ಚರ್ಚ್‌ಸ್ಟ್ರೀಟ್ ಕಳಪೆ ಕಾಮಗಾರಿ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ: ಬಿಬಿಎಂಪಿ ಮೇಯರ್ ಸಂಪತ್ ರಾಜ್

Update: 2018-06-23 13:54 GMT

ಬೆಂಗಳೂರು, ಜೂ.23: ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಕಳಪೆ ಕಾಮಗಾರಿ ಮಾಡಿರುವುದು ಸಾಬೀತಾದರೆ, ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.

ಶನಿವಾರ ನಗರದ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚ್‌ಸ್ಟ್ರೀಟ್ ಕಾಮಗಾರಿಯಲ್ಲಿ ಬಳಸಿರುವ ಕಾಬೂಲ್ ಸ್ಟೋನ್‌ಗಳು ಕಿತ್ತು ಹೋಗಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ತೆರಳಿ ಪರಿಶೀಲನೆ ನಡೆಸಿದ್ದೇನೆ. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಅಧಿಕಾರಿಗಳ ನಿರ್ಲಕ್ಷ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಚರ್ಚ್‌ಸ್ಟ್ರೀಟ್‌ನಲ್ಲಿ ಹಾಕಲಾಗಿರುವ ಕಾಬೂಲ್ ಸ್ಟೋನ್‌ಗಳು 25 ವರ್ಷಗಳ ಕಾಲ ದೀರ್ಘ ಬಾಳಿಕೆ ಬರುತ್ತವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಹೀಗಾಗಿ, ಈ ಪ್ರಕರಣವನ್ನು ಟಿವಿಸಿಸಿಗೆ ವಹಿಸಿ ತನಿಖೆ ನಡೆಸಲಾಗುವುದೆಂದು ತಿಳಿಸಿದರು.

ಚರ್ಚ್‌ಸ್ಟ್ರೀಟ್ ರಸ್ತೆ ದೇಶಕ್ಕೆ ಮಾದರಿ ಎಂದು ಹೇಳಲಾಗುತ್ತಿತ್ತು. ಆದರೆ, ಕಳಪೆ ಕಾಮಗಾರಿ ನಡೆಸಿ ಕರ್ತವ್ಯ ಲೋಪ ಮಾಡಿರುವುದು ಮೇಲು ನೋಟಕ್ಕೆ ಸಾಬೀತಾಗುತ್ತಿದೆ. ಹೀಗಾಗಿ, ಇದನ್ನು ಗಂಬೀರವಾಗಿ ಪರಿಗಣಿಸಿ ಕರ್ತವ್ಯಲೋಪ ಎಲ್ಲಿ ಆಗಿದೆ ಹಾಗೂ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಬೀದಿ ದೀಪಗಳ ನಿರ್ವಹಣೆ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಂಡು ಸಮಸ್ಯೆ ಸಮಸ್ಯೆ ಬಗೆಹರಿಸಲಾಗುವುದು. ಜೊತೆಗೆ, ಗುತ್ತಿಗೆದಾರರ ಮನವೊಲಿಸಿ ಮುಷ್ಕರ ತ್ಯಜಿಸಿ, ಸೇವೆಗೆ ಹಾಜರಾಗುವಂತೆ ಮನವೊಲಿಸಲಾಗುವುದು ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News