×
Ad

ನೀರಿನ ಪರಿಶುದ್ಧತೆ ದೃಢೀಕರಿಸಲು ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯ

Update: 2018-06-21 22:45 IST

ಬೆಂಗಳೂರು, ಜೂ. 21: ಕೆ.ಸಿ.ವ್ಯಾಲಿ ಮತ್ತು ಎಚ್.ಎಂ.ವ್ಯಾಲಿಗಳ ನೀರಿನ ಶುದ್ಧೀಕರಣ ಕುರಿತಂತೆ ಮುಖ್ಯಮಂತ್ರಿಗಳು ಕಾನೂನು ತಜ್ಞರು ಮತ್ತು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಭೆ ನಡೆಸಿ, ನೀರಿನ ಪರಿಶುದ್ಧತೆ ದೃಢೀಕರಣಗೊಳಿಸಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜಿನಯ್ಯ ರೆಡ್ಡಿ, ಕೆ.ಸಿ.ವ್ಯಾಲಿ ಯೋಜನೆ ಮೂಲಕ ನರಸಾಪುರ ಬಳಿಯ ಲಕ್ಷ್ಮಿಸಾಗರ ಕೆರೆಗೆ ಪ್ರಾಯೋಗಿಕವಾಗಿ ಹರಿಸಲಾಗಿದೆ. ಆದರೆ ಈ ನೀರಿನ ಪರಿಶುದ್ಧತೆ ಗುಣಮಟ್ಟ ಕುರಿತಂತೆ ಅನುಮಾನವಿದೆ ಎಂದು ಹೇಳಿದರು.

ಬರ ಪೀಡಿತ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಬೆಂಗಳೂರಿನ ಸಾವಿರಾರು ರಾಸಾಯನಿಕ ಕಾರ್ಖಾನೆಗಳಿಂದ ಮತ್ತು ಆಸ್ಪತ್ರೆಗಳಿಂದ ಹೊರಬರುತ್ತಿರುವ ತ್ಯಾಜ್ಯಗಳಿಂದ ಕೂಡಿದ ಕಲುಷಿತ ನೀರನ್ನು ಸಂಸ್ಕರಿಸಿ, ಕೋಲಾರದ 126 ಕೆರೆಗಳಿಗೆ ಬಿಡಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಆದರೆ, ಬೆಂಗಳೂರು ನಗರದ ಕೆರೆಗಳಿಗೆ, ರಾಜ ಕಾಲುವೆಗಳಿಗೆ ಹರಿದು ಬರುವ ರಾಸಾಯನಿಕ ವಿಷಪೂರಿತ ನೀರನ್ನು ಶುದ್ಧೀಕರಿಸುವುದು ಪ್ರಾಯೋಗಿಕವಾಗಿ ಸವಾಲಿನ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ನೋಟಿಸ್ ಜಾರಿ: ಕೆ.ಸಿ.ವ್ಯಾಲಿ ಮತ್ತು ಎಚ್.ಎಂ.ವ್ಯಾಲಿಗಳ ಯೋಜನೆಗಳ ನೀರಿನ ಪರಿಶುದ್ಧತೆ ಕುರಿತಂತೆ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಉಂಟಾದ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೀರಿನ ಪರಿಶುದ್ಧತೆ ಕುರಿತಂತೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಮನ್ನಿಸಿರುವ ನ್ಯಾಯಾಲಯ ಮುಂದಾಗುವ ಅನಾಹುತಗಳ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತುರ್ತು ನೋಟಿಸ್ ಜಾರಿ ಮಾಡಿ ಜು.4ಕ್ಕೆ ವಿಚಾರಣೆ ಕಾಯ್ದಿರಿಸಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಪ್ರಿನ್ಸ್ ಐಸಾಕ್, ಮುಳ್ಳೂರು ಹರೀಶ್, ಆಯಿಷಾ, ಆನಂದಪ್ಪ, ಶ್ರೀನಿವಾಸ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News