ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲಿನ ಐಟಿ ದಾಳಿ ಖಂಡಿಸಿ ಪ್ರತಿಭಟನೆ

Update: 2018-06-21 16:28 GMT

ಬೆಂಗಳೂರು, ಜೂ.21: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ಸಂಸ್ಥೆಗಳ ಮೂಲಕ ದಾಳಿ ನಡೆಸಿ, ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ರೇಸ್‌ಕೋರ್ಸ್ ರಸ್ತೆಯ ಗಾಂಧಿಪ್ರತಿಮೆ ಬಳಿ ಜಮಾಯಿಸಿದ ಕಾಂಗ್ರೆಸ್ ಯುವ ಕಾರ್ಯಕರ್ತರು, ಐಟಿ ಮತ್ತು ಇಡಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ದುರುದ್ದೇಶ ಪೂರ್ವಕವಾಗಿ ನಿರಂತರ ದಾಳಿ ನಡೆಸಿ, ಅವರಿಗೆ ಮಾನಸಿಕ ಕಿರುಕುಳ ನೀಡುವ ಮೂಲಕ ಅವರ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಬಿಜೆಪಿ ಕುತಂತ್ರವನ್ನು ಎದುರಿಸುವ ಪ್ರಬಲ ಶಕ್ತಿ ಹೊಂದಿದ್ದಾರೆ. ಹೀಗಾಗಿ, ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿ, ರಾಜ್ಯದ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್‌ಗೆ ನೋಟಿಸ್ ನೀಡಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡುವುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಅದರ ಬಗ್ಗೆ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News