×
Ad

ರೈತರ ಸಾಲ ಮನ್ನಾ ಮೊದಲ ಆದ್ಯತೆ: ವೀರಪ್ಪ ಮೊಯ್ಲಿ

Update: 2018-06-20 21:40 IST

ಬೆಂಗಳೂರು, ಜೂ.20: ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಪ್ರಥಮ ಕರಡು ರಚಿಸಿದ್ದು, ರೈತರ ಸಾಲ ಮನ್ನಾ ಮಾಡಲು ಆದ್ಯತೆ ನೀಡಿದ್ದೇವೆ ಎಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ರಚನಾ ಸಮಿತಿ ಅಧ್ಯಕ್ಷ ಡಾ.ಎಂ.ವೀರಪ್ಪಮೊಯ್ಲಿ ತಿಳಿಸಿದರು.

ಬುಧವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಸಿದ್ಧತೆ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈತರ ಸಾಲ ಮನ್ನಾ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ಪಂಜಾಬ್ ಹಾಗೂ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಪಂಜಾಬ್‌ನಲ್ಲಿ ರೈತರ ಸಾಲ ಮನ್ನಾ ಯಶಸ್ವಿಯಾಗಿದೆ. ಅಲ್ಲಿ ಯಾವ ರೀತಿಯಲ್ಲಿ ಸಾಲ ಮನ್ನಾ ಮಾಡಲಾಗಿದೆ ಎಂಬ ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದು ಮೊಯ್ಲಿ ಹೇಳಿದರು.

ಜೂ.25ರಂದು ಮತ್ತೊಂದು ಸಭೆ ನಡೆಸಲಿದ್ದು, ಶೀಘ್ರವೇ ರಾಜ್ಯ ಸರಕಾರಕ್ಕೆ ಸಮಿತಿಯು ವರದಿ ನೀಡಲಾಗುವುದು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳೆಲ್ಲ ಮುಂದುವರೆಯಲಿವೆ ಎಂದು ಅವರು ತಿಳಿಸಿದರು.

ಈ ವೇಳೆ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಮೊದಲು ಸಹಕಾರಿ ವಲಯದ ಸಾಲ ಮನ್ನಾ ಮಾಡುತ್ತೇವೆ ಎಂದರು. ಆಗ ಮಧ್ಯಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಅದನ್ನೆಲ್ಲ ಮುಖ್ಯಮಂತ್ರಿ ಮಾತನಾಡುತ್ತಾರೆ ಬಿಡ್ರಿ ಎಂದರು. ಅಲ್ಲದೆ, ಸುದ್ದಿಗೋಷ್ಠಿಯಿಂದ ತೆರಳಲು ಶಿವಕುಮಾರ್ ಮುಂದಾದರು. ಅಭಾಸವಾಗಬಾರದೆಂದು ಶಿವಕುಮಾರ್‌ರನ್ನು ವಾಪಸ್ ಕರೆಸಿ ಮೊಯ್ಲಿ ಕೂರಿಸಿದರು. ಆನಂತರ, ಇಡೀ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಮೌನವಾಗಿದ್ದರು.

ಎಚ್.ಡಿ.ರೇವಣ್ಣ ಪಟ್ಟು?: ಸಹಕಾರಿ ವಲಯದ 9 ಸಾವಿರ ಕೋಟಿ ರೂ.ಸಾಲವನ್ನು ಮೊದಲು ಮನ್ನಾ ಮಾಡಬೇಕು, ಇದರಿಂದ ರಾಜ್ಯದ 40 ರೈತರಿಗೆ ಅನುಕೂಲವಾಗುತ್ತದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 6 ಸಾವಿರ ರೂ.ಮಾಸಾಶನ ಹಾಗೂ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಭತ್ತೆ 6 ಸಾವಿರ ರೂ.ಗಳನ್ನು ನೀಡುವ ಕಾರ್ಯಕ್ರಮಗಳನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಸೇರಿಸಬೇಕು ಎಂದು ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News