ಬಿಬಿಎಂಪಿಯಲ್ಲಿ ಸೂಪರ್ ವೈಸರ್ ಹುದ್ದೆಯ ಪ್ರಸ್ತಾವನೆ: 3 ತಿಂಗಳಲ್ಲಿ ಪರಿಗಣಿಸಲು ಹೈಕೋರ್ಟ್ ನಿರ್ದೇಶನ

Update: 2018-06-21 16:21 GMT

ಬೆಂಗಳೂರು, ಜೂ.21: ಬಿಬಿಎಂಪಿ ಯಲ್ಲಿ ಹೊಸದಾಗಿ 30 ಹೆಲ್ತ್ ಸೂಪರ್ ವೈಸರ್ ಹುದ್ದೆ ಸೃಷ್ಟಿಸುವ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಮೂರು ತಿಂಗಳಲ್ಲಿ ಪರಿಗಣಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಪಾಲಿಕೆಯ ಹಿರಿಯ ಆರೋಗ್ಯ ಪರಿವೀಕ್ಷಕಿ ಆರ್.ರೇಣುಕಾಂಬ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯಪೀಠ, ಸರಕಾರಕ್ಕೆ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.

ಹೊಸ ಹುದ್ದೆಗಳ ಸೃಷ್ಟಿ ಬಗ್ಗೆ ಬಿಬಿಎಂಪಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಹಾಗೆಯೇ, ಅರ್ಜಿದಾರರು ಮನವಿ ಪತ್ರ ಸಲ್ಲಿಸಿದ್ದಾರೆ. ಈ ಎರಡು ಮನವಿಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ ಮೂರು ತಿಂಗಳಲ್ಲಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ಅರ್ಜಿದಾರರ ಪರ ವಿ.ಶ್ರೀನಿವಾಸ್ ವಾದ ಮಂಡಿಸಿ, ಪಾಲಿಕೆಯಲ್ಲಿ ಸದ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರ ಹುದ್ದೆಗಳಿವೆ. ಸುಮಾರು 30 ವರ್ಷಗಳಿಂದ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ಭಡ್ತಿ ನೀಡಿಲ್ಲ. ಅವರು ಅದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2016ರ ಡಿ.14ರಂದು 30 ಹೊಸ ಹೆಲ್ತ್ ಸೂಪರ್ ವೈಸರ್ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆ ಅನುಮೋದನೆ ನೀಡಿ, ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಸರಕಾರ ಮಾತ್ರ ಈವರೆಗೆ ಆ ಪ್ರಸ್ತಾವನೆಗೆ ಅನುಮೋದನೆ ನೀಡಿಲ್ಲ ಎಂದು ದೂರಿದರು.

ಸರಕಾರಿ ವಕೀಲರು ಉತ್ತರಿಸಿ, ಪ್ರಸ್ತಾವನೆವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಮೂರು ತಿಂಗಳು ಕಾಲಾವಕಾಶ ಬೇಕಿದೆ ಎಂದು ತಿಳಿಸಿದರು. ಇದಕ್ಕೆ ಸಮ್ಮಿತಿಸಿದ ನ್ಯಾಯಪೀಠ ಮೇಲಿನಂತೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News