ಹಂಪಿ-ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ಆಗ್ರಹಿಸಿ ಅಭಿಯಾನ

Update: 2018-06-22 16:31 GMT

ಬೆಂಗಳೂರು, ಜೂ.22: ಹಂಪಿ ಸಂಪರ್ಕಿಸುವ ಹೊಸಪೇಟೆಯಿಂದ ರಾಜಧಾನಿ ಬೆಂಗಳೂರಿಗೆ ಮಧ್ಯೆ ಇಂಟರ್ ಸಿಟಿ ರೈಲು ಆರಂಭಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕರ್ನಾಟಕ ರೈಲ್ವೆ ಬಳಕೆದಾರರ ವೇದಿಕೆ ಅಭಿಯಾನ ಆರಂಭಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಿರಿಯ ರೈಲ್ವೆ ಅಧಿಕಾರಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್ ಮಾಡುವ ಮೂಲಕ ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ.

ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ರಾಯದುರ್ಗ, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ ಹಾಗೂ ತುಮಕೂರು ಮೂಲಕ ಬೆಂಗಳೂರನ್ನು ಸಂಪರ್ಕಿಸಲು ನಿತ್ಯ ರೈಲು ಸಂಪರ್ಕ ಆರಂಭಿಸಬೇಕು. ಇದರಿಂದ ವಿಶ್ವವಿಖ್ಯಾತ ತಾಣವಾದ ಹಂಪಿಗೆ ಪ್ರವಾಸಕ್ಕೆ ಬರುವವರಿಗೆ ಅನುಕೂಲವಾಗಲಿದೆ. ದೇಶವಿದೇಶಗಳಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ಸರಿಯಾದ ರೈಲು ಸಂಪರ್ಕವಿಲ್ಲ. ಹೀಗಾಗಿ ನಿತ್ಯ ಇಂಟರ್ ಸಿಟಿ ರೈಲು ಆರಂಭಿಸಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಂಪಿ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಅಲ್ಲದೆ, ಈ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಬಳಕೆದಾರರ ವೇದಿಕೆ ಅಭಿಯಾನದ ಮೂಲಕ ಸರಕಾರದ ಗಮನ ಸೆಳೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News