ಗುಣಾಂಕ ಆಧರಿತ ಸ್ವಾಯತ್ತತೆ ಮತ್ತು ಉನ್ನತ ಶಿಕ್ಷಣದ ಖಾಸಗೀಕರಣ

Update: 2018-06-22 18:43 GMT

ಒಮ್ಮೆ ಖಾಸಗಿ ಬಂಡವಾಳಶಾಹಿಗಳ ಸುಪರ್ದಿಗೆ ಉನ್ನತ ಶಿಕ್ಷಣ ಜಾರಿಹೋದರೆ ಅದು ಏಕಸ್ವಾಮ್ಯವನ್ನು ಸಾಧಿಸುತ್ತದೆ ಮತ್ತು ಶುಲ್ಕ, ಪ್ರವೇಶಾತಿ, ನೀತಿ ನಿಯಮಾವಳಿಗಳು ಮತ್ತಿತರ ಸಂಬಂಧಿತ ವಿಷಯಗಳಲ್ಲಿ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತದೆ. ಈ ವ್ಯಾಪಾರೀಕರಣದಿಂದ ದಲಿತರು, ತಳಸಮುದಾಯಗಳು ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಾರೆ. ಸಾಮಾಜಿಕ ನ್ಯಾಯದ ಇಡೀ ಆಶಯವೇ ನಾಶಗೊಳ್ಳುತ್ತದೆ.


ಯುಜಿಸಿಯು (ವಿಶ್ವವಿದ್ಯಾನಿಲಯ ಅನುದಾನ ಸಮಿತಿ) ಮಾರ್ಚ್ 20, 2018ರಂದು 60 ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು, ಕಾಲೇಜುಗಳಿಗೆ ಗುಣಾಂಕ ಸ್ವಾಯತ್ತತೆ (Graded autonomy) ಕೊಡಲಾಗುವುದೆಂದು ಪ್ರಕಟನೆ ಹೊರಡಿಸಿದೆ. ದೇಶದ 52 ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು, 8 ಉನ್ನತ ಶಿಕ್ಷಣ ಕಾಲೇಜುಗಳಿಗೆ ಅವುಗಳ ಕಾರ್ಯನಿರ್ವಹಣ ಸಾಮರ್ಥ್ಯದ ಮೇಲೆ ಸ್ವಾಯತ್ತತೆಯನ್ನು ನೀಡಲಾಗುವುದು. ಈ ಸಾಮರ್ಥ್ಯವನ್ನು ನ್ಯಾಕ್ (NAAC) ಮಾಡುವ ಮೌಲ್ಯಮಾಪನ ಮತ್ತು ಆ ಮೂಲಕ ಗಳಿಸುವ ಗುಣಾಂಕಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಇಲ್ಲಿ ಕಾಲೇಜುಗಳು ಮತ್ತು ವಿವಿಗಳನ್ನು ನಮೂನೆ 1 (3.5 ಮತ್ತು ಅಧಿಕ ನ್ಯಾಕ್ ಗುಣಾಂಕ) ಮತ್ತು ನಮೂನೆ 2 (3.26- 3.5 ನ್ಯಾಕ್ ಗುಣಾಂಕ) ಎಂದು ವರ್ಗೀಕರಿಸಲಾಗುವುದು. ಈ ವರ್ಗೀಕರಣವು ಸ್ವಾಯತ್ತತೆಯ ವ್ಯಾಪ್ತಿ ಮತ್ತು ದರ್ಜೆಯನ್ನು ನಿರ್ಧರಿಸುತ್ತದೆ ಎಂದು ತನ್ನ ಪ್ರಕಟನೆಯಲ್ಲಿ ವಿವರಿಸಿದೆ.

ಈ 60 ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ವಿವಿಗಳಾದ ಜೆಎನ್‌ಯು, ಬಿಎಚ್‌ಯು (ಬನಾರಸ್), ಎಎಮ್‌ಯು (ಅಲಿಗಡ), ಇತರ ವಿವಿಗಳು ಮತ್ತು ರಾಜ್ಯ ವಿವಿಗಳಾದ ಮದ್ರಾಸ್, ಉಸ್ಮಾನಿಯ, ಜಾದವಪುರ, ಪಂಜಾಬ್ ವಿವಿಗಳು, ಇತರ ವಿವಿಗಳು ಮತ್ತು ಕೆಲ ಖಾಸಗಿ ಸಂಸ್ಥೆಗಳಾದ ಜಿಂದಾಲ್ ಗ್ಲೋಬಲ್, ದೀನ್ ದಯಾಲ್ ಪೆಟ್ರೋಲಿಯಂನಂತಹ ಖಾಸಗಿ ವಿವಿಗಳು ಒಳಗೊಂಡಿವೆ. ಮೊದಲ ಹತ್ತು ವರ್ಷಗಳಿಗೆ ಈ ಸ್ವಾಯತ್ತತೆಯನ್ನು ಸೀಮಿತಗೊಳಿಸಲಾಗಿದೆ. ಅವಶ್ಯಕತೆ ಬಿದ್ದರೆ ಅವಧಿಯನ್ನು ವಿಸ್ತರಿಸಬಹುದಾಗಿದೆ. ಮೀಸಲಾತಿ ಕಾರ್ಯನೀತಿಯು ಅನ್ವಯವಾಗುತ್ತದೆ. ಇಲ್ಲಿ ತಮಾಷೆಯೆಂದರೆ ಅನೇಕ ರಾಜ್ಯ, ಕೇಂದ್ರ ವಿವಿಗಳು ಈ ಸ್ವಾಯತ್ತತೆಗೆ ಮನವಿಯನ್ನು ಸಹ ಸಲ್ಲಿಸಿರಲಿಲ್ಲ. ಜಾದವಪುರ ವಿವಿಯ ಅಧ್ಯಾಪಕರ ಸಂಘದ ಪದಾಧಿಕಾರಿಗಳು ‘‘ನಾವೆಲ್ಲಿ ಯುಜಿಸಿಗೆ ಬೇಡಿಕೆಯನ್ನು ಸಲ್ಲಿಸಿದ್ದೇವೆ?’’ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಬನಾರಸ್ ವಿವಿ ಮತ್ತು ಉಸ್ಮಾನಿಯ ವಿವಿಗಳೂ ಕೋರಿಕೆಯನ್ನು ಸಲ್ಲಿಸಿರಲಿಲ್ಲ. ಆದರೆ ಹೈದರಾಬಾದ್ ವಿವಿ, ಉಸ್ಮಾನಿಯ ವಿವಿ, ಆಂಧ್ರ ವಿವಿಗಳು ಬೇಡಿಕೆಯನ್ನು ಸಲ್ಲಿಸಿದ್ದವು ಎಂದು ಹೇಳಲಾಗುತ್ತಿದೆ.

ಮಾನವ ಸಂಪನ್ಮೂಲ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣದ ನಿರ್ಧಾರವನ್ನು ‘‘ಐತಿಹಾಸಿಕ ದಿನ’’ ಎಂದು ಸಂಭ್ರಮಿಸಿದ್ದಾರೆ. ದಿಲ್ಲಿ ವಿವಿಯ ಪ್ರೊ. ಸೈಕತ್ ಘೋಷ್ ಅವರು, ‘‘ಭಾರತದ ಉನ್ನತ ಶಿಕ್ಷಣದ ಇತಿಹಾಸದಲ್ಲಿ ಇದು ಕರಾಳ ದಿನ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ವಿಶ್ವಾಸಾರ್ಹತೆ ಕಳೆದುಕೊಂಡ ಭಾಗವೇ ಈ ಸ್ವಾಯತ್ತತೆಯ ಕಲಮು’’ ಎಂದು ಟೀಕಿಸಿದ್ದಾರೆ. ದಿಲ್ಲಿ ವಿವಿ ಪ್ರಾಧ್ಯಾಪಕರ ಸಂಘದ ಉಪಾಧ್ಯಕ್ಷ ಸುದಾಂಶು ಕುಮಾರ್ ಅವರು ‘‘ಬಿಜೆಪಿ ಸರಕಾರವು ಯುಜಿಸಿ ಬಜೆಟ್ ಅನ್ನು ಸತತವಾಗಿ ಕಡಿತಗೊಳಿಸುತ್ತಿದೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಕೊನೆಗೊಳಿಸಲು ಗುಪ್ತಕಾರ್ಯಸೂಚಿಯ ಭಾಗವಾಗಿ ಈ ಗುಣಾಂಕ ಸ್ವಾಯತ್ತತೆಯನ್ನು ಪ್ರಸ್ತಾಪಿಸಲಾಗಿದೆ’’ ಎಂದು ಟೀಕಿಸಿದ್ದಾರೆ. ಆದರೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಪೂರ್ವದಲ್ಲಿ ಮಾನವ ಸಂಪನ್ಮೂಲ ಇಲಾಖೆ, ಯುಜಿಸಿಯು ಶಿಕ್ಷಣ ತಜ್ಞರೊಂದಿಗೆ, ವಿದ್ಯಾರ್ಥಿ ಸಂಘಟನೆಗಳೊಂದಿಗೆ, ಪ್ರಾಧ್ಯಾಪಕರ ಸಂಘಟನೆಗಳೊಂದಿಗೆ ಇದರ ಸಾಧಕ, ಬಾಧಕಗಳ ಕುರಿತಾಗಿ ಸಮಾಲೋಚನೆ ನಡೆಸಲಿಲ್ಲ ಎನ್ನುವ ಅಂಶವೂ ಟೀಕೆಗೆ ಗುರಿಯಾಗಿದೆ.

ಗುಣಾಂಕ ಸ್ವಾಯತ್ತತೆ ಹಿಂದು-ಮುಂದು

ಇಲ್ಲಿ ಮೂಲವಾಗಿ ಸ್ವಾಯತ್ತತೆ ಅರ್ಥ ಸ್ವಯಂ-ಹಣಕಾಸಿನ ನಿರ್ವಹಣೆ. ಒಂದು ವಿವಿಯನ್ನು, ಕಾಲೇಜನ್ನು ನಡೆಸಲು ಅಲ್ಲಿನ ಆಡಳಿತ ಮಂಡಳಿಯು ಆರ್ಥಿಕ ನೆರವನ್ನು ಕ್ರೋಡೀಕರಿಸಿಕೊಳ್ಳಬೇಕು. ಯುಜಿಸಿಯ ಈ ಹೊಸ ಗುಣಾಂಕ ಸ್ವಾಯತ್ತತೆಯನ್ನು ಪಡೆದುಕೊಂಡ ನಂತರ ಈ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಬಹುದು, ತಮ್ಮದೇ ಆದ ಬೋಧನೆ ಮತ್ತು ಕಲಿಕಾ ಸಲಕರಣೆಗಳನ್ನು, ತಮ್ಮದೇ ಕಾರ್ಯಸೂಚಿಗಳನ್ನು, ಪಠ್ಯೇತರ ಚಟುವಟಿಕೆಗಳನ್ನು ರೂಪಿಸಬಹುದು, ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಬಹುದು, ಸಂಶೋಧನಾ ಪಾರ್ಕ್‌ಗಳನ್ನು ಪ್ರಾರಂಭಿಸಬಹುದು. ಸ್ವಯಂ ಅನ್ನು ಬಳಸಿಕೊಂಡು ಸಾಂಧ್ರವಾದ ಆನ್‌ಲೈನ್ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸಬಹುದು.

ವಿದ್ಯಾರ್ಥಿಗಳ ಬುದ್ಧಿಮತ್ತೆ ಮತ್ತು ಕಲಿಕೆಯನ್ನು ಮೌಲ್ಯಮಾಪನ ಮಾಡಲು ತಮ್ಮದೇ ಆದ ವಿಧಾನಗಳನ್ನು, ಪರೀಕ್ಷೆಗಳನ್ನು ರೂಪಿಸಬಹುದು ಮತ್ತು ಮುಖ್ಯವಾಗಿ ಇಡೀ ಶಿಕ್ಷಣಕ್ಕೆ ತಗಲುವ ಶುಲ್ಕವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಸಹ ಕೊಡಲಾಗಿದೆ. ಸ್ವಾಯತ್ತತೆ ಪಡೆದ ಕಾಲೇಜು, ವಿವಿಗಳು ತಮ್ಮದೇ ಪ್ರಾಧ್ಯಾಪಕ, ಮುಖ್ಯಸ್ಥರನ್ನು ನೇಮಿಸಿಕೊಳ್ಳಬಹುದು. ಪಿಎಚ್‌ಡಿ ಒಳಗೊಂಡಂತೆ ಪದವಿ ಪ್ರಮಾಣ ಪತ್ರ ನೀಡುವಾಗ ಸಂಬಂಧಿತ ಕಾಲೇಜಿನ ಹೆಸರನ್ನು ಮತ್ತು ವಿವಿಯ ಹೆಸರನ್ನು ಒಳಗೊಂಡಿರುತ್ತದೆ. ವಿದೇಶಿ ಪ್ರಾಧ್ಯಾಪಕರು, ವಿದೇಶಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು. ಈ ಯುಜಿಸಿ ತಿದ್ದುಪಡಿಯು ಶೇ. 20 ಪ್ರಮಾಣದ ಸ್ಥಾನವನ್ನು ವಿದೇಶಿ ಪ್ರಾಧ್ಯಾಪಕರಿಗೆ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಮೀಸಲಿಡಲು ಶಿಫಾರಸು ಮಾಡಿದೆ ಮತ್ತು ಮುಖ್ಯವಾಗಿ ಈ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯಕ್ರಮಗಳನ್ನು ರೂಪಿಸಲು ಯುಜಿಸಿಯ ಅನುಮತಿಯ ಅವಶ್ಯಕತೆ ಇಲ್ಲ. ಇದನ್ನು ಮತ್ತಷ್ಟು ವಿಶ್ಲೇಷಣೆ ಮಾಡುವುದಕ್ಕಿಂತ ಮೊದಲು ಇದಕ್ಕೆ ಸಂಬಂಧಿಸಿದ ಕೊಂಚ ಹಿಂದಿನ ವಿಧ್ಯಮಾನಗಳನ್ನು ಗಮನಿಸೋಣ.

2000ದಲ್ಲಿ ಉನ್ನತ ಶಿಕ್ಷಣದ ನೀತಿ ರೂಪಿಸಲು ನೇಮಕಗೊಂಡ ಬಿರ್ಲಾ ಅಂಬಾನಿ ಕಮಿಟಿಯು ಸರಕಾರವು ಪ್ರಾಥಮಿಕ ಶಿಕ್ಷಣ ಕಡೆ ತನ್ನ ಗಮನವನ್ನು ಕೇಂದ್ರೀಕರಿಸಬೇಕೆಂತಲೂ ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸಬೇಕೆಂತಲೂ ಶಿಫಾರಸು ಮಾಡಿತು. * 2003ರಲ್ಲಿ ಇಸ್ಲಾಮಿಕ್ ಶಿಕ್ಷಣ ಅಕಾಡಮಿ ವರ್ಸಸ್ ಕರ್ನಾಟಕ ಸರಕಾರದ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಹೆಚ್ಚುವರಿ ಹಣವನ್ನು ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಹೀಗಾಗಿ ಸಂಬಂಧಪಟ್ಟ ಖಾಸಗಿ ಸಂಸ್ಥೆಗಳೇ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಶುಲ್ಕವನ್ನು ನಿಗದಿಪಡಿಸಿಕೊಳ್ಳಲು ಸ್ವತಂತ್ರವಾಗಿವೆ ಎಂದು ತೀರ್ಪಿತ್ತಿದೆ

* 2005ರಲ್ಲಿ ಪಿಎ ಇನಾಂದಾರ್ ಕೇಸಿನಲ್ಲಿಯೂ ಖಾಸಗಿ ಸಂಸ್ಥೆಯು ಶುಲ್ಕವನ್ನು ತಾನೇ ನಿರ್ಧರಿಸಲು ಸ್ವತಂತ್ರವಾಗಿದೆ ಎಂದು ತೀರ್ಪಿತ್ತಿದೆ.
 * 2016-17ರಲ್ಲಿ ಬಜೆಟ್‌ನ ಶೇ. 4.8 ಪ್ರಮಾಣದಲ್ಲಿ ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಕೇಂದ್ರ ಸರಕಾರವು 2017-18ರಲ್ಲಿ ಇದನ್ನು 3.71 ಪ್ರಮಾಣಕ್ಕೆ ಕಡಿತಗೊಳಿಸಿತು. 2014ರಲ್ಲಿ 1,10,351 ಕೋಟಿ ರೂ.ವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಮೋದಿ ಸರಕಾರ ನಾಲ್ಕು ವರ್ಷಗಳ ನಂತರ 2018ರಲ್ಲಿ 79,685 ಕೋಟಿ ರೂ.ವನ್ನು ಮೀಸಲಿಟ್ಟಿದೆ. ಅಂದರೆ ನಾಲ್ಕು ವರ್ಷಗಳ ನಂತರ 30,666 ಕೋಟಿ ರೂ.ವನ್ನು ಕಡಿತಗೊಳಿಸಿದೆ.

 * ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ರೂಪುಗೊಂಡ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನಕ್ಕೆ ಮೂಲ ಬಜೆಟ್‌ನಲ್ಲಿ ರೂ.2,200 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಮೋದಿ ಸರಕಾರದ 2015-16ರ ಮುಂಗಡಪತ್ರದಲ್ಲಿ ಇದನ್ನು ಪರಿಷ್ಕರಿಸಿ ಈ ಮೊತ್ತವನ್ನು ರೂ. 397 ಕೋಟಿಗೆ ಇಳಿಸಿದೆ. ಅಂದರೆ ರೂ 1,803 ಕೋಟಿಗಳನ್ನು ಕಡಿತಗೊಳಿಸಿದೆ. ಸದೃಢವಾದ ಮುಕ್ತ ಆನ್‌ಲೈನ್ ಕೋರ್ಸುಗಳಿಗಾಗಿ ಮೀಸಲಿಟ್ಟ ರೂ.100 ಕೋಟಿಯನ್ನು ಪರಿಷ್ಕರಿಸಿ ರೂ.5 ಕೋಟಿಗಳಿಗೆ ಇಳಿಸಿದೆ. ಅಂದರೆ 95 ಕೋಟಿ ರೂ. ಕಡಿತಗೊಳಿಸಿದೆ. ಶಿಕ್ಷಕರ ತರಬೇತಿಗಾಗಿ ಮದನಮೋಹನ ಮಾಲವೀಯ ರಾಷ್ಟ್ರೀಯ ಮಿಷನ್‌ಗೆ ಮೀಸಲಿಟ್ಟ ರೂ.100 ಕೋಟಿಗಳನ್ನು ಪರಿಷ್ಕರಿಸಿ 15 ಕೋಟಿಗೆ ಇಳಿಸಿದೆ. ಅಂದರೆ 85 ಕೋಟಿ ರೂ. ಕಡಿತಗೊಳಿಸಿದೆ. 2016ರಲ್ಲಿ ನೀತಿ ಆಯೋಗವೂ ಸಹ ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಕಾರ್ಪೊರೇಟ್ ವ್ಯಾಪಾರ ಮಾದರಿಯನ್ನು ಶಿಕ್ಷಣಕ್ಕೆ ಅನ್ವಯಿಸಬೇಕು, ಮಾರುಕಟ್ಟೆಗೆ ಅನುವು ಮಾಡಿಕೊಡುವುದರ ಮೂಲಕ ಖಾಸಗೀಕರಣ ಎಂತೆಲ್ಲ ಶಿಫಾರಸು ಮಾಡಿದೆ

ದುಷ್ಪರಿಣಾಮಗಳು
  ಮೇಲಿನ ಮಾಹಿತಿಗಳನ್ನು, ಪ್ರಕ್ರಿಯೆಗಳನ್ನು ಗಮನಿಸಿದಾಗ ಬಿಜೆಪಿಯ ಗುಣಾಂಕ ಆಧಾರಿತ ಸ್ವಾಯತ್ತತೆಯ ಈ ಕ್ರಮವು ಒಂದು ಬಗೆಯ ಮುಕ್ತ ಮಾರುಕಟ್ಟೆ ಮಾದರಿಯ ಸ್ಪರ್ಧೆೆ ಏರ್ಪಡಿಸುವುದರ ಮೂಲಕ ಉನ್ನತ ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿವಾರಿಸಿ ಸಮಾಜದ ಎಲ್ಲಾ ಸ್ತರದ ಸಮುದಾಯಗಳಿಗೂ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದು ಸಾರ್ವಜನಿಕ ಶಿಕ್ಷಣದ ಆಶಯವಾಗಿತ್ತು. ಸಮತೆ ಮತ್ತು ಬಹುತ್ವದ ಮೂಲಕ ಮೇಲ್ಮುಖ ಚಲನೆಗೆ ಅವಕಾಶ ಕಲ್ಪಿಸುವುದೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮುಖ್ಯ ಧ್ಯೇಯವಾಗಿದೆ. ಆದರೆ ಈ ಗುಣಾಂಕ ಸ್ವಾಯತ್ತತೆಯು ಇಡೀ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹಂತ ಹಂತವಾದ ಖಾಸಗೀಕರಣಗೊಳಿಸುತ್ತದೆ. ಈ ಖಾಸಗೀಕರಣದಿಂದಾಗಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯೇ ಉದ್ಯಮವಾಗಿ, ಜ್ಞಾನವು ಒಂದು ಮಾರಾಟದ ಸರಕಾಗಿ ಪರಿಗಣಿಸಲ್ಪಡುತ್ತದೆ.

ಪ್ರಾಧ್ಯಾಪಕರು ಮಾರಾಟಗಾರರಾಗಿಯೂ ವಿದ್ಯಾರ್ಥಿಗಳು ಗ್ರಾಹಕರಾಗಿಯೂ ಪರಿಗಣಿಸಲ್ಪಡುತ್ತಾರೆ. ಇಲ್ಲಿ ಅಧ್ಯಯನ, ಸಂಶೋಧನೆ ಕಡೆಗಣಿಸಲ್ಪಡುತ್ತವೆ. ಶಿಕ್ಷಣ ಹಕ್ಕು ತನ್ನ ಪ್ರಸ್ತುತತೆಯನ್ನು, ಪಠ್ಯಗಳು, ಪಠ್ಯಕ್ರಮಗಳು ಸ್ಥಳೀಯ ದೇಸೀತನವನ್ನು ಕಳೆದುಕೊಂಡು ನೇರವಾಗಿ ಜಾಗತಿಕ ಮಾರುಕಟ್ಟೆಯ ಅಂಗಳದ ಜಾಲಕ್ಕೆ ಬೀಳುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜಾಗತಿಕ ಶಿಕ್ಷಣ ವ್ಯವಸ್ಥೆಗೆ ಹೊರಳಿಕೊಳ್ಳುವುದೆಂದರೆ ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಸೇವೆ, ಶಿಕ್ಷಣ ಹಕ್ಕುಗಳಂತಹ ಆಶಯಗಳು ಜಾಗತಿಕ ಸೇವೆಯ ಧೂಳಿನಲ್ಲಿ ಕಣ್ಮರೆಯಾಗುತ್ತವೆ ಎಂದರ್ಥ. ಶಿಕ್ಷಣವೆನ್ನುವುದು ಜ್ಞಾನ ಸಂಪಾದನೆ ಎನ್ನುವ ಮೂಲ ಆಶಯವಾಗಿ ಉಳಿಯದೆ ಬಂಡವಾಳವನ್ನು ಗಳಿಸುವ ಕಲಿಕೆಯ ಮಾರ್ಗವಾಗಿ ಬದಲಾಗುತ್ತದೆ. ಅನ್ಷೇಷಣಾ ಮಾರ್ಗದಲ್ಲಿ ಮುಂದುವರಿಯುತ್ತಾ ಸಾಮಾಜಿಕ-ಆರ್ಥಿಕ ಚಿಂತನೆಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಈ ಸಮಗ್ರತೆಯ ಜ್ಞಾನದಿಂದ ವಂಚಿತರಾಗಿ ಜಾಗತಿಕ ಮಾರುಕಟ್ಟೆಯ ತಂತ್ರಗಳಿಗೆ ಅನುಗುಣವಾಗಿ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಈ ನವ ಉದಾರೀಕರಣದ ಕಾರ್ಯವೇ ಮುಕ್ತ ಮಾರುಕಟ್ಟೆಯ ವ್ಯವಹಾರಕ್ಕೆ ಇರುವ ಅಡತಡೆಗಳನ್ನು ನಿವಾರಿಸುವುದು. ಇಲ್ಲಿ ಉನ್ನತ ಶಿಕ್ಷಣವನ್ನು ಮಾರುಕಟ್ಟೆ ನಿರ್ಧರಿಸುತ್ತದೆ ಮತ್ತು ಮಾರುಕಟ್ಟೆ ಅವಲಂಬಿತವಾಗಿರುತ್ತದೆ. ಈ ನವ ಉದಾರೀಕರಣದ ಮಾರುಕಟ್ಟೆ ತಂತ್ರವನ್ನು ಕುರಿತು ಶಿಕ್ಷಣ ತಜ್ಞ ಲಾಡರ್, ‘‘ಶಿಕ್ಷಣವನ್ನು ಉದ್ಯೋಗಾವಕಾಶದ ಮಟ್ಟಕ್ಕೆ ಇಳಿಸಲಾಗುತ್ತದೆ, ಮಾರ್ಕೆಟ್ ನಿರೀಕ್ಷೆಗಳಿಗೆ ಲಭ್ಯವಿರುವುದೆಂದರೆ ಅದು ಬುದ್ಧಿವಂತಿಕೆಯ ಲಕ್ಷಣವೆನಿಸಿಕೊಳ್ಳುತ್ತದೆ. ನಾಗರಿಕರು ಗ್ರಾಹಕರಾಗುತ್ತಾರೆ. ಸಾಮಾಜಿಕ ಐಕ್ಯತೆಯು ವೈಯಕ್ತಿಕ ಹಿತಾಸಕ್ತಿಯಾಗಿ ಬದಲಾಗುತ್ತದೆ’’ ಎಂದು ಹೇಳುತ್ತಾನೆ. ಸ್ವಾಯತ್ತತೆಯ ಹೆಸರಿನಲ್ಲಿ ನಿಯಂತ್ರಣವನ್ನು ಹೇರಲಾಗುವ ಈ ನೀತಿಯಲ್ಲಿ ಗುಣಮಟ್ಟ ಶಿಕ್ಷಣ ಮತ್ತು ಮೂಲಭೂತ ಸೌಕರ್ಯದ ಕುರಿತಾಗಿ ಯಾವುದೇ ಮೇಲ್ವಿಚಾರಣೆ ಇರುವುದಿಲ್ಲ

ಈ ಸ್ವಾಯತ್ತೆಯಿಂದಾಗಿ ವಿದ್ಯಾರ್ಥಿ-ಪ್ರಾಧ್ಯಾಪಕ ಅನುಪಾತದ ಮೇಲೆ ಪರಿಣಾಮ ಬೀರುತ್ತದೆ, ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮುಖ್ಯವಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಯುಜಿಸಿ ಮತ್ತು ಮಾನವ ಸಂಪನ್ಮೂಲ ಇಲಾಖೆಗೆ ಯಾವುದೇ ಹಿಡಿತವಿರುವುದಿಲ್ಲ ಮತ್ತು ಇವುಗಳ ನಿಯಂತ್ರಣಕ್ಕೊಳಪಡುವುದಿಲ್ಲ. ಈ ಗುಣಾಂಕ ಸ್ವಾಯತ್ತತೆಯಿಂದಾಗಿ ಪದವಿ ಮತ್ತು ಉದ್ಯೋಗದ ನಡುವೆ ನೇರ ಸಂಬಂಧ ಏರ್ಪಡುವುದರಿಂದ ಉನ್ನತ ಶಿಕ್ಷಣದಲ್ಲಿ ಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆ, ವೈಜ್ಞಾನಿಕ, ಸಾಮಾಜಿಕ, ಸಮಾಜ ಶಾಸ್ತ್ರೀಯ, ಭಾಷಾ ಅಧ್ಯಯನಗಳು ನಿರ್ಲಕ್ಷಕ್ಕೊಳಪಡುತ್ತವೆ. ಮತ್ತೊಂದೆಡೆ ಪ್ರಾಧ್ಯಾಪಕರ ವೃತ್ತಿಯ ಮೇಲೂ ಈ ಗುಣಾಂಕ ಆಧಾರಿತ ಸ್ವಾಯತ್ತತೆ ನೀತಿಯು ದುಷ್ಪರಿಣಾಮ ಬೀರಲಿದೆ. ಈಗಾಗಲೇ ನೌಕರಿ ಅಭದ್ರತೆಯಿಂದ ಬಳಲಿರುವ ಪ್ರಾಧ್ಯಾಪಕರು ಇನ್ನು ಮುಂದೆ ಖಾಯಂ ಆಗಿ ಅತಿಥಿ ಉಪನ್ಯಾಸಕರಾಗಿ ಉಳಿದುಬಿಡುತ್ತಾರೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಶುರುವಾಗುತ್ತದೆ. ಈ ಅತಿಥಿ ಉಪನ್ಯಾಸಕರಿಗೆ ಯಾವುದೇ ಸೌಲಭ್ಯಗಳಿರುವುದಿಲ್ಲ. ಈಗಿನ ಮೋದಿ-ಆರೆಸ್ಸ್ಸೆಸ್ ಆಡಳಿತದಲ್ಲಿ ಇಲ್ಲಿನ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಸಂಪೂರ್ಣವಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಸಂಘ ಪರಿವಾರದ ಕೈಗೊಂಬೆಯಾಗಿರುವುದನ್ನು ಕಾಣುತ್ತಿದ್ದೇವೆ. ಈ ಸ್ವಾಯತ್ತತೆ ಹೊಂದಿದ ಶಿಕ್ಷಣ ಸಂಸ್ಥೆಗಳಲ್ಲಿ ಆರೆಸ್ಸ್ಸೆಸ್ ಒಲವಿರುವ, ಹಿಂದುತ್ವವಾದಿಗಳು ಪ್ರಾಧ್ಯಾಪಕರು ಮತ್ತು ಉಪಕುಲಪತಿಗಳ ಹುದ್ದೆಗೆ ನೇಮಕಗೊಳ್ಳುತ್ತಾರೆ. ಈ ಗುಣಾಂಕ ಆಧಾರಿತ ಸ್ವಾಯತ್ತತೆಯಿಂದಾಗಿ ಬೋಧನಾ ಮತ್ತು ಕಲಿಕಾ ಶುಲ್ಕ ದುಬಾರಿಯಾಗಲಿದೆ. ಇದು ದಲಿತ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರಲಿದೆ. ಆರ್ಥಿಕ ಅಸಮರ್ಥತೆಯ ಕಾರಣಕ್ಕಾಗಿ ಅವರ ಆತ್ಮಶಕ್ತಿಯೇ ಉಡುಗುತ್ತದೆ. ಇದಕ್ಕೆ ಇತ್ತೀಚಿನ TISS(ಟಾಟಾ ಇನ್ಸಿಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್), ಮುಂಬೈ, ತುಳಜಾಪುರ, ಹೈದರಾಬಾದ್, ಗೌಹಾಟಿಯಲ್ಲಿನ ಶಿಕ್ಷಣ ಸಂಸ್ಥೆಗಳ ಉದಾಹರಣೆ ಕೊಡಬಹುದು.

2018ರ ಫೆಬ್ರವರಿಯಲ್ಲಿ TISS ಆಡಳಿತ ಮಂಡಳಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿದ್ದ ಸ್ಕಾಲರ್‌ಶಿಪ್ ಅನ್ನು ರದ್ದುಪಡಿಸಿತು ಮತ್ತು ಶುಲ್ಕ ವಿನಾಯಿತಿಯನ್ನು, ಹಾಸ್ಟೆಲ್ ಬಾಡಿಗೆ ರಿಯಾಯಿತಿಯನ್ನು ರದ್ದುಪಡಿಸಿ ಸುತ್ತೋಲೆ ಹೊರಡಿಸಿತು. ಇದಕ್ಕೆ ಹಣಕಾಸಿನ ಕೊರತೆಯ ಕಾರಣ ನೀಡಿತು. ಇದರಿಂದಾಗಿ ಈ ಮೊದಲು ಪ್ರತಿ ಸೆಮಿಸ್ಟರ್‌ಗೆ ತಿಂಗಳಿಗೆ 500 ರೂ. ಇದ್ದ ಹಾಸ್ಟೆಲ್ ಬಾಡಿಗೆ ಈ ವರ್ಷದಿಂದ ದಿಢೀರನೆ ರೂ. 16,000ಕ್ಕೇರಿದೆ. ಈ ಶುಲ್ಕ ರದ್ದತಿಯ ನಂತರ ಪ್ರತಿ ಸೆಮಿಸ್ಟರ್‌ಗೆ ರೂ. 80,000 ಬೋಧನಾ ಮತ್ತು ಇತರ ಶುಲ್ಕ ಪಾವತಿಸಬೇಕಾಗಿದೆ. (1944ರಲ್ಲಿ ಆಗಿನ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಈ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ಯೋಜನೆ (ಜಿಒಐ-ಪಿಎಂಎಸ್) ರೂಪಿಸಿತ್ತು). 2015ರಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ಹಿಂಪಡೆಯಲಾಗಿತ್ತು. ಆ ನಂತರ ಕಳೆದ ಮೂರು ವರ್ಷಗಳಲ್ಲಿ ಐಖಖ ವಿದ್ಯಾನಿಲಯಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದೇ ಮಾದರಿಯಲ್ಲಿ ಈ ಗುಣಾಂಕ ಆಧಾರಿತ ಸ್ವಾಯತ್ತತೆಯ ನೀತಿಯಿಂದಾಗಿ ಇದರ ಅಡಿಯಲ್ಲಿ ಬರುವ ವಿವಿಗಳಲ್ಲಿ ಮತ್ತು ಕಾಲೇಜುಗಳಲ್ಲಿ ದಲಿತರು, ತಳ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರವಾದ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ.

ಈ ಕ್ರಮವು ಈ ದುಬಾರಿ ಶುಲ್ಕವನ್ನು ಭರಿಸಲಾಗದ ವಿದ್ಯಾರ್ಥಿಗಳಿಗೆ ಸಾಲದ ನೆರವನ್ನು ನೀಡುವ ಸೌಲಭ್ಯವನ್ನು ಕಲ್ಪಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ. ಒಮ್ಮೆ ಖಾಸಗಿ ಬಂಡವಾಳಶಾಹಿಗಳ ಸುಪರ್ದಿಗೆ ಉನ್ನತ ಶಿಕ್ಷಣ ಜಾರಿಹೋದರೆ ಅದು ಏಕಸ್ವಾಮ್ಯವನ್ನು ಸಾಧಿಸುತ್ತದೆ ಮತ್ತು ಶುಲ್ಕ, ಪ್ರವೇಶಾತಿ, ನೀತಿ ನಿಯಮಾವಳಿಗಳು ಮತ್ತಿತರ ಸಂಬಂಧಿತ ವಿಷಯಗಳಲ್ಲಿ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತದೆ. ಈ ವ್ಯಾಪಾರೀಕರಣದಿಂದ ದಲಿತರು, ತಳಸಮುದಾಯಗಳು ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಾರೆ. ಸಾಮಾಜಿಕ ನ್ಯಾಯದ ಇಡೀ ಆಶಯವೇ ನಾಶಗೊಳ್ಳುತ್ತದೆ. ಈ ಗುಣಾಂಕ ಆಧಾರಿತ ಸ್ವಾಯತ್ತತೆಯಿಂದ ಕಾಲೇಜು, ವಿವಿಗಳಲ್ಲಿ ವೈವಿಧ್ಯತೆ ಮತ್ತು ಬಹುತ್ವವೂ ಕಣ್ಮರೆಯಾಗುತ್ತದೆ. ಕಡೆಗೆ ಈ ಸ್ವಾಯತ್ತತೆಯ ಕಾರಣದಿಂದ ಶಿಕ್ಷಣದ ಗುಣಮಟ್ಟವನ್ನು, ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ, ಯುಜಿಸಿ ಕಳೆದುಕೊಂಡಿರುತ್ತದೆ

ಇಲ್ಲಿನ ಸರಕಾರದ ನಡೆ ಕಂಡಾಗ ಪಾಟ್ರಿಕಾ ಬರ್ಚ ಅವರು ‘‘ಮಾರ್ಕೆಟ್ ನೀತಿಗಳಾದ ಕೊಳ್ಳುಬಾಕತನ, ಪೈಪೋಟಿ ಮತ್ತು ವಿಶೇಷ ಸವಲತ್ತುಗಳನ್ನು ಆಧರಿಸಿದ ಸಾಮರ್ಥ್ಯದ ಮೌಲ್ಯಮಾಪನಗಳೆಲ್ಲ ಇಂದು ಸ್ವೀಕೃತಗೊಂಡ ನೀತಿಗಳಾಗಿವೆ. ಸಾಮಾಜಿಕ ಫಲಿತಾಂಶಗಳನ್ನು ಇವುಗಳ ಮೇಲೆ ನಿರ್ಧರಿಸುತ್ತಾರೆ. ಇಂದು ಶಿಕ್ಷಣವು ನವ ಖಾಸಗೀಕರಣವಾಗಿದೆ. ಈ ನವ ಖಾಸಗೀಕರಣದಲ್ಲಿ ಶಿಕ್ಷಣ ನೀತಿ ಮತ್ತು ಮಾರುಕಟ್ಟೆ ನಡುವೆ ತುಂಬಾ ನಿಕಟವಾದ ಸಂಬಂಧಗಳಿವೆ’’ ಎಂದು ಹೇಳಿದ ಮಾತುಗಳು ನೆನಪಾಗುತ್ತದೆ. ಇದು ಸತ್ಯವೂ ಹೌದು.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News