ಬೆಳಕಲ್ಲು ವೀರಣ್ಣಗೆ ‘ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’

Update: 2018-06-22 16:27 GMT

ಬೆಂಗಳೂರು, ಜೂ.22: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ತೊಗಲುಗೊಂಬೆ ಯಕ್ಷಗಾನ ಕಲಾವಿದ ನಾಡೋಜ ಬೆಳಕಲ್ಲು ವೀರಣ್ಣ ಅವರಿಗೆ ನೀಡಲಾಗುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನಿಂದ ರಾಷ್ಟ್ರಮಟ್ಟದಲ್ಲಿ ಜಾನಪದ ಕಲಾವಿದರನ್ನು ಗುರುತಿಸಿ ಒಂದು ಲಕ್ಷ ರೂ.ಗಳನ್ನು ಒಳಗೊಂಡಿರುವ ಎಚ್.ಎಲ್.ನಾಗೇಗೌಡ ಪ್ರಶಸ್ತಿ ನೀಡಲಾಗುತ್ತದೆ. ನಾಗೇಗೌಡ ಅವರಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 2015 ರಿಂದ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದರು.

2015 ರಲ್ಲಿ ಪಾಂಡವಾನಿ ಕಲಾವಿದೆ ತೀಜನ್ ಬಾಯಿ, 2016 ರಲ್ಲಿ ಮಣಿಪಾಲದ ಹಸ್ತಶಿಲ್ಪ ಟ್ರಸ್ಟ್‌ನ ರೂವಾರಿ ವಿಜಯನಾಥ ಶೆಣೈ, 2017 ರಲ್ಲಿ ರಾಜಸ್ಥಾನಿ ಸೂಫಿ ಮತ್ತು ಕಬೀರ್ ತಾತ್ವಿಕ ಹಿನ್ನೆಲೆಯ ಸಂಗೀತ ಕಲಾವಿದ ಮುಖ್ತಿಯಾರ್ ಅಲಿಗೆ ನೀಡಲಾಗಿತ್ತು. ಇದೀಗ, ಬಳ್ಳಾರಿ ಜಿಲ್ಲೆಯ ಗೊಂಬೆ ಯಕ್ಷಗಾನ ಕಲಾವಿದ ನಾಡೋಜ ಬೆಳಕಲ್ಲು ವೀರಣ್ಣ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಜೂ.26 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ತೊಗಲುಗೊಂಬೆಯಾಟದಲ್ಲಿ ಮನೆ ಮಾತಾಗಿರುವ ವೀರಣ್ಣ ಅವರು, ಕಂಪನಿ ರಂಗಭೂಮಿಯ ಆಕರ್ಷಣೆಗೆ ಒಳಗಾಗಿ, ಅಲ್ಲಿ ತಮ್ಮದೇ ರೀತಿಯಲ್ಲಿ ರಂಗ-ಸಂಗೀತವನ್ನು ಅರಗಿಸಿಕೊಂಡರು. ಅನಂತರ ತಮ್ಮ ಮೂಲ ಕಸುಬಾದ ತೊಗಲುಗೊಂಬೆಯಾಟಕ್ಕೆ ಮರಳಿದರು. ಅದರ ವಸ್ತು ಕಥನ, ಗೊಂಬೆಗಳ ಸಂರಚನೆ ಪ್ರದರ್ಶನಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡರು. ಸ್ವಾತಂತ್ರ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಸೀತಾಪಹರಣದಿಂದ ಕನಕದಾಸನವರೆಗೂ ಹಲವಾರು ತೊಗಲುಗೊಂಬೆಗಳನ್ನು ಆಟವಾಡಿಸಿದ್ದಾರೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News