ರೌಡಿಶೀಟರ್ ಕೊಲೆ ಪ್ರಕರಣ: ಗುಂಡಿಕ್ಕಿ ಆರೋಪಿಯ ಬಂಧನ

Update: 2018-06-22 16:13 GMT

ಬೆಂಗಳೂರು, ಜೂ.22: ರೌಡಿ ಶೀಟರ್ ವಾಟರ್ ಮಂಜು ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಶಿಗೇಹಳ್ಳಿಯ ನಿವಾಸಿ ಚರಣ್‌ರಾಜ್(34) ಎಂಬಾತನಿಗೆ ಗುಂಡೇಟು ತಗುಲಿರುವ ಆರೋಪಿಯಾಗಿದ್ದು, ಇದೇ ಪ್ರಕರಣ ಸಂಬಂಧ ಹೊಸಕೋಟೆಯಲ್ಲಿ ರಘು ಮತ್ತು ಮುರಳಿ ಎಂಬುವರನ್ನು ಬಂಧಿಸಿದ್ದಾರೆ.

ಹಳೇ ದ್ವೇಷದ ಕಾರಣ ಗುರುವಾರ ಮಧ್ಯಾಹ್ನ ಕೆಆರ್‌ಪುರಂನ ರೌಡಿಶೀಟರ್ ಮಂಜುನಾಥ್ ಯಾನೆ ವಾಟರ್ ಮಂಜು ಎಂಬಾತನನ್ನು ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ನಾಲ್ಕು ತಂಡವನ್ನು ರಚಿಸಿದ್ದರು. ಈ ನಿಟ್ಟಿನಲ್ಲಿ ಕೆಆರ್‌ಪುರಂ ಠಾಣೆ ಎಸ್ಸೈ ಜಯರಾಜ್, ಮಹದೇವಪುರ ಠಾಣೆ ಎಸ್ಸೈ ಶ್ರೀನಿವಾಸ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ರಂಗಪ್ಪ, ಎಎಸ್ಸೈಗಳಾದ ನಾರಾಯಣಸ್ವಾಮಿ, ಹರೀಶ್, ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಶುಕವಾರ ಮುಂಜಾನೆ 5 ಗಂಟೆ ಸುಮಾರಿಗೆ ಪ್ರಮುಖ ಆರೋಪಿ ಚರಣ್‌ರಾಜ್, ಕಾಡುಗೋಡಿ ಬೆಳ್ತೂರು ಕ್ರಾಸ್ ಮೂಲಕ ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಬಗ್ಗೆ ಈ ತಂಡಕ್ಕೆ ಮಾಹಿತಿ ಲಭಿಸಿದೆ. ತಕ್ಷಣ 5:40ರಲ್ಲಿ ಬೆಳ್ತೂರು ಬಳಿ ಪೊಲೀಸರು, ಆರೋಪಿಯನ್ನು ಬೈಕ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾರೆ.

ಈ ವೇಳೆ ಬೈಕ್ ನಿಲ್ಲಿಸದೆ ಬೆಳ್ತೂರು-ಕೆ.ದೊಮ್ಮಸಂದ್ರ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ತಕ್ಷಣ ಎಸ್ಸೈ ಜಯರಾಜ್ ಅವರನ್ನೊಳಗೊಂಡ ತಂಡ ಪೊಲೀಸ್ ಜೀಪಿನಲ್ಲಿ ಬೆನ್ನಟ್ಟಿ ಆರೋಪಿ ಬೈಕ್‌ಗೆ ಅಡ್ಡ ಹಾಕಿದ್ದಾರೆ. ಬಳಿಕ ಆರೋಪಿಯು ಬೈಕ್‌ನಿಂದ ಹಾರಿ ಪೊದೆಯೊಳಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಪೊಲೀಸ್ ತಂಡ ಜೀಪ್‌ನಿಂದ ಇಳಿದು ಆತನನ್ನು ಹಿಡಿಯಲು ಮುಂದಾದಾಗ ಮಾರಕಾಸ್ತ್ರಗಳಿಂದ ಎಎಸ್ಸೈ ಮುನಿರಾಜು ಅವರಿಗೆ ಹಲ್ಲೆ ಮಾಡಲು ಮುಂದಾದಾಗ ಲಾಠಿ ಅಡ್ಡ ಹಿಡಿದಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈ ವೇಳೆ ಆರೋಪಿಯನ್ನು ಹಿಡಿಯಲು ಹೋದ ಎಎಸ್ಸೈ ನಾರಾಯಣಸ್ವಾಮಿ ಅವರ ಮೇಲೆಯೂ ಹಲ್ಲೆ ಮಾಡಿದಾಗ ಎಸ್ಸೈ ಆತನಿಗೆ ಶರಣಾಗಲು ಸೂಚಿಸಿದ್ದಾರೆ.

ಆದರೂ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ತಪ್ಪಿಕೊಳ್ಳಲು ಪ್ರಯತ್ನಿಸಿದಾಗ ನಂತರ ಮತ್ತೊಂದು ಗುಂಡು ಹಾರಿಸಿದ್ದು, ಅದು ಚರಣ್‌ ರಾಜ್‌ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ಕಾಡುಗೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಎಎಸ್ಸೈ ನಾರಾಯಣಸ್ವಾಮಿ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಡಿಸಿಪಿ ಅಬ್ದುಲ್ ಅಹದ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News