ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಪರಿಶೀಲಿಸಿ ಸಂಚಾರ ಮಾಡಲು ಸಲಹೆ

Update: 2018-06-20 16:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.20: ಬೆಂಗಳೂರು ನಗರದಲ್ಲಿ ವಾಹನದಲ್ಲಿ ಸಂಚರಿಸುವಾಗ ಸಂಚಾರ ದಟ್ಟಣೆ, ಗುಂಡಿ ರಸ್ತೆಗಳನ್ನು ತಪ್ಪಿಸಿಕೊಂಡು ಸುಗಮವಾಗಿ ಸಂಚರಿಸಲು ಪೊಲೀಸ್ ಇಲಾಖೆಯ ಟ್ವಿಟರ್ ಮತ್ತು ಫೇಸ್‌ಬುಕ್ ಪುಟವನ್ನು ಒಮ್ಮೆ ನೋಡಿಕೊಂಡು ಸಂಚರಿಸುವಂತೆ ಇಲಾಖೆ ಸಲಹೆ ನೀಡಿದೆ.

ಸಂಚಾರಿ ಪೊಲೀಸರ ರಿಯಲ್ ಟೈಮ್ ಅಲರ್ಟ್ಸ್ ನೀವು ಹೋಗಬೇಕಾದ ಮಾರ್ಗ, ಯಾವ ಮಾರ್ಗದಲ್ಲಿ ಸಂಚರಿಸದೆ ಇರುವುದು ಒಳ್ಳೆಯದು ಎಂಬುದರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತದೆ. ಪ್ರಯಾಣಿಕರು ಮಳೆ ಬರುವ ಸಂದರ್ಭದಲ್ಲಿ ಮತ್ತು ಸಂಚಾರ ದಟ್ಟಣೆ ಸಂದರ್ಭದಲ್ಲಿ ಯಾವ ಮಾರ್ಗದಲ್ಲಿ ಹೋಗಬಾರದು ಮತ್ತು ಯಾವ ಮಾರ್ಗದಲ್ಲಿ ಹೋಗಬೇಕು ಎಂಬುದನ್ನು ಸಾಮಾಜಿಕ ಮಾಧ್ಯಮದಲ್ಲಿ ತೋರಿಸುತ್ತದೆ.

ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರು ನಗರದಲ್ಲಿ ಜನರು ಟ್ವಿಟ್ಟರ್, ಫೇಸ್ ಬುಕ್‌ಗಳನ್ನು ಅಪಾರವಾಗಿ ಬಳಸುತ್ತಾರೆ. ಸಂಚಾರಿ ಪೊಲೀಸ್ ಠಾಣೆ ಮಟ್ಟದಲ್ಲಿ ಎಸಿಪಿ ಮತ್ತು ಡಿಸಿಪಿಗಳು ತಮ್ಮ ಟ್ವಿಟ್ಟರ್ ಖಾತೆಗಳನ್ನು ಹೊಂದಿದ್ದು ಆ ಮೂಲಕ ಜನರಿಗೆ ಪ್ರತಿದಿನ ಸಂಚಾರ ದಟ್ಟಣೆಯ ಕ್ಷಣ ಕ್ಷಣದ ಮಾಹಿತಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.

ಪೂರ್ವ ಡಿಸಿಪಿ ಸಂತಾರ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ 1,78,579 ಮಂದಿ ಅನುಯಾಯಿಗಳಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ blrcitytraffic ಟ್ವಿಟ್ಟರ್ ಖಾತೆಯಲ್ಲಿ 5,39,672 ಅನುಯಾಯಿಗಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನಾಗರಿಕರು ಸಂಚಾರ ದಟ್ಟಣೆ ಬಗ್ಗೆ ಸಮಸ್ಯೆ ಹೇಳಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಪೂರ್ವ ಸಂಚಾರಿ ವಲಯದ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಫೇಸ್ ಬುಕ್‌ನಲ್ಲಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಪುಟದಲ್ಲಿ ನಾಗರಿಕರು ಸಮಸ್ಯೆಗಳನ್ನು ಹೇಳಿಕೊಂಡರೆ ಮತ್ತು ಸಂಚಾರ ಪೊಲೀಸ್ ವಿಭಾಗದ ಪಬ್ಲಿಕ್ ಐ ಎಂಬ ಪೋರ್ಟಲ್‌ನಲ್ಲಿ ಜನರು ಫೋಟೋ ಮತ್ತು ದೂರುಗಳನ್ನು ಪೋಸ್ಟ್ ಮಾಡಿದರೆ ಸಂಚಾರಿ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News