ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ಸಿಗುವ ವಿಶ್ವಾಸ: ಉಪ ಮುಖ್ಯಮಂತ್ರಿ ಪರಮೇಶ್ವರ್

Update: 2018-06-23 13:33 GMT

ಬೆಂಗಳೂರು, ಜೂ. 23: ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಗೃಹ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿದರು.

ಶನಿವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆಯವ್ಯಯ ಸಂಬಂಧ ಸಿಎಂ ಚರ್ಚಿಸುವ ಮುನ್ನ ಗೃಹ/ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದೇನೆ ಎಂದರು.

ನಗರದ ಕಸ ವಿಲೇವಾರಿ ಸಮಸ್ಯೆ, ಸಂಚಾರ ದಟ್ಟಣೆ ನಿಯಂತ್ರಣ, ವಿದ್ಯುತ್, ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ವಿಚಾರವಾಗಿ ಎಷ್ಟು ಅನುದಾನದ ಅವಶ್ಯಕ ಇದೆ ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ಸಭೆಯಲ್ಲಿ ಹಿರಿಯ ಅಧಿಕಾರಿಗಳು ಹಲವು ಸಲಹೆ ನೀಡಿದ್ದು, ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ಸಿಗುವ ವಿಶ್ವಾಸವಿದೆ ಎಂದು ಪರಮೇಶ್ವರ್ ಹೇಳಿದರು.

ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹಿರಿಯ ಅಧಿಕಾರಿಗಳಾದ ಕಮಲ್ ಫಂತ್, ಡಿ.ರೂಪಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News