿಂದ ತಂದು ತೋರಿಸ್ತೀರಿ. ನಿಮ್ಮ ತಲೆ. ಸುಳ್ಳು ಹೇಳಬೇಡಿ ಎಂದು ಕಾರ್ಮಿಕ ಇಲಾಖೆ ಆಯುಕ್ತ ಚೈತ್ರಾ ವಿ. ಅವರನ್ನು ಗದರಿಸಿದರು.

ಈ ವೇಳೆ ಕಚೇರಿಯಲ್ಲಿರಬೇಕಾದ ಯಾವೊಬ್ಬ ಅಧಿಕಾರಿಯೂ ಇರಲಿಲ್ಲ. ಸಮರ್ಪಕವಾಗಿ ಹಾಜರಾತಿ ನಿರ್ವಹಿಸಿರಲಿಲ್ಲ. ಅಧಿಕಾರಿಗಳ ಗೈರು ಹಾಜರಿ ಬಗ್ಗೆ ನಮೋದಿಸಿಲ್ಲ. ಪಕ್ಕದಲ್ಲೇ ಸಚಿವರು ನಿಂತರೂ ಕಚೇರಿ ‘ಡಿ’ದರ್ಜೆ ನೌಕರರು ಗುರುತಿಸಿಲ್ಲ. ಹೀಗಾಗಿ ವೆಂಕಟರಮಣಪ್ಪ ‘ನಾನು ಕಾರ್ಮಿಕ ಇಲಾಖೆ ಸಚಿವ, ಆ ಕಡತ ತೋರಿಸಿ’ ಎಂದು ಪ್ರಶ್ನಿಸಿದ್ದು ನಡೆಯಿತು.

ಕಚೇರಿಯಲ್ಲಿದ್ದ ಪುರುಷರ ಶೌಚಾಲಯದ ಸ್ವಚ್ಛತೆ ಪರಿಶೀಲಿಸಿ ದುರ್ನಾತ ತಾಳದೆ ಮೂಗುಮುಚ್ಚಿಕೊಂಡ ವೆಂಕಟರಮಣಪ್ಪ, ಈ ವೇಳೆ ಸ್ಥಳದಲ್ಲೇ ಇದ್ದ ಆಯುಕ್ತ ಚೈತ್ರಾ ಅವರಿಗೆ ಪುರುಷ ಶೌಚಾಲಯದ ಒಳಗೆ ಹೋಗುವಂತೆ ಸೂಚಿಸಿದರು. ಆದರೆ, ಅವರು ಮುಜುಗರಕ್ಕೆ ಒಳಗಾದರು. ಕೂಡಲೇ ಶುಚಿಗೊಳಿಸಲು ಕ್ರಮ ವಹಿಸಿ ಎಂದು ನಿರ್ದೇಶಿಸಿದರು.

ಅಮಾನತ್ತಿಗೆ ಸೂಚನೆ: ಕಚೇರಿಗೆ ಯಾವುದೇ ಮಾಹಿತಿ ನೀಡದೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಚೇರಿಯಲ್ಲಿ ಇರಬೇಕಾದ ಅಧಿಕಾರಿ ನಾಗರಾಜಯ್ಯ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ವೆಂಕಟರಮಣಪ್ಪ, ಆಯುಕ್ತೆ ಚೈತ್ರಾ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ಇಲಾಖೆ ಕಚೇರಿಯಲ್ಲಿ ಲಂಚ ಸ್ವೀಕಾರ ಯಾವುದೇ ಕಾರಣಕ್ಕೂ ಸಲ್ಲ. ಲಂಚದ ಬೇಡಿಕೆ ಬಗ್ಗೆ ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಲಾಖೆಗೆ ಚುರುಕು: ಇಲಾಖೆಗೆ ಚುರುಕು ಮುಟ್ಟಿಸುವ ದೃಷ್ಟಿಯಿಂದ ಇಂದು ಕಾರ್ಮಿಕ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲಾಖೆಯಲ್ಲಿ ಏನೇನು ಕೆಲಸ ಆಗಿದೆ ಮತ್ತು ಆಗಬೇಕಾಗಿದೆ ಎಂಬ ಬಗ್ಗೆ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಸಣ್ಣ-ಪುಟ್ಟ ಕೊರತೆಗಳನ್ನು ಸರಿಪಡಿಸಲು ನಿರ್ದೇಶನ ನೀಡಿದ್ದೇನೆ ಎಂದರು.

ಇಲಾಖೆಯಲ್ಲಿ ಲೋಪ-ದೋಷಗಳನ್ನು ಸರಿಪಡಿಸಲು ಮೊದಲು ತಾನು ಇಲಾಖೆ ಬಗ್ಗೆ ತಿಳಿದುಕೊಳ್ಳಬೇಕಿದೆ. ಕಚೇರಿಯಲ್ಲಿ ಕುಳಿತರೆ ಇಲಾಖೆ ಬಗ್ಗೆ ಮಾಹಿತಿ ಸಿಗುವುದು ಕಷ್ಟ. ಹೀಗಾಗಿ ತಾನೇ ಖುದ್ದು ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದರು.

ಕಚೇರಿಯಲ್ಲಿಲ್ಲದ ಅಧಿಕಾರಿಗಳು ಎಲ್ಲಿ ಎಂದು ಸಚಿವರು ಪ್ರಶ್ನಿಸಿದರೆ, ದೊಡ್ಡಬಳ್ಳಾಪುರಕ್ಕೆ ಕಚೇರಿ ಕಾರ್ಯನಿಮಿತ್ತ ತೆರಳಿದ್ದಾರೆಂದು ಉತ್ತರಿಸಿದರು. ಅಲ್ಲಿಗೆ ಯಾವ ಕಾರಣಕ್ಕೆ ತೆರಳಿದ್ದಾರೆಂದು ಮರುಪ್ರಶ್ನೆ ಹಾಕಿದರೆ, ಆದೇಶವಿದೆ ಎಂದ ಆಯುಕ್ತೆ ಚೈತ್ರಾ ಅವರಿಗೆ ‘ಆದೇಶದ ಪ್ರತಿ ಕೊಡಿ’ ಎಂದು ಕೇಳಿದರೆ ಅವರಲ್ಲಿ ಇಲ್ಲ. ಹೀಗಾಗಿ ಕೆಲ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News