ಬೂಟಾಟಿಕೆಯ ಕಪಿಮುಷ್ಟಿಯೊಳಗೆ ಮಧ್ಯಮ ವರ್ಗ?

Update: 2018-06-23 17:39 GMT

ಭಾಗ-48

ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ನಮ್ಮ ಮಧ್ಯಮವರ್ಗ ಮಾತನಾಡುತ್ತದೆ. ಅದನ್ನು ವಿದೇಶದಿಂದ ತರುವ, ತರುತ್ತೇನೆ ಎನ್ನುವವರ ಬಗ್ಗೆಯೂ ಶ್ಲಾಘಿಸುತ್ತಾ, ಇದೇ ಮಧ್ಯಮ ವರ್ಗ ಸ್ವಾಗತಿಸುತ್ತದೆ. ಕಪ್ಪು ಹಣದಿಂದಾಗಿ ದೇಶದ ಆರ್ಥಿಕತೆಯ ಮೇಲೆ ಸಾಕಷ್ಟು ಹೊರೆ ಬೀಳುತ್ತಿದೆ. ಅದನ್ನು ತಂದರೆ ಆರ್ಥಿಕ ಪರಿಸ್ಥಿತಿ ಒಂದೊಮ್ಮೆಗೆ ಸುಧಾರಿಸಿಯೇ ಬಿಡುತ್ತದೆ ಎಂಬ ಭ್ರಮಾಲೋಕವನ್ನೂ ಸೃಷ್ಟಿಸಲಾಗುತ್ತದೆ. ಆದರೆ ಇದೇ ವರ್ಗ, ತನ್ನ ಭೂಮಿ ಮಾರಾಟ ಅಥವಾ ಫ್ಲಾಟ್ ಮಾರಾಟದ ಸಂದರ್ಭ ಅದಕ್ಕಾಗಿ ವ್ಯಯಿಸುವ ಅನಗತ್ಯ ಹಣ, ಲಂಚ ನೀಡುವಿಕೆಯನ್ನು ಮೌನವಾಗಿ ಸ್ವಾಗತಿಸುತ್ತದೆ. ಇದಲ್ಲವೇ ಬೂಟಾಟಿಕೆ?

ನಾನು ಈಗಾಗಲೇ ನಮ್ಮ ಸುತ್ತಮುತ್ತ ಸರಕಾರಿ ವ್ಯವಸ್ಥೆಯೊಳಗೆ ನಡೆಯುವ ಭ್ರಷ್ಟಾಚಾರ, ಪೀಡನೆ ಬಗ್ಗೆ ತಿಳಿಸಿದ್ದೇನೆ. ಆದರೆ ಮಧ್ಯಮ ವರ್ಗ ತನ್ನ ಕೆಲಸಗಳಿಗಾಗಿ ತಾನು ವ್ಯಯಿಸುವ ಕೆಲವೊಂದು ಭ್ರಷ್ಟತೆಯ ಬಗ್ಗೆ ಮಾತನಾಡುವುದೇ ಇಲ್ಲ. ಅದರ ಬಗ್ಗೆ ಜಾಗೃತವಾಗುವುದೇ ಇಲ್ಲ ಎಂಬುದು ಮಾತ್ರ ವಾಸ್ತವ. ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ಮಾತ್ರ ಭ್ರಷ್ಟತೆಯೇ? ಆದರೆ ನಾವು ಖರೀದಿಸುವ ಆಸ್ತಿಯ ಮೌಲ್ಯವನ್ನು ಕಡಿಮೆಯಾಗಿ ತೋರಿಸಿ ತೆರಿಗೆ ವಂಚನೆ ಮಾಡಿಕೊಳ್ಳುವುದು ಭ್ರಷ್ಟಾಚಾರವಲ್ಲವೇ? ನಮ್ಮ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿಕೊಳ್ಳಲು ನಾವು ಅಲ್ಲಿನ ಸಿಬ್ಬಂದಿ, ಅಧಿಕಾರಿಗಳಿಗೆ ಹಣದ ರೂಪದಲ್ಲಿ ಲಂಚವನ್ನು ನೀಡಿ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತೇವೆ. ಅವರು ತೆಗೆದುಕೊಳ್ಳುವುದು ರೂಢಿಯಾಗಿಬಿಟ್ಟಿದ್ದರೆ, ಕೊಡುವುದು ನಮಗೆ ರೂಢಿಯಾಗಿಬಿಟ್ಟಿದೆಯಲ್ಲವೇ?

ಸರಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ನಾವು ಪ್ರಮುಖ ಕಾರಣಕರ್ತರು ಎಂದು ನಾವು ಅರಿತುಕೊಂಡು ಜಾಗೃತರಾಗುವವರೆಗೆ ಸಮಾಜದಿಂದ ಈ ಭ್ರಷ್ಟತೆಯನ್ನು ದೂರ ಮಾಡಲು ಸಾಧ್ಯವೇ ಇಲ್ಲ. ಮೌಢ್ಯಗಳಂತೆಯೇ ಈ ಭ್ರಷ್ಟಾಚಾರವೆಂಬುದು ಮುಖ್ಯವಾಗಿ ಮಧ್ಯಮ ವರ್ಗದ ಜನ ಜೀವನವನ್ನು ಹಾಸು ಹೊಕ್ಕಿದೆ.

ಈ ಸಮಾಜದಲ್ಲಿನ ಅವ್ಯವಸ್ಥೆಗಳ ಬಗ್ಗೆ ಧ್ವನಿ ಎತ್ತಿದರೆ ಅವರ ಹುಟ್ಟಡಗಿಸುವ ಪ್ರಯತ್ನ, ಕೊಲೆ ಮಾಡುವ, ಮಾಡಿಸುವ ಪ್ರಯತ್ನವೂ ಮಾಡಲಾಗುತ್ತದೆ. ಅಪವಾದಗಳಿಗೆ ಸಿಲುಕಿಸಿ ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡುವ ಪ್ರಯತ್ನಗಳೂ ನಡೆಯುವುದು ಸಾಮಾನ್ಯ. ಪ್ರಗತಿಪರ ಚಿಂತನೆಗಳನ್ನು ಮಂಡಿಸಿದಾಗ ಅದಕ್ಕೆ ವಿರೋಧಗಳೇ ಅಧಿಕವಾಗಿರುತ್ತದೆ. ಇದಕ್ಕೆ ನಾನೂ ಹೊರತಾಗಿಲ್ಲ. ನನಗೂ ಸಾಕಷ್ಟು ಬೆದರಿಕೆ ಕರೆಗಳು, ನನ್ನನ್ನು ಬಾಯಿ ಮುಚ್ಚಿಸುವ ಪ್ರಯತ್ನಗಳೂ ನಡೆದಿವೆ, ನಡೆಯುತ್ತಿವೆ. ಆದರೆ ಅದಕ್ಕಾಗಿ ಭಯ ಪಡುವ ಅಗತ್ಯವಿಲ್ಲವಾದರೂ ನಮ್ಮ ಸುರಕ್ಷತೆಯನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ನನಗೆ ಜೀವ ಬೆದರಿಕೆ ಕರೆ, ಪ್ರಯತ್ನಗಳು ನಡೆದ ಹಿನ್ನೆಲೆಯಲ್ಲಿ ನಾನು ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವ ಪ್ರಮೇಯ ಎದುರಾಯಿತು. ಪೊಲೀಸ್ ಇಲಾಖೆ ನನ್ನ ರಕ್ಷಣೆಗಾಗಿ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಿದೆ. ಆದರೆ ಇದಕ್ಕೂ ಅಪಸ್ವರ ಎತ್ತಲಾಗಿದೆ. ಏನು ಮಾಡೋಣ ಸ್ವಾಮಿ, ನನ್ನಂತಹ ಪ್ರಗತಿಪರ ಚಿಂತಕರು ತಮ್ಮ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಗಳು ದುರುಪಯೋಗ ವಾಗಿಬಿಡುತ್ತವೆ. ಆದರೆ ಅದೇ ತೊಗಾಡಿಯಾರಂತಹ ಆರೆಸ್ಸೆಸ್‌ನ ಮಂದಿ, ಸ್ವಾಮೀಜಿಗಳು ಮಾತ್ರ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬಹುದು. ಅವರ ಪ್ರಾಣಕ್ಕೆ ಮಾತ್ರ ಬೆಲೆ? ನಮ್ಮಂತಹವರ ಜೀವಕ್ಕೆ ಬೆಲೆ ಇಲ್ಲವೇ? ನಮಗೆ ಸುರಕ್ಷತೆ ನೀಡಿದಾಗ ಹಣ ದುರುಪಯೋಗವಾಗುವುದಾದರೆ, ಅವರೆಲ್ಲರ ಸುರಕ್ಷತೆಗೆ ಹಣ ದುರುಪಯೋಗವಾಗುವುದಿಲ್ಲವೇ?

ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡರೆ, ಮಾತನಾ ಡಿದರೆ, ಕೊಲೆಯಾಗುವ, ಕೊಲೆಗೆ ಪ್ರಯತ್ನ ನಡೆಯುವ ಈ ಕಾಲದಲ್ಲಿ ವೈಜ್ಞಾನಿಕ ವಿಚಾರಧಾರೆಗಳಿಗಿಂತಲೂ, ಮೌಢ್ಯ, ಬೂಟಾಟಿಕೆಯ ಮಾತುಗಳು, ಹೇಳಿಕೆಗಳು ಮೇಲ್ಮೆ ಯನ್ನು ಸಾಧಿಸುತ್ತಿರುವುದು ಮಾತ್ರ ಬೇಸರದ ಸಂಗತಿ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News