ಸಾಗುವಳಿ ಚೀಟಿ ವಿತರಣೆಗೆ ಆಗ್ರಹ: ಜೂ.26 ರಿಂದ ರೈತರ ಅನಿರ್ಧಿಷ್ಟಾವಧಿ ಧರಣಿ
ಬೆಂಗಳೂರು, ಜೂ.23: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಉಳುಮೆ ಚೀಟಿ ನೀಡಬೇಕು ಮತ್ತು ಮರು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜೂ.26 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ರೈತರು ಮತ್ತು ನಿವೇಶನ ರಹಿತರ ಬೇಡಿಕೆಗಳಿಗಾಗಿ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬರಲಾಗಿದೆ. ಇದರ ಫಲವಾಗಿ ಹಿಂದಿನ ಸರಕಾರವು ನಗರದ 18 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ನೀಡಲು ತಿರ್ಮಾನ ಮಾಡಿತ್ತು. ಆದರೆ, ಇದುವರೆಗೂ ಬಡವರಿಗೆ ಭೂಮಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಬಡ ರೈತರಿಗೆ ಹಾಗೂ ನಿವೇಶನ ರಹಿತರಿಗೆ ನೀಡಲು ಗುರುತಿಸಿದ್ದ ಸುಮಾರು 16 ಸಾವಿರ ಎಕರೆ ಸರಕಾರಿ ಭೂಮಿ ಶ್ರೀಮಂತರು, ಮಠಾಧೀಶರ ಮತ್ತು ಭೂಗಳ್ಳರ ಪಾಲಾಗಿದೆ. ಅಲ್ಲದೆ, ಸಾವಿರಾರು ಬಡವರನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುತ್ತಿದ್ದಾರೆ. ಸರಕಾರಕ್ಕೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಜನರು ಭೂಮಿ ಮತ್ತು ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ, ಕೂಡಲೇ ಸರಕಾರ ಬಡ ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು ಹಾಗೂ ಹಕ್ಕುಪತ್ರಗಳನ್ನು ಮತ್ತು ನಿವೇಶನಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ನಗರ ಪ್ರದೇಶದಲ್ಲಿ ಕೂಲಿ ಮಾಡುತ್ತ ಜೀವನ ಸಾಗಿಸುವ ಸಾವಿರಾರು ಜನರು ದುಬಾರಿ ಬಾಡಿಗೆ ಮನೆಗಳಲ್ಲಿ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಹೀಗಾಗಿ, ನೂತನ ಸಮ್ಮಿಶ್ರ ಸರಕಾರ ಬಡ ರೈತರು ಹಾಗೂ ನಿವೇಶನ ರಹಿತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದು, ಅಂದು ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.