ಸಭಾಪತಿ ಸ್ಥಾನಕ್ಕೇರುವವರು ಪಕ್ಷಪಾತ ರಹಿತವಾಗಿರಬೇಕು: ಬಸವರಾಜ ಹೊರಟ್ಟಿ

Update: 2018-06-23 14:37 GMT

ಬೆಂಗಳೂರು, ಜೂ.23: ಯಾವುದೆ ಪಕ್ಷದ ಸದಸ್ಯರು ಸಭಾಪತಿ ಸ್ಥಾನಕ್ಕೆ ಆಯ್ಕೆಯಾದ ಕೂಡಲೆ ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಪರಿಷತ್‌ನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಶನಿವಾರ ವಿಕಾಸಸೌಧದಲ್ಲಿ ವಿಧಾನ ಪರಿಷತ್ ವತಿಯಿಂದ ಮಾಜಿ ಸಭಾಪತಿ ಡಿ.ಎಚ್. ಶಂಕರ್‌ ಮೂರ್ತಿರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಕ್ಷಭೇದ ಮರೆತು ಎಲ್ಲರನ್ನು ಸಮಾನವಾಗಿ ಕಾಣುವಂತಹ ಸಭಾಪತಿ ಸ್ಥಾನವನ್ನು ನಿರ್ವಹಿಸುವುದು ಸುಲಭಸಾಧ್ಯವಲ್ಲ. ಅಂತಹ ಸಭಾಪತಿ ಪೀಠವನ್ನು 8 ವರ್ಷಗಳ ಕಾಲ ಡಿ.ಎಚ್.ಶಂಕರಮೂರ್ತಿ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸಭೆಯಂತೆಯೇ ವಿಧಾನ ಪರಿಷತ್‌ನಲ್ಲೂ ಧಿಕ್ಕಾರ ಕೂಗುವುದು, ಗಲಾಟೆ ಮಾಡುವುದು ನಾಚಿಕೆ ತರುವ ಸಂಗತಿಯಾಗಿದೆ. ಸಭಾಪತಿಯವರನ್ನು ಕೆಳಗಿಳಿಸಲು ಅವಿಶ್ವಾಸ ಮಂಡಿಸುವಂತಹ ಕ್ರಮವು ಸರಿಯಲ್ಲ. ವಿಧಾನಪರಿಷತ್ ನಾಡಿನ ಜಲ್ವಂತ ಸಮಸ್ಯೆಗಳನ್ನು ಪಕ್ಷಪಾತ ಮರೆತು ಒಟ್ಟಾಗಿ ಚರ್ಚಿಸುವಂತಹ ಉತ್ತಮ ವೇದಿಕೆಯೆಂದು ಅವರು ಹೇಳಿದರು.

ಮೇಲ್ಮನೆಯನ್ನೇ ರದ್ದು ಮಾಡಬೇಕು ಎಂದ ಕಾಗೋಡು ತಿಮ್ಮಪ್ಪನವರು ಸಭಾಪತಿಯಾದರು. ಅದೇ ರೀತಿ ವಾಟಾಳ್ ನಾಗರಾಜ್ ಅವರು ನಾಲ್ಕು ಬಾರಿ ಮೇಲ್ಮನೆ ಚುನಾವಣೆ ಸ್ಪರ್ಧಿಸಿದ್ದರು. ವಿಧಾನಸಭೆಗೆ ಸತ್‌ಸಂಪ್ರದಾಯ ಹಾಕಿಕೊಡುವ ಮೇಲ್ಮನೆಯ ಘನತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹಾಗೂ ಹೊಸ ಸದಸ್ಯರ ಕರ್ತವ್ಯ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳು ವಿಧಾನಸಭೆ ಚುನಾವಣೆಗಿಂತಲೂ ಕೆಟ್ಟದಾಗಿರುತ್ತವೆ ಎಂಬ ಅಭಿಪ್ರಾಯವನ್ನೂ ಹೋಗಲಾಡಿಸಬೇಕೆಂದು ಅವರು ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ವಿಧಾನ ಪರಿಷತ್‌ನಲ್ಲಿ 30 ವರ್ಷ ಸದಸ್ಯನಾಗಿ ಹಾಗೂ 8 ವರ್ಷ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದಾಗಿನ ಎಲ್ಲ ಕಹಿ ಘಟನೆಗಳನ್ನೂ ಮರೆತು ಸಿಹಿ ಘಟನೆಗಳನ್ನಷ್ಟೇ ಮೆಲುಕು ಹಾಕುತ್ತಿದ್ದೇನೆಂದು ತಿಳಿಸಿದರು.
ಮೇಲ್ಮನೆ ಬೇಕೆ ಬೇಡವೇ ಎಂದು ಚರ್ಚೆ ಮಾಡುವವರು, ಇದನ್ನು ಸ್ಥಾಪಿಸುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರು ಆಡಿದ ಮಾತನ್ನು ನೋಡಬೇಕು. ವಿಧಾನಸಭೆಯನ್ನು ನಿಯಂತ್ರಿಸುವ ಬದಲಿಗೆ ವಿಧಾನಸಭೆಗೆ ಪ್ರೋತ್ಸಾಹಕ ಶಕ್ತಿಯಾಗಿ ಮೇಲ್ಮನೆ ಕೆಲಸ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅದನ್ನು ಪಾಲಿಸಬೇಕಾದದ್ದು ಪರಿಷತ್ ಸದಸ್ಯರ ಜವಾಬ್ದಾರಿಯೆಂದು ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಸ್ಥಾಪಿಸಲು ಚಿಂತನೆ ನಡೆದಾಗ ಅದಕ್ಕೆ ಪ್ರಸ್ತಾವ ಸಲ್ಲಿಸಿದ ಮಾಜಿ ಸಭಾಪತಿ ಸುದರ್ಶನ್, ಸಿಎಂ ಸಿದ್ದರಾಮಯ್ಯ ಸಹಕರಿಸಿದರು. ಈ ಕಾರ್ಯ ಮಾಡಿದ ಸಮಾಧಾನವಿದೆ. ಚುನಾವಣಾ ರಾಜಕಾರಣದಿಂದ ಹೊರ ಹೋಗುತ್ತಿದ್ದೇನಾದರೂ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ ಎಂದು ಅವರು ಹೇಳಿದರು.

ಮಾಜಿ ಸಭಾಪತಿ ಪ್ರೊ. ಬಿ.ಕೆ. ಚಂದ್ರಶೇಖರ್, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅನೇಕರು ಸೇರಿ ಶಂಕರಮೂರ್ತಿ ದಂಪತಿಯನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News