ಶಂಬಾ ಜೋಶಿ

Update: 2018-06-23 18:34 GMT

‘ಶಿವರಹಸ್ಯ’ವನ್ನು ಬರೆಯುತ್ತಿದ್ದ ಕಾಲದಲ್ಲಿ ಶಂಬಾ ಅವರ ಮಗನಿಗೆ ಟೈಫಾಯಿಡ್ ಬಂತು. ಇದೇ ಪುಸ್ತಕ ಪ್ರಕಟವಾದ ಕಾಲದಲ್ಲಿ ಆತನಿಗೆ ಮತ್ತೆ ಇದೇ ಕಾಯಿಲೆ ಮರುಕಳಿಸಿತು. ಆಗ ಶಂಬಾ ಅವರ ಆಪ್ತ ವಲಯದವರು ಇದು ಶಿವರಹಸ್ಯವನ್ನು ಹೊರಗೆಡಹಿದುದರ ಫಲ ಎಂದು ಭಾವಿಸಿದರು. ಅವರ ಈ ಭಾವನೆ, ಮಾತುಗಳು ಶಂಬಾ ಅವರನ್ನು ಕೆಲಕಾಲ ದಂಗುಬಡಿಸಿತು. ಶಂಬಾ ಸ್ವವಿಮರ್ಶೆಗೆ ತೊಡಗಿದರು. ‘‘ನಾನು ಬರೆದಿರುವುದು ಸತ್ಯ. ಈ ಸತ್ಯವನ್ನು ಹೊರಗೆಡಹಿದುದರಿಂದಾಗಿ ಆ ‘ಶಿವ’ ನನ್ನ ಮಗನನ್ನು ‘ಕೊಂದ’ರೂ ಅಡ್ಡಿಯಿಲ್ಲ. ನನಗೆ ಸತ್ಯವೆಂದು ತೋರಿದ್ದನ್ನು ಹೇಳಿಯೇ ಇದ್ದೇನೆ’’ ಎಂಬ ಸಮಾಧಾನವನ್ನು ಪಡೆದರು.

ತಮ್ಮ ಪೂರ್ವಗ್ರಹಿಕೆಯನ್ನು ಬೆಂಬಲಿಸದ ಮಾಹಿತಿ ಅಥವಾ ದಾಖಲೆಗಳನ್ನು ಉಲ್ಲೇಖಿಸದೆ ಉಪಾಯವಾಗಿ ಕೈಬಿಡುವ, ಇಲ್ಲವೇ ಅವುಗಳ ಸಾಚಾತನವನ್ನೇ ಪ್ರಶ್ನಿಸಿ ನಿರಾಕರಿಸುವ ಮೂಲಕ ಸಂಶೋಧನೆಗೆ ಅಪಚಾರ ಎಸಗುವ ಮಾದರಿಯೊಂದು ಕನ್ನಡದಲ್ಲಿ ಇದೆ. ಇದು ಬಹಳ ಅಪಾಯಕಾರಿಯಾದುದು. ಸಂಶೋಧನೆಯ ಜೀವವಿರುವುದೇ ಅದರ ಪರಮವೌಲ್ಯವಾದ ಸತ್ಯಶೋಧನೆಯಲ್ಲಿ.

‘ಏನನ್ನೂ ಬಚ್ಚಿಡದೆ ಸಂಭವಿಸಿದ ಸಂಗತಿಗಳನ್ನು ಸಾಧಾರ ವಾಗಿ ಪ್ರಾಮಾಣಿಕವಾಗಿ ನಿವೇದಿಸುವುದು ಐತಿಹಾಸಿಕ ಸಮೀಕ್ಷೆಯ ಕೆಲಸ’ - ಇದು ‘ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ’ ಎಂಬ ಪುಸ್ತಕದ ಕೊನೆಯ ಸಾಲು. ಇದನ್ನು ಬರೆದವರು ತಮ್ಮ ವಿಶಿಷ್ಟ ಅಧ್ಯಯನ ಶಿಸ್ತು ಮತ್ತು ವಿಭಿನ್ನ ಮಾದರಿಗಳಿಂದ ಸಂಶೋಧನೆಗೊಂದು ಘನತೆ ಮತ್ತು ಮಹತ್ವ ತಂದುಕೊಟ್ಟ ಶಂಬಾ ಜೋಶಿ ಎಂದೇ ಪ್ರಸಿದ್ಧ ರಾದ ಶಂಕರರಾವ್ ಬಾಳ ದೀಕ್ಷಿತ ಜೋಶಿ (1896-1991).

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನಿಸಿದ ಶಂಬಾ ಅವರು ಪುಣೆಯಲ್ಲಿ ವಿದ್ಯಾಭ್ಯಾಸ, ಉದ್ಯೋಗ ಮಾಡುತ್ತ 1930ರವರೆಗೆ ಅಲ್ಲಿದ್ದು ನಂತರ ಧಾರವಾಡಕ್ಕೆ ಬಂದು ಶಿಕ್ಷಕ ವೃತ್ತಿಯಲ್ಲಿ ತೊಡಗಿದರು. ಶಂಬಾ ಅವರ ಆದ್ಯತೆಯಿದ್ದುದು ಲಿಖಿತ ಪಠ್ಯಗಳೊಂದಿಗೆ ಪುರಾಣ, ಸಂಕೇತ, ಆಚರಣೆ, ಜನರ ನಂಬಿಕೆಗಳ ಮೂಲಕ ಸಾಂಸ್ಕೃತಿಕವಾಗಿ ಕನ್ನಡ ಅಸ್ಮಿತೆಯನ್ನು ನಿರ್ವಚಿಸುವುದರಲ್ಲಿ. ಕನ್ನಡ ಜನಸಮುದಾಯದ ಬೇರುಗಳನ್ನು ವಿಭಿನ್ನ ಆಕರಗಳ ಮೂಲಕ ಹುಡುಕಲು ಪ್ರಯತ್ನಿಸಿದ ಶಂಬಾ ಜೋಶಿ ಅವರು ಆ ಮೂಲಕವೇ ಕನ್ನಡ ಸಂಶೋಧನೆ ಸಾಗಬೇಕಾದ ಹಾದಿಯನ್ನು ನಿರ್ದೇಶಿಸಿದವರು. ಶಂಬಾ ಅವರಿಗೆ ಸಂಶೋಧನೆಯೊಂದು ಗೀಳಲ್ಲ. ಅದವರ ಪಾಂಡಿತ್ಯ ಪ್ರದರ್ಶನದ ಅಖಾಡವೂ ಆಗಿರಲಿಲ್ಲ. ಅಜೆಂಡಾವೊಂದನ್ನು ಪೋಷಿಸುವ ಮತ್ತು ಬಲಗೊಳಿಸುವ ಹಿತಾಸಕ್ತಿಯನ್ನೂ ಹೊಂದಿರಲಿಲ್ಲ. ಅವರ ಸಂಶೋಧನೆಗೆ ಒಂದು ನಿರ್ದಿಷ್ಟ ಗುರಿಯಿತ್ತು. ಸಂಶೋಧನೆಗಳು ಗತದ ಅವಿವೇಕದಿಂದ ಆದ ಗಾಯಗಳಿಗೆ ವರ್ತಮಾನದ ವಿವೇಕದ ಮದ್ದಾಗಬೇಕು, ನಿನ್ನೆಯ ಕುರಿತ ಸಂಶೋಧನೆಯಿಂದ ಕಂಡುಕೊಂಡದ್ದು ಇಂದಿನ ಬದುಕನ್ನು ಒಂದಿಷ್ಟಾದರೂ ಹಸನು ಮಾಡುವಂತಿರಬೇಕು ಎಂಬ ಆರೋಗ್ಯಕರ ಕಾಳಜಿಗಳನ್ನು ಹೊಂದಿತ್ತು. ಶಂಬಾ ಅವರು ತಮ್ಮ ಸಂಶೋಧನೆಯಲ್ಲಿ ಸತ್ಯಶೋಧನೆಗೆ ಎಷ್ಟು ಮಹತ್ವ ಕೊಡುತ್ತಿದ್ದರು ಎನ್ನುವುದಕ್ಕೆ ಆರ್ ಶೇಷಶಾಸ್ತ್ರಿಗಳು ‘ಪಾತಳಿ’ ಕೃತಿಯಲ್ಲಿ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ: ‘ಶಿವರಹಸ್ಯ’ವನ್ನು ಬರೆಯುತ್ತಿದ್ದ ಕಾಲದಲ್ಲಿ ಶಂಬಾ ಅವರ ಮಗನಿಗೆ ಟೈಪಾಯಿಡ್ ಬಂತು. ಇದೇ ಪುಸ್ತಕ ಪ್ರಕಟವಾದ ಕಾಲದಲ್ಲಿ ಆತನಿಗೆ ಮತ್ತೆ ಇದೇ ಕಾಯಿಲೆ ಮರುಕಳಿಸಿತು. ಆಗ ಶಂಬಾ ಅವರ ಆಪ್ತ ವಲಯದವರು ಇದು ‘ಶಿವರಹಸ್ಯ’ವನ್ನು ಹೊರಗೆಡಹಿದುದರ ಫಲ ಎಂದು ಭಾವಿಸಿದರು. ಅವರ ಈ ಭಾವನೆ, ಮಾತುಗಳು ಶಂಬಾ ಅವರನ್ನು ಕೆಲಕಾಲ ದಂಗುಬಡಿಸಿತು. ಶಂಬಾ ಸ್ವವಿಮರ್ಶೆಗೆ ತೊಡಗಿದರು. ‘‘ನಾನು ಬರೆದಿರುವುದು ಸತ್ಯ. ಈ ಸತ್ಯವನ್ನು ಹೊರಗೆಡಹಿದುದರಿಂದಾಗಿ ಆ ‘ಶಿವ’ ನನ್ನ ಮಗನನ್ನು ‘ಕೊಂದ’ರೂ ಅಡ್ಡಿಯಿಲ್ಲ. ನನಗೆ ಸತ್ಯವೆಂದು ತೋರಿದ್ದನ್ನು ಹೇಳಿಯೇ ಇದ್ದೇನೆ’’ ಎಂಬ ಸಮಾಧಾನವನ್ನು ಪಡೆದರು. ಶಂಬಾ ಅವರು ಸಂಶೋಧನೆಗೆ ಪ್ರಭುತ್ವ ನಿರ್ಮಿಸಿದ ಹೆದ್ದಾರಿಗಳಲ್ಲಿ ಸಾಗುವ ಬದಲು ತಾನೇ ನಿರ್ಮಿಸಿಕೊಂಡ ತನ್ನದೇ ಕಾಲು ದಾರಿಯಲ್ಲಿ ಸಾಗಿದ ಸಂಶೋಧಕರು. ಬ್ರಿಟಿಷರು ನಿರ್ಮಿಸಿದ ಈ ಹೆದ್ದಾರಿಯಲ್ಲಿ ಶಾಸನಗಳಿದ್ದವು, ಇತಿಹಾಸದ ಪುಸ್ತಕಗಳಿದ್ದವು. ಇವುಗಳನ್ನು ಮಾತ್ರ ನೆಚ್ಚಿದರೆ ಸಿಗುವ ಕರ್ನಾಟಕ ಸಂಸ್ಕೃತಿಯ ಚಿತ್ರಣದ ಸ್ವರೂಪವನ್ನು ಶಂಬಾ ಅವರು ಊಹಿಸಿದಂತೆ ತೋರುತ್ತದೆ. ಆದ್ದರಿಂದ ಅವರು ಕಾಲುದಾರಿಯಲ್ಲಿ ಸಿಗುವ ಊರುಗಳನ್ನು, ಅವುಗಳ ಹೆಸರಿನ ಹಿನ್ನೆಲೆಯನ್ನು, ಜನರ ಆಡುನುಡಿಯನ್ನು, ಜನಸಂಸ್ಕೃತಿ ಸೃಷ್ಟಿಸಿದ ಪುರಾಣಗಳನ್ನು ಅನ್ವೇಷಿಸುತ್ತ ಆ ಮೂಲಕ ಕರ್ನಾಟಕ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸಿದರು. ದಕ್ಷಿಣದ ತಲಕಾಡಿನಿಂದ ಉತ್ತರದ ಮರಹಟ್ಟ, ವಿದರ್ಭ, ನರ್ಮದಾ ತೀರದವರೆಗೆ ಹಬ್ಬಿದ ಈ ಜನರ ಸಂಸ್ಕೃತಿ ಮರವರು, ಕಳವರು, ದನಗಾಹಿ ಜನರದಾಗಿದೆ. ‘ಕಣ್ಮರೆಯಾದ ಕಂನಡ’, ‘ಕನ್ನಡದ ನೆಲೆ’, ‘ಕಂನುಡಿಯ ಹುಟ್ಟು’, ‘ಕಂನುಡಿಯ ಜೀವಾಳ’ ಮೊದಲಾದ ಗ್ರಂಥಗಳಲ್ಲಿ ಶಂಬಾ ಜೋಶಿ ಅವರು ಭಾಷಿಕ ಆಧಾರಗಳ ಮೂಲಕ ನಡೆಸಿದ ಸಂಶೋಧನೆಯು ನಾಡಿನ ಪ್ರಾಚೀನ ಅಸ್ತಿತ್ವವನ್ನು ಬೆಳಕಿಗೆ ತಂದುಕೊಟ್ಟಂತಾಗಿದೆ. ಸಂಸ್ಕೃತಿಗೂ ಭಾಷೆಗೂ ಇರುವ ಸಂಬಂಧ ಅವ್ಯಾಹತವಾದುದು. ಸಂಸ್ಕೃತಿಯ ಶೋಧನೆಗೆ ಭಾಷೆಯನ್ನು ಆಕರ ಸಾಮಗ್ರಿಯಾಗಿ ಬಳಸಿಕೊಳ್ಳುವ ವಿಧಾನವನ್ನು ಶಂಬಾ ಜೋಶಿಯವರು ತೋರಿಸಿಕೊಟ್ಟಿರುವುದು ಮಹತ್ವಪೂರ್ಣವಾಗಿದೆ. ಸಂಶೋಧಕನಿಗೆ ಆಕರನಿಷ್ಠೆ ಅಪಾಯಕಾರಿ. ಏಕೆಂದರೆ ಆಕರಗಳೂ ಪೂರ್ಣ ನಂಬಲರ್ಹವಲ್ಲ. ಈ ಸಂದರ್ಭದಲ್ಲಿ ಬಳಸಬೇಕಾದ ಸಂಶೋಧನಾ ವಿಧಾನವೆಂದರೆ ಒಂದು ವಿಷಯವನ್ನು ಖಚಿತ ಮಾಡಿಕೊಳ್ಳಲು ಲಭ್ಯವಾಗುವ ಹಲವು ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸುವುದು, ಅವು ಸ್ಪಷ್ಟ ನಿರ್ಣಯಕ್ಕೆ ಬರಲು ಸಹಕರಿಸದಿದ್ದರೆ ತಾತ್ಕಾಲಿಕವಾದ ಅನುಮಾನಿತ ನಿರ್ಧಾರ ಪ್ರಕಟಿಸುವುದು. ತಕ್ಕ ದಾಖಲೆ ಸಿಕ್ಕರೆ ಈ ಅನುಮಾನಿತ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದು.

                   ಶಂಬಾ ಮತ್ತು ಪತ್ನಿ ಪಾರ್ವತಿಬಾಯಿ

ಆಕರನಿಷ್ಠೆಗಿಂತಲೂ ಅಪಾಯಕಾರಿ ಸಿದ್ಧಾಂತ ನಿಷ್ಠೆ. ನಿರ್ದಿಷ್ಟ ಸಿದ್ಧಾಂತಕ್ಕೆ ತನ್ನನ್ನು ತೆತ್ತುಕೊಳ್ಳುವ ಸಂಶೋಧಕ ಸಂಶೋಧನೆಗೆ ದ್ರೋಹವೆಸಗುತ್ತಾನೆ. ಶಂಬಾ ಅವರು ಇದರ ಬಗ್ಗೆ ಗಾಢ ಎಚ್ಚರವಿದ್ದ ಸಂಶೋಧಕರು. ಅವರು ಲಿಖಿತ ದಾಖಲೆಗಳನ್ನು ಮಾತ್ರವಲ್ಲದೆ ಸಂಕೇತ, ಆಚರಣೆ, ನಂಬಿಕೆಗಳನ್ನೂ ಆಕರವಾಗಿ ಬಳಸುತ್ತಿದ್ದರು. ತಮ್ಮ ನಿಲುವುಗಳನ್ನು ಹೊಸ ಓದು ಮತ್ತು ಚಿಂತನೆಯ ಬೆಳಕಿನಲ್ಲಿ ಮತ್ತೆ ಮತ್ತೆ ಪುನರ್ ವಿಮರ್ಶೆ ಮಾಡಿಕೊಳ್ಳುತ್ತಿದ್ದರು. ವೈದಿಕ ಕುಟುಂಬದಿಂದ ಬಂದ ಶಂಬಾ ತಮ್ಮ ಸಂಶೋಧನೆಯ ಆರಂಭದ ದಿನಗಳಲ್ಲಿ ಭಕ್ತಿ-ಅಧ್ಯಾತ್ಮದ ಕಡೆ ಗಮನ ಹರಿಸಿದ್ದರೂ ಕೊನೆಯ ದಿನಗಳಲ್ಲಿ ಅವರು ತಮ್ಮ ವೈಚಾರಿಕ ನಿಲುವಿನಲ್ಲಿ ಬದಲಾದರು. ಆರಂಭದ ದಿನಗಳಲ್ಲಿ ಶ್ರೀ ಅರವಿಂದರ ಕಡೆಗೆ ಆಸಕ್ತಿ ಬೆಳೆಸಿಕೊಂಡು ಶ್ರೀ ಅರವಿಂದರ ಚರಿತ್ರೆಯನ್ನು ಕನ್ನಡದಲ್ಲಿ ಬರೆದ ಮೊದಲಿಗರಾಗಿದ್ದರೂ ಮಧುರಚೆನ್ನರಂತೆ, ಬೇಂದ್ರೆಯವರಂತೆ ಶ್ರೀಮಾತಾರವಿಂದರ ಅಪ್ಪಟ ಭಕ್ತರಾಗಲಿಲ್ಲ. ಬದಲಿಗೆ ಶ್ರೀ ಅರವಿಂದರ ಪ್ರಜ್ಞಾವಂತಿಕೆಯ ಪರಮಸಾಧನೆಯ ಬಗೆಗೆ ಅತೃಪ್ತಿಯನ್ನು ವ್ಯಕ್ತಪಡಿಸಿದರು.

                    ಮೊಮ್ಮಕ್ಕಳೊಂದಿಗೆ ಶಂಬಾ

ಶಂಬಾ ಅವರು ಹಲವು ಭಾಷೆಗಳಲ್ಲಿ ಪ್ರಭುತ್ವವನ್ನು ಹೊಂದಿದ್ದರು. ಪ್ರಾಕೃತ, ಅರ್ಧಮಾಗದಿ, ಮರಾಠಿ, ಸಂಸ್ಕೃತದೊಂದಿಗೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅವರಿಗೆ ತಿಳುವಳಿಕೆಯಿತ್ತು. ಇಂಗ್ಲಿಷ್‌ನಲ್ಲಿ ಪ್ರಕಟಗೊಂಡ ಭಾಷಿಕ ಮತ್ತು ಜನಾಂಗಿಕ ಅಧ್ಯಯನಗಳನ್ನು ಸಂಸ್ಕೃತದಲ್ಲಿರುವ ವೇದ, ವೇದಾಂತ, ಪುರಾಣ, ಮಹಾಕಾವ್ಯಗಳನ್ನು ಶಂಬಾ ಆಳವಾಗಿ ಅಧ್ಯಯನ ಮಾಡಿದ್ದರು. ಇದಲ್ಲದೆ ಭಾಷಾಶಾಸ್ತ್ರ, ಐತಿಹ್ಯಶಾಸ್ತ್ರ(Mythology)   , ಧರ್ಮಶಾಸ್ತ್ರ, ಪುರಾತತ್ವಶಾಸ್ತ್ರ, ಮಾನವಶಾಸ್ತ್ರ ಮುಂತಾದವುಗಳನ್ನು ಸ್ವಪ್ರಯತ್ನದಿಂದಲೇ ಪರಿಚಯಿಸಿಕೊಂಡಿದ್ದವರಷ್ಟೇ ಅಲ್ಲದೆ ಆಳವಾಗಿ ಅಭ್ಯಸಿಸಿದವರು. ಭಾರತೀಯ ನಾಗರಿಕತೆಯ ಜೊತೆಗೆ ಜಗತ್ತಿನ ಇತರ ದೇಶಗಳ ಸಂಸ್ಕೃತಿ, ನಾಗರಿಕತೆಗಳನ್ನು ಅವರು ಅಧ್ಯಯನ ಮಾಡಿದ್ದರು. ಶಂಬಾ ಜೋಶಿಯವರ ಸಂಶೋಧನೆಯ ಹೆಗ್ಗಳಿಕೆಯೆಂದರೆ ಇವೆಲ್ಲವುಗಳ ತುಲನಾತ್ಮಕ ಅಭ್ಯಾಸ ಮತ್ತು ಸಮೀಕರಣ ಇಂದಿನ ದಿನಗಳಲ್ಲಿ ವಿಶೇಷಜ್ಞತೆ (Specialisation) ಎಂಬ ನೆವದಿಂದ ಸಂಕುಚಿತಗೊಳ್ಳುತ್ತಿರುವ ಸಂಶೋಧನಾ ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ಅವರು ಕಲ್ಪಿಸಿದರು. ಇತಿಹಾಸ ಸಂಶೋಧನೆಗೆ ಭಾಷಾಶಾಸ್ತ್ರ ಮತ್ತು ಮಾನವಶಾಸ್ತ್ರಗಳನ್ನು ಯಶಸ್ವಿಯಾಗಿ ಬಳಸಿ ಕೊಂಡವರು ಇವರೊಬ್ಬರೇ ಎಂದರೂ ಸಲ್ಲುವುದು. ಶಂಬಾ ಅವರ ವಿಶಿಷ್ಟತೆ ಇರುವುದು ಅವರು ಅದುವರೆಗಿನ ಸಂಶೋಧನಾ ಮಾರ್ಗವನ್ನು ತೊರೆದು ತಮ್ಮದೇ ಆದ ಮಾರ್ಗವೊಂದನ್ನು ಕಂಡುಕೊಂಡಿರುವುದರಲ್ಲಿ. ‘ಕನ್ನಡ ಸಂಸ್ಕೃತಿಯ ಅಧ್ಯಯನದ ಮುಖಾಂತರ ಭಾರತೀಯ ಸಂಸ್ಕೃತಿಯ ಅಧ್ಯಯನವನ್ನೂ, ಭಾರತೀಯ ಸಂಸ್ಕೃತಿಯ ಅಧ್ಯಯನದ ಮುಖಾಂತರ ಕನ್ನಡ ಸಂಸ್ಕೃತಿಯ ಅಧ್ಯಯನವನ್ನೂ ಒಂದಕ್ಕೊಂದು ಪೂರಕವಾದ ವ್ಯಾಸಂಗವಾಗಿ ಜೋಶಿ ಅವರು ಬಳಸಿಕೊಂಡರು’ ಎಂದು ಮಲ್ಲೇಪುರಂ. ಜಿ ವೆಂಕಟೇಶ ಅವರು ಅಭಿಪ್ರಾಯಪಡುತ್ತಾರೆ. ಶಂಬಾ ಅವರ ಸಂಶೋಧನೆಯ ಹಿನ್ನೆಲೆಯಲ್ಲಿ ಈ ಮಾತುಗಳು ಚರ್ಚೆಯನ್ನು ಬಯಸುತ್ತದೆ. ಮುಖ್ಯವಾಗಿ ಈ ಸಂದರ್ಭದಲ್ಲಿ ‘ಭಾರತೀಯ ಸಂಸ್ಕೃತಿ’ ಎನ್ನುವುದರ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ನಿರ್ದಿಷ್ಟ ಭಾಷೆ, ಸಾಹಿತ್ಯ, ಜನವರ್ಗ ಹಾಗೂ ಜೀವನ ಕ್ರಮಗಳನ್ನು ‘ಭಾರತೀಯ’ವೆಂದು ಕರೆಯುವ ಹಾಗೂ ಉಳಿದವನ್ನು ಪರಿಶಿಷ್ಟದಲ್ಲಿಡುವ ನಿಲುವು, ವಸಾಹತುಶಾಹಿ ಕಾಲದಲ್ಲಿ ಪ್ರಬಲವಾಗಿದ್ದ ರಾಷ್ಟ್ರೀಯ ರಾಜಕಾರಣದ ಒಂದು ಭಾಗವೇ ಆಗಿತ್ತು. ಈ ‘ಭಾರತೀಯ’ ಭಿತ್ತಿಯು ತೋರಿಕೆಗೆ ವಿಶಾಲವಾಗಿದ್ದು ವಾಸ್ತವದಲ್ಲಿ ಸಂಕುಚಿತವಾಗಿದೆ. ಇದು ತನಗೆ ಪ್ರಿಯವಲ್ಲದ ಜಗತ್ತುಗಳನ್ನೆಲ್ಲ ಚೌಕಟ್ಟಿನಿಂದ ಹೊರಗಿಡುವ ರಾಜಕಾರಣ ಮಾಡುತ್ತದೆ. ವೇದ, ಗೀತೆ, ಗೋರಕ್ಷಣೆ, ಸಂಸ್ಕೃತ ಮುಂತಾದ ವೈದಿಕ ಸನಾತನವಾದಿ ಸಂಗತಿಗಳು ‘ಭಾರತೀಯ ಸಂಸ್ಕೃತಿ’ ಎಂದು ವ್ಯಾಖ್ಯಾನಗೊಳ್ಳುವುದರಿಂದ ಇವುಗಳ ಕುರಿತು ತಮ್ಮ ಸಂಶೋಧನೆಯ ಮೂಲಕ ವೌಲಿಕ ಪ್ರಶ್ನೆಗಳನ್ನೆತ್ತಿದ ಶಂಬಾ ಅವರ ಸಂದರ್ಭದಲ್ಲಿ ‘ಭಾರತೀಯ ಸಂಸ್ಕೃತಿ’ ಎನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳಬೇಕಾಗಿದೆ. ಈ ಸ್ಪಷ್ಟತೆ ಯಾಕೆ ಬೇಕಾಗಿದೆಯೆಂದರೆ ಸ್ವತಃ ಶಂಬಾ ಅವರೇ ತಮ್ಮ ಕೊನೆಯ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಸಂಕೇತಗಳಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಆತಂಕಿತರಾಗಿದ್ದರು. ‘ಭಾರತೀಯ ಸಂಸ್ಕೃತಿಯ ಸಂಕೇತಗಳಲ್ಲಿ ವ್ಯತ್ಯಾಸವಾಗಿದೆಯೆಂದು ನನಗೆ ಅನ್ನಿಸುತ್ತಿದೆ. ಅದು ಇಂದ್ರಿಯ ರೂಪಕ್ಕೆ ಬಂದಿರುವುದನ್ನು ಅರಿತು ನನಗೆ ಗಾಬರಿಯಾಗಿದೆ’ ಎಂದು ಪುಸ್ತಕವೊಂದರ ಅಭ್ಯಾಸದ ಹಿನ್ನೆಲೆಯಲ್ಲಿ ತನಗೆ ತಿಳಿಸಿದ್ದ ರೆಂದು ನಾ. ಗೀತಾಚಾರ್ಯ ‘ಶಂಬಾ ಸ್ಮತಿಗಂಧ’ ಕೃತಿಯಲ್ಲಿ ದಾಖಲಿಸಿದ್ದಾರೆ. ಭೌಗೋಳಿಕ ಕರ್ನಾಟಕವನ್ನು ಪರರು ಒತ್ತುವರಿ ಮಾಡಿಕೊಳ್ಳದಂತೆ, ವಶಪಡಿಸಿ ಕೊಳ್ಳದಂತೆ ಕನ್ನಡಿಗರು ಎಚ್ಚರ ವಹಿಸಬೇ ಕೆಂಬುದಷ್ಟೇ ಶಂಬಾ ಕಾಳಜಿ. ಆಕ್ರಮಿಸುವವರು ಎಲ್ಲರೂ ಕನ್ನಡಕ್ಕೆ ವಿರೋಧಿಗಳೇ. ಚಿದಾನಂದ ಮೂರ್ತಿ ಅವರು ಕನ್ನಡ ನಾಡಿನ ಮೇಲೆ ಆಕ್ರಮಣ ಮಾಡಿದವರನ್ನು ಮತೀಯ ನೆಲೆಯಲ್ಲಿ ವಿಭಜಿಸಿ ನೋಡಿದಂತೆ ಶಂಬಾ ಪಕ್ಷಪಾತ ಮಾಡುವುದಿಲ್ಲ. ಶಂಬಾ ಅವರು ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಹಿಂದೂಗಳೇ ಆದ ಮರಾಠರ ಪಾತ್ರವನ್ನು ಮರೆಯದೆ ಉಲ್ಲೇಖಿಸುತ್ತಾರೆ. ‘‘ಮರಾಠರು ಈಗ ‘ಹಿಂದೂಪದಪಾದಶಾಹಿ’ಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದರೂ ವಿಜಯನಗರದ ಹಿಂದೂ ಸಿಂಹಾಸನವನ್ನು ಹಾಳುಮಾಡಲು ನೆರವಾದವರು ಮರಾಠರೆ’’ ಎಂದಿದ್ದಾರೆ.

                           1970ರಲ್ಲಿ ಶಂಬಾ ಜೋಶಿ

ಚರಿತ್ರೆಯಲ್ಲಿ ಕನ್ನಡದ ಮೇಲಿನ ಗಾಯಗಳಿಗೆ ವರ್ತಮಾನದಲ್ಲಿ ಸೇಡು ತೀರಿಸಿಕೊಳ್ಳಬೇಕೆಂಬ ಪ್ರೇರಣೆಯನ್ನು ಶಂಬಾ ಉತ್ತೇಜಿಸುವುದಿಲ್ಲ. ಕನ್ನಡದ ನಾಡಿನಲ್ಲಿ ಆಳಿ ಹೋದ ರಾಜರ ಕೊಡುಗೆಯನ್ನು ದಾಖಲಿಸುವಾಗಲೂ ಅದರ ವೈಭವೀಕರಣಕ್ಕೆ ಹೋಗದ ವಿಮರ್ಶಾತ್ಮಕ ಗುಣ ಶಂಬಾ ಅವರಲ್ಲಿದೆ. ನಮ್ಮ ಪೌರಾಣಿಕ ಪ್ರತಿಮೆಗಳಿಗೂ ನಮ್ಮ ವರ್ತಮಾನದ ಸಾಮಾಜಿಕ ರಚನೆ ಮತ್ತು ಸಮಸ್ಯೆಗಳಿಗೂ ಇರುವ ಸಂಬಂಧವನ್ನು ಕುರಿತು ಶಂಬಾ ಅವರು ಯೋಚಿಸಿದ್ದು ಬಹಳ ಮಹತ್ವದ ಸಾಂಸ್ಕೃತಿಕ ಪ್ರಸಂಗವಾಗಿದ್ದರೂ ಕುವೆಂಪು ಅವರಂತೆ ಅವರ ಚಿಂತನೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ವರ್ತಮಾನದೊಂದಿಗೆ ಮುಖಾಮುಖಿಯಾಗದಿರುವ ಕಾರಣ ಅವರ ಮಾತುಗಳು ಜನಪ್ರಿಯ ನೆಲೆಯ ಕನ್ನಡ ಅಸ್ಮಿತೆಯ ಮಾತುಗಳಂತೆ ಘೋಷಣೆಗಳಾಗಿ ಬಿಡುವ ಅಪಾಯವನ್ನು ಎದುರಿಸುತ್ತಿವೆ. ಆದರೆ ಅವರ ಕನ್ನಡ ಕುರಿತ ಅರ್ಧಶತಮಾನಕ್ಕೂ ಹೆಚ್ಚಿನ ಗಂಭೀರ ಸಂಶೋಧನೆ ಇಂತಹ ಅಪಾಯದಿಂದ ಶಂಬಾ ಅವರನ್ನು ಪಾರು ಮಾಡುವಷ್ಟು ಶಕ್ತವಾಗಿವೆ. ನಮ್ಮದು ಎನ್ನುವ ಒಂದೇ ಕಾರಣದಿಂದ ಅಹಿತವಾದುದನ್ನೂ ಮುಂದುವರಿಸುವ ಸಮಾಜ ದುರಂತಕ್ಕೆ ಎಡೆ ಮಾಡಿಕೊಡುತ್ತದೆ, ಅಂತಿಮವಾಗಿ ಇದು ಸಂಸ್ಕೃತಿಯ ಪತನಕ್ಕೆ ಕಾರಣವಾಗುತ್ತದೆ ಎನ್ನುವ ವಿವೇಕವೇ ಶಂಬಾ ಅವರ ಸಂಶೋಧನಾ ವಿಧಾನವನ್ನು ರೂಪಿಸಿದೆ. ‘‘ಶಂಬಾ ಅವರ ಒಳನೋಟಗಳಾಗಲೀ ಅವರು ಇಟ್ಟ ಹೊಸ ಹೆಜ್ಜೆಗಳಾಗಲಿ ನಮ್ಮ ಸಂವೇದನೆಯನ್ನು ಬದಲಾ ಯಿಸುವಂತಹ ಚರ್ಚೆಗಳನ್ನು ಹುಟ್ಟಿಸದಿದ್ದದ್ದು ನಮ್ಮ ಚಿಂತನೆಯ ಪರಂಪರೆಯ ಸೋಗಲಾಡಿತನವನ್ನು ತೋರಿಸುತ್ತದೆ’’ ಎಂದು ರಾಜೇಂದ್ರ ಚೆನ್ನಿ ಅವರ ಅಭಿಪ್ರಾಯ ಸತ್ಯವನ್ನೇ ಹೇಳುತ್ತಿದೆ.

            ಶಿವರಾಮ ಕಾರಂತ ಹಾಗೂ ಅವರ ಮಿತ್ರರೊಡನೆ…

‘‘ಸಂಸ್ಕೃತಿಯು ನಾಗರಿಕತೆಯಲ್ಲಿ ಮಾರ್ಪಟ್ಟ ಬಳಿಕ, ಅದು ಬೇಗನೆ ಅವನತಿ ಸ್ಥಿತಿಗೆ ಬರುವುದು. ಮಾನವನು ತನ್ನ ಏಳ್ಗೆಗೆಂದು ನಿರ್ಮಿಸಿಕೊಂಡ ಸಾಧನವಾದ ಸಂಪ್ರದಾಯ : ಸಮಯವು, ಸಾಮಾಜಿಕ ಸನ್ನಿವೇಶದಲ್ಲಿ, ಬೇಗನೆಯೆ ನಿರ್ಜೀವ ಯಾಂತ್ರಿಕ ರೂಪಕ್ಕೆ ಇಳಿಯುತ್ತದೆ’’. ಈ ರೀತಿ ಒಂದು ಕಾಲಘಟ್ಟದಲ್ಲಿ ಮಾನವ ಬದುಕಿನ ಜೀವಂತಿಕೆಗೆ ಕಾರಣವಾಗಿದ್ದ ಸಂಸ್ಕೃತಿ ಕ್ರಮೇಣ ನಿರ್ಜೀವವೆನಿಸುವ ಯಾಂತ್ರಿಕ ಕ್ರಿಯೆಯಾಗಿ ಮಾರ್ಪಡುವ ದುರಂತ ಶಂಬಾ ಅವರನ್ನು ಕಾಡಿದೆ. ಸಂಸ್ಕೃತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ನಾಗರಿಕರ ಕುರಿತು ಈ ವ್ಯಾಪಾರಿ ಮನೋಭಾವ ಮಾಡುವ ಪರಿಣಾಮಗಳ ಕುರಿತು ಶಂಬಾ ಅಸಮಾಧಾನ ಹೊಂದಿದ್ದರು. ಸಂಸ್ಕೃತಿಯ ದರ್ಶನವನ್ನು ಬಿಟ್ಟುಕೊಟ್ಟು ಅದನ್ನು ಕೇವಲ ಆಚರಣೆಗೆ ಸೀಮಿತಗೊಳಿಸಿಕೊ ಳ್ಳುವುದರಲ್ಲಿ, ಸಂಸ್ಕೃತಿಯ ರೂಪವು ಮುಂಚೂಣಿಗೆ ಬಂದು ಆಶಯವು ಹಿಂದಕ್ಕೆ ಸರಿಯುವ ಅಥವಾ ನಾಶವಾಗಿ ಹೋಗುವುದರ ಕುರಿತು, ಸಂಸ್ಕೃತಿಯ ಜೀವಪರ ಆಶಯಗಳನ್ನು ಮರೆತು ಅದನ್ನು ಲೌಕಿಕ ಪ್ರಯೋಜನಕ್ಕೆ ಬಳಸಿಕೊಳ್ಳುವುದರ ಬಗೆಗೆ ಅವರು ಚಿಂತಿತರಾಗಿದ್ದರು. ‘ಸಂಸ್ಕೃತಿ’ ಎಂಬ ಪಂಜು ಬಳಸುವವರ ಹಿತಾಸಕ್ತಿಗೆ ತಕ್ಕಂತೆ ಬೆಳಕಾಗುವ ಮತ್ತು ಬೆಂಕಿಯಾಗುವ ಸಾಧ್ಯತೆ ಮತ್ತು ದುರಂತಗಳ ಬಗ್ಗೆ ಶಂಬಾ ಚಿಂತಿಸಿದ್ದರು. ಸಂಸ್ಕೃತಿ ‘ಬೆಂಕಿ’ಯಾಗುವ ದುರಂತವೇ ಅವರನ್ನು ಹೆಚ್ಚು ಕಾಡಿದಂತೆ ತೋರುತ್ತದೆ. ಕರ್ನಾಟಕ ಸಂಸ್ಕೃತಿಯನ್ನು ತಮ್ಮ ಅಜೆಂಡಾದ ಜಾರಿಗೆ ತಕ್ಕಂತೆ ಅರ್ಥೈಸುವ, ತಿರುಚುವ, ಬಳಸುವ ಮೂಲಭೂತವಾದಿಗಳ ಪ್ರಯತ್ನದ ಸ್ಪಷ್ಟ ಗ್ರಹಿಕೆ ಶಂಬಾ ಅವರಿಗಿತ್ತು. ‘‘ಒಂದು ಕಾಲದ ನಡೆವಳಿ-ನುಡಿವಳಿಗಳು, ವೈಯಕ್ತಿಕವಾದ ಅಥವಾ ಒಂದು ವಿಶಿಷ್ಟ ಗುಂಪಿನ ಸ್ವಾರ್ಥ ಸಾಧನೆಗೇ ಹೆಚ್ಚು ಅನುಕೂಲವಿರುವುದು ಕಂಡು ಬರತೊಡಗಿದಂತೆ ಆ ಸಂಕೇತ: ಸಮಯಗಳ ದುಷ್ಪರಿಣಾಮಗಳು ಗಮನಕ್ಕೆ ಬರತೊಡಗುತ್ತವೆ’’ ಎಂದವರು ಎಚ್ಚರಿಸಿದ್ದರು. ಇಂತಹ ತಮ್ಮ ನಿಷ್ಠುರ ನಡೆಯ ಕಾರಣಕ್ಕಾಗಿ ಶಂಬಾ ಒಂದು ವರ್ಗದ ಕನ್ನಡ ಹೋರಾಟಗಾರರಿಗೆ, ಕನ್ನಡಿಗರಿಗೆ ‘ಬಿಸಿತುಪ್ಪ’ವಾದವರು. ತಮ್ಮ ಜೀವಮಾನದ ಸಿಂಹಪಾಲನ್ನು ಕನ್ನಡ ನೆಲ-ನುಡಿಯ ಸಂಶೋಧನೆಗೆ ಮೀಸಲಿಟ್ಟ ಶಂಬಾರನ್ನು ಮತ್ತು ಕನ್ನಡಬದುಕಿನ ಆರೋಗ್ಯಕ್ಕೆ ಪೂರಕವಾದ ಅವರ ಚಿಂತನೆಗಳನ್ನು ನೆನೆಸಿಕೊಳ್ಳುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಕನ್ನಡ ಚಳವಳಿಗಳು ನಿರ್ಲಕ್ಷ್ಯ ತೋರಲು ಶಂಬಾ ಚಿಂತನೆಗಳಲ್ಲಿನ ಈ ‘ಬಿಸಿತುಪ್ಪ’ದ ಅಂಶಗಳೇ ಕಾರಣವಾದಂತಿವೆ.

ಶಂಬಾ ಏಕಘನಾಕೃತಿಯ ಮಾದರಿಯ ಸಂಸ್ಕೃತಿಯನ್ನು ಒಪ್ಪುವವರಲ್ಲ. ಸಂಸ್ಕೃತಿಯ ಬಹುತ್ವದೆಡೆಗೆ ಅವರ ಸಂಶೋಧನೆಗಳ ಗಮನ. ಇದು ಕರ್ನಾಟಕ ಸಂಸ್ಕೃತಿಯ ಸಂಶೋಧನೆಯಲ್ಲಿ ಕಂಡುಬರುವ ಮುಖ್ಯ ಚಹರೆ. ತನ್ನ ಭೌಗೋಳಿಕ ಪರಿಸರ, ವೃತ್ತಿ, ಭಾಷಿಕ ವಾತಾವರಣ ಹಾಗೂ ಕ್ರಮೇಣ ತನ್ನ ನೆಲಕ್ಕೆ ತಾನೇ ಎರವಾಗಬೇಕಾದ ಕಾರಣಗಳು ಹೀಗೆ - ಚಾರಿತ್ರಿಕ ಕಾಲನಕ್ಷೆಯಲ್ಲಿ ಸಾಂಸ್ಕೃತಿಕ ಸತ್ಯದ ಅನ್ವೇಷಣೆಯನ್ನು ಶಂಬಾ ಮಾಡಿದರು. ಅವರ ಸಂಶೋಧನೆಯಲ್ಲಿ ಅತ್ಯಂತ ಪ್ರಮುಖವಾದ ಗ್ರಹಿಕೆ ಯಾವುದೆಂದರೆ, ಕನ್ನಡ ಸಂಸ್ಕೃತಿಯು ಮೂಲದಲ್ಲಿ ಅನೇಕ ಕವಲುಗಳ ಸಂಗಮವೆನ್ನುವುದು. ಹಲವು ಜೀವನಕ್ರಮಗಳು, ಅವುಗಳ ಪರಸ್ಪರ ಹೊಂದಾಣಿಕೆ, ಕೊಡು-ಕೊಳೆಗಳು ಈ ಸಂಸ್ಕೃತಿಯನ್ನು ರೂಪಿಸಿದ ಜೀವಸತ್ವವೆನ್ನುವುದನ್ನು ಇಲ್ಲಿ ಗ್ರಹಿಸಿ ಕಾಣಿಸಲಾಗಿದೆ. ಹೀಗೆ ಸಮಷ್ಟಿಜೀವನವನ್ನು ರೂಪಿಸಿದ ಹತ್ತು ಹಲವು ಕವಲುಗಳು ತಮ್ಮ ಸ್ವರೂಪವನ್ನು ಕಳೆದುಕೊಂಡದ್ದೇ ಕನ್ನಡ ಸಂಸ್ಕೃತಿಯ ಅಧಃಪತನಕ್ಕೆ ಕಾರಣವೆಂದು ಶಂಬಾ ಗುರುತಿಸುತ್ತಾರೆ.

     ಗೋವಿಂದ ಪೈ, ಶಂಬಾ ಜೋಶಿ ಮತ್ತು ಕೆ.ವಿ. ರಾಘವಾಚಾರ್

ಶಂಬಾರ ಇಡೀ ಜೀವನದ ಕೇಂದ್ರಾನುಭವವು ವೇದಾರ್ಥಗಳಿಗೆ ಸಂಬಂಧಪಟ್ಟದ್ದು. ಮತ್ತೆ ಮತ್ತೆ ವೈದಿಕ ಸಾಹಿತ್ಯಕ್ಕೆ ಶಂಬಾ ಜೀವನದುದ್ದಕ್ಕೂ ವಾಪಸಾದವರು. ಹಾಗೆಂದು ಅವರು ವೇದ, ಪುರಾಣಗಳನ್ನು ಯಥಾವತ್ತಾಗಿ ಒಪ್ಪಿಕೊಂಡವರೂ, ಅದರ ಆರಾಧಕರೂ ಆಗಿರಲಿಲ್ಲ. ಸಾಮಾಜಿಕ ತಾರತಮ್ಯಗಳಿಗೆ ಕಾರಣವಾದ ಪುರಾಣ-ಭಗವದ್ಗೀತೆಯಂತಹ ಪಠ್ಯಗಳ ತಾತ್ವಿಕತೆಯನ್ನು ತಮ್ಮ ಸಂಶೋಧನೆಗಳ ಮೂಲಕ ನಿಷ್ಠುರವಾಗಿ ಬುಡಮೇಲು ಮಾಡಿದ ಶಂಬಾ ಅವರ ಚಿಂತನೆಗಳು ದಲಿತ ಬಂಡಾಯ ಚಳವಳಿಗಳ ಸಂದರ್ಭದಲ್ಲಾದರೂ ಮುನ್ನೆಲೆಗೆ ಬರಬೇಕಿತ್ತು. ಕುವೆಂಪು ಚಿಂತನೆಗಳನ್ನು ಈ ಚಳವಳಿಗಳು ತಮ್ಮ ಮಾರ್ಗದರ್ಶಿ ಸೂತ್ರಗಳನ್ನಾಗಿ ಸ್ವೀಕರಿಸಿದ್ದು ಯುಕ್ತವಾಗಿಯೇ ಇತ್ತು. ಆದರೂ ಮೂಲ ವೈದಿಕ ಪಠ್ಯಗಳ ವಿಧಿ, ಕರ್ಮ, ಪುನರ್ಜನ್ಮಗಳ ಪರವಾದ ಕುವೆಂಪು ಚಿಂತನೆಗಳು ಇಲ್ಲಿನ ತೊಡಕುಗಳೇ ಆಗಿವೆ. ಈ ಚಳವಳಿಗಳು ಇಂತಹ ತೊಡಕುಗಳನ್ನು ಶಂಬಾ ಅವರ ಸಂಶೋಧನೆಗಳಿಂದ ಮೂಡಿಬಂದ ಚಿಂತನೆಗಳೊಂದಿಗೆ ಪರಿಹರಿಸಿಕೊಳ್ಳಬಹುದಿತ್ತು. ಕನ್ನಡ ಭಾಷೆಯಲ್ಲಿ ಸಂಸ್ಕೃತ ಭಾಷೆಯನ್ನು ಬೆರೆಸಿ ಖುಷಿಪಡುವ ಮೇಲ್ವರ್ಗದ ಕನ್ನಡಿಗರ ಬಗ್ಗೆ ಶಂಬಾ ಅವರಿಗೆ ಕೋಪ. ಇದರಿಂದ ಕನ್ನಡಭಾಷೆಯ ಬೆಳವಣಿಗೆಗೆ ತೊಡಕುಂಟಾಗುತ್ತದೆ�

Writer - ಡಾ. ಸರ್ಜಾಶಂಕರ ಹರಳಿಮಠ

contributor

Editor - ಡಾ. ಸರ್ಜಾಶಂಕರ ಹರಳಿಮಠ

contributor

Similar News