ಕೆ.ಟಿ.ಆರ್ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ: ಸಿಓಡಿ ತನಿಖೆಗೆ ಒತ್ತಾಯ

Update: 2018-06-21 13:41 GMT

ಬೆಂಗಳೂರು, ಜೂ.21: ಕಾಳಿ ಹುಲಿ ಸಂರಕ್ಷಿತ ಪ್ರದೇಶ(ಕೆ.ಟಿ.ಆರ್)ದಲ್ಲಿ ನಡೆದಿರುವ ಕಾಮಗಾರಿಯಲ್ಲಾಗಿರುವ ಅವ್ಯವಹಾರವನ್ನು ಸಿಓಡಿ ತನಿಖೆಗೆ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಳಿ ಬ್ರಿಗೇಡ್ ಒತ್ತಾಯಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಗೇಡ್‌ನ ಮುಖ್ಯ ಸಂಚಾಲಕ ರವಿ ರೇಡಖರ, ಕೆ.ಟಿ.ಆರ್‌ನ ಅಭಿವೃದ್ದಿಗಾಗಿ ಸರಕಾರ ನೂರಾರು ಕೋಟಿ ರೂ. ಹಣವನ್ನು ವೆಚ್ಚಮಾಡಿದೆ. ಅಭಿವೃದ್ದಿ ಕಾಮಗಾರಿಗೆ ಬಿಡುಗಡೆ ಮಾಡಿರುವ ಹಣವನ್ನು ಅರಣ್ಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.

ಕಾಳಿಹುಲಿ ಸೂಕ್ಷ್ಮಪ್ರದೇಶದಲ್ಲಿ ಪರಿಸರಕ್ಕೆ ವನ್ಯ ಜೀವಿಗಳಿಗೆ ಮಾರಕವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಹಾನಿ ಉಂಟುಮಾಡಲಾಗುತ್ತಿದೆ. ಪ್ರಾಣಿಗಳು ಓಡಾಡುವ ಹಾಗೂ ನೆಮ್ಮದಿಯಿಂದ ವಾಸಿಸುವ ಸಂರಕ್ಷಿತ ಪ್ರದೇಶಗಳಲ್ಲಿ ಸಿಮೆಂಟ್ ಕಾಮಗಾರಿಗಳನ್ನು ಮಾಡಿ ವ್ಯಾಪಕ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪರಿಸರ ಮತ್ತು ಜನವಿರೋಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು. ಕಡ್ಡಾಯ ಜನಾಭಿಪ್ರಾಯಕ್ಕೆ ಅವಕಾಶ ನೀಡಬೇಕು. ಕಾಳಿಹುಲಿ ಯೋಜನೆಯಲ್ಲಿ ಅರಣ್ಯ ಇಲಾಖೆ ಯಾವುದೇ ಕಾಂಕ್ರಿಟ್ ಕಾಮಗಾರಿಗಳನ್ನು ಕೈಗೊಳ್ಳಬಾರದು. ಅರಣ್ಯ ವ್ಯಾಪ್ತಿಯಲ್ಲಿ ಅರ್ಥ್ ಮೂವರ್ಸ್ ಸೇರಿದಂತೆ ಇತರ ಯಂತ್ರೋಪಕರಣಗಳ ಬಳಕೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ಕಾಳಿಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು. ಸದರಿ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಇದುವರೆಗೂ ನಡೆದ ಕಾಮಗಾರಿಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News