ಬಿಬಿಎಂಪಿ ಕಚೇರಿ ಎದುರು ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಧರಣಿ

Update: 2018-06-22 16:29 GMT

ಬೆಂಗಳೂರು, ಜೂ.22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ಹತ್ತು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ (ವಿದ್ಯುತ್) ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರು ಧರಣಿ ಕೈಗೊಂಡಿದ್ದಾರೆ.

ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ 198 ವಾರ್ಡ್‌ನ ವಿದ್ಯುತ್ ಗುತ್ತಿಗೆದಾರರರು ಪ್ರತಿಭಟನಾ ಧರಣಿ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಬೀದಿದೀಪ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, 2017ರ ಡಿಸೆಂಬರ್‌ನಿಂದ ಹಲವು ನೆಪಗಳನ್ನೊಡ್ಡಿ ಬಿಬಿಎಂಪಿ ಅಧಿಕಾರಿಗಳು ಬಿಲ್ಗಳನ್ನು ತಡೆ ಹಿಡಿದಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದರು.

ಬಿಬಿಎಂಪಿಯಲ್ಲಿ 30 ಕೋಟಿ ರೂ. ಬಿಲ್ ಬಾಕಿ ಇದೆ. ಹಲವಾರು ವಿದ್ಯುತ್ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿದ್ದರು ಸಹ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರಿಗೆ ವೇತನ ಪಾವತಿ ಮಾಡಿಕೊಂಡು ವಿದ್ಯುತ್ ನಿರ್ವಹಣೆ ಮಾಡುತ್ತಿದ್ದೇವೆ. ಬಾಕಿ ಇರುವ ಬಿಲ್ ಬಿಡುಗಡೆ ಮಾಡದಿದ್ದರೆ, ನಾವು ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಮೇಯರ್ ಸಂಪತ್‌ ರಾಜ್ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಅವರ ಮಾತನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ಬೀದಿ ದೀಪ ನಿರ್ವಹಣೆ ಮಾಡುವ ಸಿಬ್ಬಂದಿ ಸೇರಿದಂತೆ 150 ಗುತ್ತಿಗೆದಾರರು ಧರಣಿಯಲ್ಲಿ ಪಾಲ್ಗೊಂಡಿದ್ದು, ಬಿಲ್ ಪಾವತಿಸದಿದ್ದರೆ ಬೀದಿದೀಪ ಸ್ಥಗಿತಗೊಳಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಬಿಬಿಎಂಪಿ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News