ಚೆಕ್ ರೂಪದಲ್ಲಿ ಹಣ ಸ್ವೀಕರಿಸಲು ನಿಯಮ ಜಾರಿ
ಬೆಂಗಳೂರು, ಜೂ.22: ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿ 20 ಸಾವಿರಕ್ಕಿಂತ ಅಧಿಕ ಶುಲ್ಕವನ್ನು ಚೆಕ್ ರೂಪದಲ್ಲಿ ಸ್ವೀಕರಿಸುವಂತೆ ರಾಜ್ಯ ಸರಕಾರ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಬಹುತೇಕ ಕಾಲೇಜುಗಳಲ್ಲಿ ನಗದು ರೂಪದಲ್ಲಿ ಶುಲ್ಕ ಸ್ವೀಕರಿಸಲಾಗುತ್ತಿದೆ ಎಂದು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರವೇಶ ಮೇಲುಸ್ತುವಾರಿ ಸಮಿತಿ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆ ಕಾಯ್ದೆ 2006ಕ್ಕೆ ತಿದ್ದುಪಡಿ ತರುವಂತೆ ಶಿಫಾರಸು ಮಾಡಲಿದ್ದು, ಕಾಲೇಜುಗಳಿಗೆ ಶುಲ್ಕವನ್ನು ಚೆಕ್ ರೂಪದಲ್ಲಿ ಸ್ವೀಕರಿಸುವಂತೆ ಒತ್ತಾಯಿಸಲಿದೆ.
ಇತ್ತೀಚೆಗೆ ಪ್ರಧಾನಮಂತ್ರಿ ಕಚೇರಿಗೆ ದೂರೊಂದು ಬಂದಿತ್ತು. ಅದರಲ್ಲಿ ಅನಾಮಧೇಯ ವ್ಯಕ್ತಿ ರಾಜ್ಯದಲ್ಲಿನ ಕಾಲೇಜು ಒಂದರಲ್ಲಿ ಶೇ.50ರಷ್ಟು ಶುಲ್ಕವನ್ನು ನಗದು ಮೂಲಕ ಕೇಳಿದೆ ಎಂದು ಆರೋಪಿಸಿದ್ದರು. ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಗದು ಮೂಲಕ ಶುಲ್ಕದ ಹೆಚ್ಚಿನ ಭಾಗವನ್ನು ನೀಡುವಂತೆ ಪೋಷಕರಿಗೆ ಒತ್ತಾಯಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದರು. ಆ ದೂರನ್ನು ಪ್ರಧಾನಿ ಕಚೇರಿ ಸಿಬ್ಬಂದಿ ಪ್ರವೇಶ ಮೇಲುಸ್ತುವಾರಿ ಸಮಿತಿಗೆ ವರ್ಗಾಯಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ ಮನೋಹರ್, ಆದಾಯ ತೆರಿಗೆ ಕಾಯ್ದೆ(ಐಟಿ) ಇಂತಹ ಕಡ್ಡಾಯವನ್ನು ಹೇರುತ್ತದೆ. ಆದಾಯ ತೆರಿಗೆ ಕಾಯ್ದೆಯ 20ಬಿ ಅಧ್ಯಯನದ ಸಾಧ್ಯತೆ ಪ್ರಕಾರ 20 ಸಾವಿರಕ್ಕಿಂತ ಅಧಿಕ ಶುಲ್ಕವನ್ನು ಚೆಕ್ ಮೂಲಕ ಪಾವತಿಸಬಹುದೆಂದು ಹೇಳುತ್ತದೆ ಎಂದು ತಿಳಿಸಿದ್ದಾರೆ.