×
Ad

ಶಿಕ್ಷಣ ವ್ಯವಸ್ಥೆ ಪ್ರತಿಭಾವಂತರನ್ನು ಬೆಳೆಸುತ್ತಿಲ್ಲ: ಹೈಕೋರ್ಟ್ ಆತಂಕ

Update: 2018-06-22 21:36 IST

ಬೆಂಗಳೂರು, ಜೂ.22: ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಪ್ರತಿಭಾವಂತರನ್ನು ಬೆಳೆಸುವುದಕ್ಕಿಂತಲೂ ಪ್ರತಿಭಟನೆ ಮಾಡಿ ಬಸ್ಸಿಗೆ ಬೆಂಕಿ ಹಚ್ಚುವ ಯುವ ಸಮೂಹವನ್ನು ಹುಟ್ಟುಹಾಕುತ್ತಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಕೊಪ್ಪಳ ಸರಕಾರಿ ವೈದ್ಯಕೀಯ ಕಾಲೇಜಿಗೆ 2018-2019ನೆ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್.ಜಿ.ರಮೇಶ್, ನಮ್ಮ ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಕೆಲಸ ಆಗುತ್ತಿಲ್ಲ. ಮನೆಯ ಯಜಮಾನರು ದುಡ್ಡು ಕೂಡಿ ಹಾಕುವ ಬದಲಿಗೆ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸಬೇಕು ಎಂದು ಕಿವಿಮಾತು ಹೇಳಿದರು.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯನ್ನು ಏಕೆ ರೂಪಿಸಬಾರದು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಅವರು, ಸದ್ಯದ ನಿಯಮಗಳಿಂದ ಬಡವರು ಹಾಗೂ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಪ್ಪಳ ಸರಕಾರಿ ವೈದ್ಯಕೀಯ ಕಾಲೇಜಿನ ಪರ ಹಾಜರಿದ್ದ ಎಂ.ಸುಮನಾ ಬಾಳಿಗಾ ವಾದ ಮಂಡಿಸಿ, ಬೇರೆ ಎಲ್ಲ ಕಾಲೇಜುಗಳಿಗೆ ಅನುಮತಿ ಕೊಟ್ಟಿದ್ದಾರೆ. ನಮಗೆ ಮಾತ್ರ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರಕಾರದ ಸಹಾಯಕ ಸಾಲಿಸಿಟರ್ ಜನರಲ್ ವಿ.ಶಶಿಕಾಂತ್, ಕಾಲೇಜಿನಲ್ಲಿ ಅಗತ್ಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಕೆಲವು ಪ್ರಮುಖ ವಿಭಾಗಗಳೇ ಇಲ್ಲ. ಹೀಗಾಗಿ ಪ್ರಸಕ್ತ ಸಾಲಿಗೆ 150 ವಿದ್ಯಾರ್ಥಿಗಳಿಗೆ ನೀಡಬೇಕಾದ ಪ್ರವೇಶವನ್ನು ತಡೆಹಿಡಿಯಲಾಗಿದೆ ಎಂದರು. ಈ ಕುರಿತಂತೆ ಅವರು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಮೇಶ್, ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದ ನಿಯಮಗಳಂತೆಯೇ ಸ್ನಾತಕೋತ್ತರ ಕೋರ್ಸ್‌ಗಳಿಗೂ ರೂಪಿಸಿ. ಅದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರು. ಸುಮನಾ ಬಾಳಿಗಾ ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News