×
Ad

ನಾಯಿ ಸಾಕಲು ಪರವಾನಿಗೆ ಹೊಂದಿರಬೇಕೆಂಬ ಅಧಿಸೂಚನೆ ವಾಪಸ್ ಪಡೆದ ಬಿಬಿಎಂಪಿ

Update: 2018-06-21 20:46 IST

ಬೆಂಗಳೂರು, ಜೂ.21: ನಾಯಿ ಸಾಕಲು ಪರವಾನಿಗೆ ಹೊಂದಿರಬೇಕೆಂಬ ಅಧಿಸೂಚನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾಪಸ್ ಪಡೆದಿದೆ.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಗುರುವಾರ ತಿಳಿಸಿದರು. ಈ ಹೇಳಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿದೆ. ಭವಿಷ್ಯದಲ್ಲಿ ಅಧಿಸೂಚನೆಯನ್ನು ಮರು ಪರಿಶೀಲನೆ ಮಾಡಲಾಗುವುದು ಎಂದೂ ಪೊನ್ನಣ್ಣ ನ್ಯಾಯಪೀಠಕ್ಕೆ ತಿಳಿಸಿದರು.

ನಗರದ ನಿವಾಸಿಗಳು ನಾಯಿ ಸಾಕುವುದಕ್ಕೆ ಸಂಬಂಧಪಟ್ಟಂತೆ ವಿವಿಧ ಮಾರ್ಗಸೂಚಿಗಳನ್ನು ರಚಿಸಿ ಬಿಬಿಎಂಪಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ನಗರದ ನಿವಾಸಿ ಇಂದಿರಾ ಗೋಪಾಲಕೃಷ್ಣ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಗರದಲ್ಲಿ ನಾಯಿ ಸಾಕಲು ಬಿಬಿಎಂಪಿಯಿಂದ ಪರವಾನಿಗೆ ಪಡೆಯಬೇಕು. ಶುಲ್ಕ ಪಾವತಿಸಿ ಪ್ರತಿ ವರ್ಷ ಪರವಾನಿಗೆ ನವೀಕರಿಸಿಕೊಳ್ಳಬೇಕು. ಸಾಕು ನಾಯಿಗೆ ಪರವಾನಿಗೆ ನೀಡುವಾಗ ಬಿಬಿಎಂಪಿ ಪಶು ವೈದ್ಯ ವಿಭಾಗದ ವೈದ್ಯರು ನಾಯಿಯನ್ನು ಪರೀಕ್ಷೆಗೆ ಒಳಪಡಿಸಬಹುದು. ಕಿವಿಗೆ ಮುದ್ರೆಯಿಲ್ಲದ ನಾಯಿ, ಪರವಾನಿಗೆ ಪಡೆಯದಿರುವ ನಾಯಿಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ರಚಿಸಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಬಿಬಿಎಂಪಿಯ ಅಧಿಸೂಚನೆ ಕಾನೂನು ಬಾಹಿರವಾಗಿದೆ. ನಾಯಿ ಸಾಕಲು ಪರವಾನಿಗೆ ಕಡ್ಡಾಯಗೊಳಿಸಿರುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಸೆಕ್ಷನ್ 3ರ ಉಲ್ಲಂಘನೆ ಆಗಿದೆ. ವಿವೇಚನೆ ರಹಿತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅದಕ್ಕೂ ಮುನ್ನ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿಲ್ಲ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿಲ್ಲ. ಸಾಕು ಮತ್ತು ಬೀದಿ ನಾಯಿಗಳಿಗೆ ರಕ್ಷಣೆ ನೀಡುವವರಿಗೆ ಇರುವ ಮಾರ್ಗಸೂಚಿಗಳನ್ನು ಪರಿಗಣಿಸಿಲ್ಲ ಎಂದು ದೂರಿದ್ದರು. ಹಾಗೆಯೇ, ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News