ನಾಕೌಟ್ ಸುತ್ತಿನತ್ತ ಚಿತ್ತವಿರಿಸಿರುವ ಬೆಲ್ಜಿಯಂಗೆ ಟ್ಯುನಿಶಿಯ ಎದುರಾಳಿ

Update: 2018-06-22 18:45 GMT

  ಮಾಸ್ಕೊ, ಜೂ.22: ವಿಶ್ವಕಪ್ ಫುಟ್ಬಾಲ್ ಟೂರ್ನಿಯ ನಾಕೌಟ್ ಸುತ್ತಿನ ಮೇಲೆ ಕಣ್ಣಟ್ಟಿರುವ ಬೆಲ್ಜಿಯಂ ತಂಡ ಶನಿವಾರ ಟ್ಯುನಿಶಿಯ ತಂಡವನ್ನು ಎದುರಿಸಲಿದೆ. ಜೂ.28 ರಂದು ‘ಜಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೊದಲು ಮುಂದಿನ ಸುತ್ತಿನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಬೆಲ್ಜಿಯಂ ಬಯಸಿದೆ.

ಸೋಮವಾರ ಪನಾಮ ತಂಡವನ್ನು 3-0 ಅಂತರದಿಂದ ಮಣಿಸುವ ಮೂಲಕ ಬೆಲ್ಜಿಯಂ ರಶ್ಯದಲ್ಲಿ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಿತ್ತು. ರೊಮೆಲು ಲುಕಾಕು ಅವಳಿ ಗೋಲು ಬಾರಿಸಿ ತಂಡದ ಗೆಲುವಿಗೆ ದೊಡ್ಡ ಕಾಣಿಕೆ ನೀಡಿದ್ದರು. ಬೆಲ್ಜಿಯಂ ತಂಡ ವಿಶ್ವಕಪ್‌ನಲ್ಲಿ ಈತನಕ ಆಫ್ರಿಕದ ಎದುರಾಳಿ ವಿರುದ್ದ ಸೋತ ನಿದರ್ಶನವಿಲ್ಲ. ಟ್ಯುನಿಶಿಯ ತಂಡ ವಿಶ್ವಕಪ್‌ನಲ್ಲಿ ಈ ತನಕ ಯುರೋಪಿಯನ್ ತಂಡವನ್ನು ಸೋಲಿಸಿಲ್ಲ.

ವಿಶ್ವದ 3ನೇ ತಂಡವಾಗಿರುವ ಬೆಲ್ಜಿಯಂ 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಬೆಲ್ಜಿಯಂ ಈ ಬಾರಿ ಹಿಂದಿನ ಸಾಧನೆ ಪುನರಾವರ್ತಿಸುವ ವಿಶ್ವಾಸದಲ್ಲಿದೆ.

ಆಫ್ರಿಕ ದೇಶಗಳಾದ ಈಜಿಪ್ಟ್ ಹಾಗೂ ಮೊರಾಕ್ಕೊ ಕಳಪೆ ಪ್ರದರ್ಶನ ನೀಡಿ ಈಗಾಗಲೇ ಟೂರ್ನಿಯಿಂದ ಹೊರ ನಡೆದಿರುವ ಕಾರಣ ಟ್ಯುನಿಶಿಯ ತಂಡ ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.

ಇಂಗ್ಲೆಂಡ್ ವಿರುದ್ಧ ಟ್ಯುನಿಶಿಯ ತಂಡ ಸೋತ ಬಳಿಕ ಪ್ರತಿಕ್ರಿಯಿಸಿದ ಕೋಚ್ ನಬಿಲ್,‘‘ ಇಂಗ್ಲೆಂಡ್ ವಿರುದ್ದ ನಾವು ಡ್ರಾಗೊಳಿಸಿದ್ದರೆ ಅದೊಂದು ಉತ್ತಮ ಫಲಿತಾಂಶವಾಗುತ್ತಿತ್ತು. ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಗಮನ ನೀಡುವ ವಿಶ್ವಾಸದಲ್ಲಿದ್ದೇವೆ’’ ಎಂದರು.

 ಉಭಯ ತಂಡಗಳು ಎರಡನೇ ಬಾರಿ ವಿಶ್ವಕಪ್‌ನಲ್ಲಿ ಸೆಣಸಾಡಲಿವೆ. 2002ರಲ್ಲಿ ಕೊರಿಯಾ-ಜಪಾನ್‌ನ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಎರಡೂ ತಂಡಗಳು 1-1 ರಿಂದ ಡ್ರಾ ಸಾಧಿಸಿದ್ದವು. ಬೆಲ್ಜಿಯಂ-ಟ್ಯುನಿಶಿಯ ಒಟ್ಟು ಮೂರು ಬಾರಿ ಮುಖಾಮುಖಿಯಾಗಿವೆ. 1992ರಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಟ್ಯುನಿಶಿಯ 2-1 ರಿಂದ ಜಯ ಸಾಧಿಸಿತ್ತು. 2002ರ ವಿಶ್ವಕಪ್‌ನಲ್ಲಿ 1-1 ರಿಂದ ಡ್ರಾ ಸಾಧಿಸಿತ್ತು. 2014ರ ಜೂನ್‌ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಬೆಲ್ಜಿಯಂ ತಂಡ 1-0 ಅಂತರದಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News