ವಿಧವೆಯರ ಸಬಲೀಕರಣ: ಸಮಾಜ-ಸರಕಾರದ ಹೊಣೆ ಏನು?

Update: 2018-06-22 18:32 GMT

ಪ್ರತಿವರ್ಷ ಜೂ. 23ರಂದು ವಿಶ್ವ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ದಿನದ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. 2005ರಿಂದಲೇ ಇದನ್ನು ಆಚರಿಸಲಾಗುತ್ತಿದ್ದರೂ ವಿಶ್ವ ಸಂಸ್ಥೆ ಡಿಸೆಂಬರ್ 21, 2010ರಂದು ಅಧಿಕೃತವಾಗಿ ಜೂನ್ 23ರ ದಿನವನ್ನು ವಿಶ್ವ ವಿಧವೆಯರ ದಿನವನ್ನಾಗಿ ಆಚರಣೆಗೆ ತಂದಿತು.

ವಿಶ್ವ ಸಂಸ್ಥೆ ಈ ದಿನವನ್ನು ‘‘ಹಲವಾರು ದೇಶಗಳಲ್ಲಿನ ಲಕ್ಷಾಂತರ ವಿಧವೆಯರು ಮತ್ತು ವಿಧವೆಯರನ್ನು ಅವಲಂಬಿಸಿರುವವರು ಎದುರಿಸುವ ಅನ್ಯಾಯ ಹಾಗೂ ಬಡತನ’’ವನ್ನು ಜಗತ್ತಿನ ಎದುರು ತೆರೆದಿಡಲಿಕ್ಕೆ ಹಾಗೂ ಅವರ ಸಮಸ್ಯೆಗಳ ವಿರುದ್ಧ ದೇಶಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸುವ ದಿನವನ್ನಾಗಿ ಆಚರಿಸುತ್ತದೆ.

2014ರಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಅವರ ‘‘ಯಾವ ಮಹಿಳೆಯೂ ತನ್ನ ಪತಿಯ ನಿಧನದ ನಂತರ ತನ್ನ ಸ್ಥಾನಮಾನ, ಜೀವನೋಪಾಯ ಹಾಗೂ ಆಸ್ತಿಯನ್ನು ಕಳೆದುಕೊಳ್ಳಬಾರದು’’ ಎಂಬ ಮಾತುಗಳು ಈ ದಿನದ ಆಚರಣೆಯ ತಿರುಳೆಂದು ಹೇಳಿದರೆ ತಪ್ಪಾಗಲಾರದು. ಲೂಂಬಾ ಫೌಂಡೇಶನ್ 2015ರಲ್ಲಿ ಪ್ರಕಟಿಸಿದ ವಿಶ್ವ ವಿಧವೆಯರ ವರದಿಯ ಪ್ರಕಾರ ಜಗತ್ತಿನಲ್ಲಿ 25 ಕೋಟಿಗೂ ಹೆಚ್ಚು ವಿಧವೆಯರಿದ್ದಾರೆ ಹಾಗೂ ಇವರಿಗೆ 58 ಕೋಟಿಗೂ ಹೆಚ್ಚು ಮಕ್ಕಳಿದ್ದಾರೆ. ಈ ವಿಧವೆಯರಲ್ಲಿ ಅರ್ಧದಷ್ಟು ಜನ ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ ಹಾಗೂ ಕ್ರೂರ ಹಿಂಸೆಗೆ ಒಳಗಾಗುತ್ತಿದ್ದಾರೆ.

2010ರಿಂದೀಚೆಗೆ ಸಂಘರ್ಷಗಳಿಂದ ಹಾಗೂ ರೋಗಗಳಿಂದ ವಿಧವೆಯರ ಸಂಖ್ಯೆಯಲ್ಲಿ ಶೇ.9ರಷ್ಟು ಹೆಚ್ಚಳವಾಗಿದೆ. ಅದರಲ್ಲೂ ಮುಖ್ಯವಾಗಿ ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ ದೇಶಗಳಲ್ಲಿ 2010ರಿಂದ 2015ರ ನಡುವೆ ಸಿರಿಯಾ ಯುದ್ಧ ಹಾಗೂ ಇತರ ಸಂಘರ್ಷಗಳಿಂದ ವಿಧವೆಯರ ಸಂಖ್ಯೆಯಲ್ಲಿ ಶೇ. 24ರಷ್ಟು ಹೆಚ್ಚಳವಾಗಿದೆ. ಜಗತ್ತಿನಲ್ಲಿ ಮದುವೆ ಯೋಗ್ಯ ವಯಸ್ಸಿನ 10 ಮಹಿಳೆಯರಲ್ಲಿ ಒಬ್ಬರು ವಿಧವೆಯರು ಹಾಗೂ ಅಫ್ಘಾನಿಸ್ತಾನ ಹಾಗೂ ಉಕ್ರೇನ್ ದೇಶಗಳಲ್ಲಿ ಮದುವೆ ಯೋಗ್ಯ ವಯಸ್ಸಿನ 5 ಮಹಿಳೆಯರಲ್ಲಿ ಒಬ್ಬರು ವಿಧವೆಯರು. ಬಹಳಷ್ಟು ಹುಡುಗಿಯರು ಬಾಲ್ಯದಲ್ಲೇ ವಿಧವೆಯರಾಗುವುದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಾಲ್ಯ ವಿವಾಹದ ಅಸ್ತಿತ್ವ ಹಾಗೂ ಚಿಕ್ಕ ವಯಸ್ಸಿನ ಹುಡುಗಿಯನ್ನು ಹಿರಿಯ ವಯಸ್ಸಿನ ಪುರುಷನೊಟ್ಟಿಗೆ ಮದುವೆ ಮಾಡುವ ಸಂಪ್ರದಾಯ ಕಾರಣವಾಗಿದೆ.

ಯುದ್ಧ, ಭಯೋತ್ಪಾದನೆ, ನಾಗರಿಕ ಸಂಘರ್ಷಗಳು, ಟಿಬಿ, ಏಡ್ಸ್ ಮುಂತಾದ ಮಾರಣಾಂತಿಕ ಖಾಯಿಲೆಗಳು, ಕೆಲಸದಲ್ಲಿನ ಅಪಘಾತಗಳಿಂದ ಆಗುವ ಗಂಡನ ಸಾವು, ಸಾಂಪ್ರದಾಯಿಕ ಮನಸ್ಥಿತಿಗಳು, ಅಕಾಲಿಕ ಮರಣ, ಮಹಿಳೆಯರ ದೀರ್ಘಾಯುಷ್ಯ ಇತ್ಯಾದಿಗಳು ವಿಧವಾ ವೇತನಕ್ಕೆ ಕಾರಣಗಳೆಂದು ಪಟ್ಟಿಮಾಡಬಹುದು.

ಭಾರತದ ಪರಿಸ್ಥಿತಿ:  
ಅದೇ ವರದಿಯ ಪ್ರಕಾರ ಮೂವರು ವಿಧವೆಯರಲ್ಲಿ ಒಬ್ಬರು ಭಾರತ ಅಥವಾ ಚೀನಾ ದೇಶದವರು. ಭಾರತದಲ್ಲಿ 4.6 ಕೋಟಿ ಜನ ವಿಧವೆಯರಿದ್ದಾರೆ; ಚೀನಾದಲ್ಲಿ 4.46 ಕೋಟಿ ಜನ ವಿಧವೆಯರಿದ್ದಾರೆ. ಆ ಮೂಲಕ ಭಾರತವೇ ವಿಶ್ವದಲ್ಲಿ ಅತಿ ಹೆಚ್ಚು ವಿಧವೆಯರನ್ನು ಹೊಂದಿರುವ ದೇಶವಾಗಿದೆ! ಇನ್ನೊಂದು ಅಂದಾಜಿನ ಪ್ರಕಾರ ಭಾರತದಲ್ಲಿನ ಒಟ್ಟಾರೆ ಸ್ತ್ರೀಯರ ಸಂಖ್ಯೆಯಲ್ಲಿ ಶೇ. 8ರಷ್ಟು ವಿಧವೆಯರು. ಆದರೆ ಒಟ್ಟಾರೆ ಪುರುಷರ ಸಂಖ್ಯೆಯಲ್ಲಿ ಶೇ. 2.5ರಷ್ಟು ವಿಧುರರು. ಭಾರತದಲ್ಲಿನ 60 ವಯಸ್ಸಿನ ಹಾಗೂ ಅದಕ್ಕೂ ಮೇಲ್ಪಟ್ಟ ವಿಧವೆಯರಲ್ಲಿ ಶೇ. 93ರಷ್ಟು ಅನಕ್ಷರಸ್ಥ ವಿಧವೆಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೀವಿಸಿದರೆ, ಶೇ. 68ರಷ್ಟು ಅನಕ್ಷರಸ್ಥ ವಿಧವೆಯರು ನಗರ ಪ್ರದೇಶದಲ್ಲಿ ಜೀವಿಸುತ್ತಾರೆ. ವಿಶ್ವ ವಿಧವೆಯರ ದಿನದ ಹಿನ್ನೆಲೆಯಲ್ಲಿ ಭಾರತದ ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರದಲ್ಲಿನ ವಿಧವೆಯರ ಸ್ಥಿತಿಗತಿಯ ಚಿತ್ರಣವನ್ನು ಗಮನಿಸಬೇಕಾಗುತ್ತದೆ. ಭಾರತದಲ್ಲಿ ಸ್ವಾತಂತ್ರ ಪೂರ್ವದಲ್ಲಿ ವಿಧವೆಯರು ತೀವ್ರ ಶೋಚನೀಯ ಪರಿಸ್ಥಿತಿಯಲ್ಲಿದ್ದರು.

ಆಗಿನ ಕಾಲದಲ್ಲಿಯೇ ವಿಧವೆಯರ ಸ್ಥಿತಿಗತಿಯನ್ನು ಉತ್ತಮಪಡಿಸಲು, ಅವರಿಗೆ ಸ್ಥಾನಮಾನ ದೊರೆಯುವಂತೆ ಮಾಡಲು, ಅವರಿಗೆ ಮತ್ತೊಂದು ಮದುವೆಯ ಅವಕಾಶ ಕೊಡಿಸಲು ಹಾಗೂ ಅವರನ್ನು ಮಾನವರಂತೆ ಕಾಣಲು ರಾಜಾರಾಂ ಮೋಹನ್ ರಾಯ್ ಹಾಗೂ ಈಶ್ವರಚಂದ್ರ ವಿದ್ಯಾಸಾಗರ್ ಅವರು ಬಹಳಷ್ಟು ಹೋರಾಡಿದ್ದಾರೆ. ರಾಜಾರಾಂ ಮೋಹನ್ ರಾಯ್ ಅವರಿಂದಲೇ ವಿಧವೆಯರನ್ನು ಸುಡುವ ‘ಸತಿ’ ಪದ್ಧತಿ ನಿಷೇಧವಾಯಿತು; ಈಶ್ವರಚಂದ್ರ ವಿದ್ಯಾಸಾಗರ್ ಅವರ ಅವಿರತ ಹೋರಾಟದ ಫಲದಿಂದಲೇ ವಿಧವೆಯರು ಪುನರ್ವಿವಾಹದ ಹಕ್ಕನ್ನು ಪಡೆದುಕೊಂಡಿದ್ದನ್ನು ಈ ದಿನವಾದರೂ ಭಾರತೀಯರು ನೆನೆಯಬೇಕು. ಸ್ವಾತಂತ್ರ ಬಂದ ನಂತರ ವಿಧವೆಯರ ಸ್ಥಿತಿಗತಿಗಳಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದ್ದರೂ ಅದು ಕೂಡ ಸಮಾಧಾನಕರ ಮಟ್ಟದಲ್ಲಿಲ್ಲ. ಭಾರತ ಸರಕಾರ ಸ್ವಾತಂತ್ರ ಬಂದ ನಂತರ ವಿಧವೆಯರ ಸ್ಥಿತಿಗತಿಯನ್ನು ಉತ್ತಮ ಪಡಿಸಲು, ವಿಧವೆಯರು ಹಾಗೂ ಅವರ ಮಕ್ಕಳನ್ನು ರಕ್ಷಿಸಲು ವಿವಿಧ ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳಿಂದಲೇ ವಿಧವೆಯರಿಗೆ ಗಂಡನ ಆಸ್ತಿಯಲ್ಲಿನ ಪಾಲಿಗೆ ಸಂಬಂಧಿಸಿದಂತಹ ಹಕ್ಕುಗಳು ದೊರೆತಿವೆ. ಆದರೆ ಈಗಲೂ ಭಾರತದಲ್ಲಿ ವಿಧವೆಯರು ಪ್ರಥಮ ದರ್ಜೆ ಪ್ರಜೆಯಾಗಿ ಪರಿಗಣಿಸಲ್ಪಡುವುದಿಲ್ಲ. ವಿಧವೆಯರು ಈಗಲೂ ಶೋಚನೀಯ ಪರಿಸ್ಥಿತಿಯಲ್ಲಿರುವ, ಸಬಲೀಕರಣವಾಗಬೇಕಿರುವ ಒಂದು ರೀತಿಯ ಹಿಂದುಳಿದ ವರ್ಗವಾಗಿ ಉಳಿದು ಬಿಟ್ಟಿದ್ದಾರೆ. ಅವರೂ ಸಾಮಾನ್ಯ ಮನುಷ್ಯನಂತೆ ಜೀವಿಸುವ, ಸಂಗಾತಿಯನ್ನು ಹುಡುಕಿಕೊಳ್ಳುವ, ಮರುಮದುವೆಯಾಗಿ ಹೊಸ ಬದುಕನ್ನು ಶುರು ಮಾಡುವ ಉದಾತ್ತ ಸಾಂಸ್ಕೃತಿಕ ವಾತಾವರಣವನ್ನು ಸಮಾಜ ಹಾಗೂ ಸರಕಾರ ಸೃಷ್ಟಿಸಬೇಕು.

ವಿಧುರರಿಗೆ ಸಿಗುವ ಸಾಮಾಜಿಕ ಸ್ಥಾನಮಾನ ವಿಧವೆಯರಿಗೆ ಸಿಗುತ್ತಿಲ್ಲ. ಯಾಕೆಂದರೆ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಪುರುಷ ಪ್ರಧಾನ ಸಮಾಜವನ್ನು ಹೊಂದಿರುವ ರಾಷ್ಟ್ರಗಳು. ಆ ನಿಟ್ಟಿನಲ್ಲಿಯೂ ಕೂಡ ಮಹಿಳಾ ಪ್ರಧಾನ ಸಮಾಜಕ್ಕೆ ಒತ್ತಾಯಿಸುವ ದೃಷ್ಟಿಯಿಂದಲೂ ಈ ವಿಧವೆಯರ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಅಂತಿಮ ಪರಿಹಾರ: ಜಗತ್ತಿನ ಎಲ್ಲ ವಿಧವೆಯರ ಆರ್ಥಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ ಹಾಗೂ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯನ್ನು ಸರಕಾರಗಳ ಜೊತೆಜೊತೆಗೆ ಸಮಾಜವು ವಹಿಸಿಕೊಂಡಾಗಲೇ ಈ ದಿನದ ಆಚರಣೆಗೆ ನಿಜವಾಗಿಯೂ ಬೆಲೆಬರುವುದು.

Writer - ಮಜೀದ್ ಎಚ್.ಎನ್.

contributor

Editor - ಮಜೀದ್ ಎಚ್.ಎನ್.

contributor

Similar News