ಜುಲೈ ಅಂತ್ಯದೊಳಗೆ ನೌಕರರ ವರ್ಗಾವಣೆಗೆ ಸಚಿವ ಸಂಪುಟ ಸೂಚನೆ

Update: 2018-06-22 14:42 GMT

ಬೆಂಗಳೂರು, ಜು.22: ಜುಲೈ ಅಂತ್ಯದೊಳಗಾಗಿ ಒಟ್ಟು ಸರಕಾರಿ ನೌಕರರ ಶೇ.6ರ ಬದಲು ಶೇ.4ರಷ್ಟು ಮೀರದಂತೆ ಸಾರ್ವತ್ರಿಕ ವರ್ಗಾವಣೆಗೆ ಸಚಿವ ಸಂಪುಟ ಸಭೆ ಸೂಚನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸಚಿವ ಸಂಪುಟದ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಎಪ್ರಿಲ್-ಮೇನಲ್ಲಿ ನೌಕರರ ವರ್ಗಾವಣೆ ಆಗುತ್ತಿತ್ತು. ಈ ಬಾರಿ ವಿಧಾನಸಭಾ ಚುಣಾವಣೆಯ ಹಿನ್ನೆಲೆಯಲ್ಲಿ ತಡವಾಗಿದೆ. ಮುಂದಿನ ಜುಲೈ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸಚಿವ ಸಂಪುಟ ಸೂಚಿಸಿದೆ ಎಂದರು.

ಸಭಾಪತಿ ಮತ್ತು ಉಪ ಸಭಾಪತಿ ಹುದ್ದೆ ಖಾಲಿ ಇದ್ದು, ಪರಿಷತ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡಿರುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಕಂತುಗಳ ಪಾವತಿಗೆ ರಾಜ್ಯ ಸರಕಾರ 655 ಕೋಟಿ ರೂ.ಬಿಡುಗಡೆಗೆ ಸಚಿವ ಸಂಪುಟ ಸಮ್ಮತಿಸಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ಗುಣಮಟ್ಟ ಸುಧಾರಣೆ ಅಭಿಯಾನಕ್ಕೆ ರಾಜ್ಯದ ಪಾಲು 460 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಾಗೆಯೇ ರಾಜ್ಯ ಸರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 333 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿತ್ತು. ಈ ಸಾಲದ ಮರುಪಾವತಿ ಅವಧಿಯನ್ನು 10 ವರ್ಷ ಮುಂದೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೆ ರನ್ ವೇ ನಿರ್ಮಾಣ ಮತ್ತು ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ಹೆಚ್ಚುವರಿ ಬಂಡವಾಳ ನೆರವು ನೀಡುವ ಬದಲು ಸಾಲ ಮರುಪಾವತಿ ಅವಧಿ ಮುಂದೂಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ತಲಾ 300 ರೂ. ಮೌಲ್ಯದ ಎರಡನೆ ಜತೆ ಸಮವಸ್ತ್ರ ವಿತರಣೆ ಹಾಗೂ ಆಯಾ ಶಾಲೆಗಳ ಎಸ್‌ಡಿಎಂಸಿ ಮೂಲಕವೇ ಸಮವಸ್ತ್ರ ವಿತರಣೆ ಮಾಡಲು 115 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಗೆಯೆ ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸು ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ನೀಡಲಾಗಿದೆ ಹಾಗೂ ಚನ್ನರಾಯಪಟ್ಟಣ ತಾಲೂಕಿನ 25 ಕೆರೆ ತುಂಬಿಸುವ ಯೋಜನೆಗೆ 47 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News