ಬೆಂಗಳೂರು: 6 ಬೋಗಿಗಳ ಮೆಟ್ರೋಗೆ ಹಸಿರು ನಿಶಾನೆ

Update: 2018-06-22 16:01 GMT

ಬೆಂಗಳೂರು, ಜೂ.22: ನಮ್ಮ ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು, ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು, ಶುಕ್ರವಾರ ಚಾಲನೆ ದೊರೆತಿದೆ.

ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆರು ಬೋಗಿಗಳು ಮೆಟ್ರೋ ರೈಲಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ಹಸಿರು ನಿಶಾನೆ ತೋರಿಸಿ, ಮೆಜೆಸ್ಟಿಕ್ ನಿಲ್ದಾಣದವರೆಗೂ ಸಂಚಾರ ಮಾಡಿದರು.

ಮೊದಲಿಗೆ ಮೂರು ಬೋಗಿಗಳಲ್ಲಿ 900 ಮಂದಿ ಮಾತ್ರ ಪ್ರಯಾಣಿಸಬಹುದಿತ್ತು. ಇದೀಗ ಮೂರು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಿರುವುದರಿಂದ ಒಟ್ಟಾರೆ 1800 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣ ಮಾಡಬಹುದಾಗಿದ್ದು, ನಗರದ ಪ್ರಯಾಣಿಕರಿಗೆ ಅನುಕೂಲವಾಗಿದೆ.

ಚಾಲನೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್‌ಪುರಿ, 3 ಬೋಗಿಗಳ ಅಳವಡಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಅಧಿಕವಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ನಗರದ ನಾಗರಿಕರಿಗೆ ಪ್ರತಿದಿನದ ನಿಮ್ಮ ವೃತ್ತಿಯನ್ನ ಸುಗಮವಾಗಿ ನಿರ್ವಹಿಸಲು ಉತ್ತಮ ಸೇವೆಯನ್ನು ನಮ್ಮ ಮೆಟ್ರೋ ನೀಡುತ್ತಿದೆ. ಈ ಸಾರಿಗೆ ವ್ಯವಸ್ಥೆಗೆ ಇದೀಗ ಹೆಚ್ಚುವರಿ ಮೂರು ಬೋಗಿ ಸೇರಿಸಲಾಗಿದೆ. ಅಲ್ಲದೆ 2020ಕ್ಕೆ ಒಟ್ಟು 150 ಕಿ.ಲೋ ಮೆಟ್ರೋ ಯೋಜನೆಯಲ್ಲಿ ನಾಲ್ಕು ಹಂತದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.

2006ರಲ್ಲಿ ನಮ್ಮ ಮೆಟ್ರೋ ರೈಲು ಯೋಜನೆಯ ಚಾಲನೆಗೆ ನಾನು ತೆಗೆದುಕೊಂಡ ನಿರ್ಧಾರ ಅತ್ಯಂತ ಪ್ರಮುಖವಾದದ್ದು. ಅದೇ ವರ್ಷ ಜೂ.24ರಂದು ನಮ್ಮ ರಾಜ್ಯದ ಈ ಪ್ರತಿಷ್ಠಿತ ಯೋಜನೆಗೆ ಅಂದಿನ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಶಿಲಾನ್ಯಾಸ ನೆರವೇರಿಸಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಶಾಸಕ ಕೆ.ಜೆ.ಜಾರ್ಜ್ ಸೇರಿ ಪ್ರಮುಖರಿದ್ದರು.

‘ವಿಧಾನಸೌದದಿಂದ ಬೈಯಪ್ಪನಹಳ್ಳಿವರೆಗೆ ಟಿಕೆಟ್ ಪಡೆದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಚರಿಸಿದರು. ನಂತರ 6ಬೋಗಿಗಳ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮೆಜೆಸ್ಟಿಕ್‌ವರೆಗೂ ರೈಲಿನಲ್ಲಿಯೇ ತೆರಳಿದರು. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಶಾಸಕ ಕೆ.ಜೆ.ಜಾರ್ಜ್ ಜತೆಗಿದ್ದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News