ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ನಿರ್ಧಾರ: ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.20: ರಾಜ್ಯದಲ್ಲಿರುವ ಎಲ್ಲ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶೇ.50ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಕೋರಿ ಕೇಂದ್ರ ಸರಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಡೀಮ್ಡ್ ವಿವಿಗಳ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಂಟು ಡೀಮ್ಡ್ ವಿವಿಗಳಲ್ಲಿ 1630 ಸೀಟುಗಳು ಲಭ್ಯವಿದೆ. 640 ದಂತ ವೈದ್ಯಕೀಯ ಸೀಟುಗಳಿವೆ. ಇವೆಗಳನ್ನೆಲ್ಲ ಕೇಂದ್ರ ಸರಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಮೂಲಕವೇ ಭರ್ತಿ ಮಾಡಲಾಗುತ್ತಿದೆ ಎಂದರು.
ಆದರೆ, ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಹಾಗೂ ರಾಜ್ಯ ಸರಕಾರದ ನಡುವೆ ಶುಲ್ಕ ನಿಗದಿ, ಸೀಟು ಹಂಚಿಕೆ ವಿಚಾರದಲ್ಲಿ ಯಾವ ಒಪ್ಪಂದವು ಆಗಿಲ್ಲ. 2018-19ನೆ ಸಾಲಿನಲ್ಲೂ ನಮ್ಮ ರಾಜ್ಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದರು.
ವಿದ್ಯಾಸಂಸ್ಥೆಗಳು ಇರುವುದು ನಮ್ಮ ರಾಜ್ಯದಲ್ಲಿ. ನಾವು ಪ್ರೋತ್ಸಾಹ ನೀಡಿ, ಬೆಳೆಸಿದ್ದೇವೆ. ಅವರು ಡೀಮ್ಡ್ ವಿವಿಯ ಸ್ಥಾನಮಾನ ಪಡೆದ ನಂತರ 1630 ಸೀಟುಗಳ ಪೈಕಿ ನಮ್ಮ ರಾಜ್ಯದ ಕನಿಷ್ಠ 100 ವಿದ್ಯಾರ್ಥಿಗಳಿಗೂ ದಾಖಲಾತಿ ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರದ ಕೋಟಾದಡಿಯಲ್ಲಿ ಎಲ್ಲರೂ ಹೊರ ರಾಜ್ಯದವರು ಬಂದು ಇಲ್ಲಿ ಸೀಟು ಪಡೆದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು. ಇದರಿಂದಾಗಿ, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಎದುರಾಗುತ್ತದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಸಿಕ್ಕಿದರೆ, ಅವರು ಇಲ್ಲೇ ವಿದ್ಯಾಭ್ಯಾಸ ಮಾಡಿ, ಇಲ್ಲೇ ಉಳಿಯುತ್ತಾರೆ. ಅವರ ಸೇವೆಯನ್ನು ನಾವು ಪಡೆಯಬಹುದು. ಇದನ್ನೆಲ್ಲ ಮನಗಂಡು ಡೀಮ್ಡ್ ವಿವಿಯ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಕರೆದು ಸಭೆ ಮಾಡಿ, ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರಕ್ಕೆ ಸೀಟುಗಳನ್ನು ನೀಡಿ ಅಥವಾ ನೀವೇ ಈ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಅದಕ್ಕೆ, ಅವರು ನಮ್ಮದೇನು ಅಭ್ಯಂತರವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು ತೀರ್ಮಾನ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮಾಡುವ ಎಲ್ಲ ಪ್ರಯತ್ನಗಳಿಗೂ ಸಹಕಾರ ನೀಡುವುದಾಗಿ ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಆದುದರಿಂದ, ರಾಜ್ಯ ಸರಕಾರವು ಮಹಾನಿರ್ದೇಶಕರಿಗೆ ಪತ್ರ ಬರೆದು ಶೇ.50ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನಿಗದಿ ಮಾಡುವಂತೆ ಮನವಿ ಮಾಡಲಿದೆ. ನಮ್ಮ ರಾಜ್ಯದಲ್ಲಿ ಇದೊಂದು ಹೊಸ ಹೆಜ್ಜೆಯಾಗಿದೆ. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ಮಣಿಪಾಲ, ನಿಟ್ಟೆ, ಯೆನಪೋಯ, ಕೆಎಲ್‌ಇ, ಬಿಎಲ್‌ಇ, ಜೆಎಸ್‌ಎಸ್, ಸಿದ್ಧಾರ್ಥ, ದೇವರಾಜ ಅರಸು ಡೀಮ್ಡ್ ವಿವಿಗಳಿವೆ. ಇವುಗಳಿಗೆ ಮಾನ್ಯತೆ ನೀಡುವಾಗ ಸೀಟುಗಳ ಹಂಚಿಕೆ ವಿಚಾರದಲ್ಲಿ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದರಿಂದಾಗಿ, ಈಗ ಸಮಸ್ಯೆ ಸೃಷ್ಟಿಯಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಇತ್ತೀಚೆಗೆ ಆದಿಚುಂಚನಗಿರಿಯವರಿಗೆ ಮಾನ್ಯತೆ ನೀಡಿದ್ದೇವೆ. ಅವರಿಂದಾಗಿ ಶೇ.70-80ರಷ್ಟು ಸೀಟುಗಳು ನಮ್ಮ ರಾಜ್ಯದವರಿಗೆ ಸಿಗುತ್ತದೆ. ವೈದ್ಯಕೀಯ ಸೀಟುಗಳ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಲು ಉದ್ದೇಶಿಸಿದ್ದಾರೆ. ಇಂದಿನ ಸಭೆಯಲ್ಲಿ ಶುಲ್ಕ ಹೆಚ್ಚಳ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.