ಬಿಬಿಎಂಪಿ ಬಿನ್ನಿಪೇಟೆ ವಾರ್ಡ್ ಉಪಚುನಾವಣೆ: ಜೆಡಿಎಸ್ ಗೆ ಭರ್ಜರಿ ಗೆಲವು

Update: 2018-06-20 17:51 GMT

ಬೆಂಗಳೂರು, ಜೂ.20: ಬಿಬಿಎಂಪಿಯ 121ರ ವಾರ್ಡ್ ಬಿನ್ನಿಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ನಾಗರಾಜ್ ಜಯ ಗಳಿಸಿದ್ದಾರೆ. ಬುಧವಾರ ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಐಶ್ವರ್ಯಾ ನಾಗರಾಜ್ ಅವರು 7,188 ಮತ ಪಡೆಯುವ ಮೂಲಕ ವಿಜಯದ ನಗೆ ಬೀರಿದರು.

ಕಾಂಗ್ರೆಸ್‌ನ ವಿದ್ಯಾ ಶಶಿಕುಮಾರ್ 5,249 ಮತ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದರೆ, ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಕೇವಲ 2,455 ಮತಗಳಿಗೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಅದೇ ರೀತಿ, ನೋಟಾಗೆ 159 ಮತಗಳು ಬಿದ್ದಿವೆ.

ಬಿಬಿಎಂಪಿಯ ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ನಿಧನದ ನಂತರ ಜೂ.18 ರಂದು ಬಿನ್ನಿಪೇಟೆಯಲ್ಲಿ ಚುನಾವಣೆ ನಡೆದಿತ್ತು. ಅಲ್ಲದೆ, ಮಹದೇವಮ್ಮ ಪುತ್ರಿ ಪಿ.ಎನ್. ಐಶ್ವರ್ಯಾ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಮಹದೇವಮ್ಮ ಅವರ ಪತಿ ನಾಗರಾಜ್ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರಿದ್ದರು. ಬಳಿಕ ಪುತ್ರಿ ಐಶ್ವರ್ಯಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು.

ಸಂಭ್ರಮಾಚರಣೆ: ಬಿನ್ನಿಪೇಟೆ ಉಪಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ನಾಗರಾಜ್ ಗೆಲುವು ಸಾಧಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ವಾರ್ಡ್‌ನಾದ್ಯಂತ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಮತಗಳ ವಿವರ
ಜೆಡಿಎಸ್-ಐಶ್ವರ್ಯ ನಾಗರಾಜ್-7,188 ಮತ
ಕಾಂಗ್ರೆಸ್-ವಿದ್ಯಾಶಂಕರ್-5,243 ಮತ
ಬಿಜೆಪಿ-ಜಿ.ಚಾಮುಂಡೇಶ್ವರಿ-2,445 ಮತ
ನೋಟಾ-1,59 ಮತ
ಒಟ್ಟು 15,051 ಮತಗಳು ಚಲಾವಣೆ
ಗೆಲುವಿನ ಅಂತರ-1,939 ಮತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News