ಕನ್ನಡದ ಉಚಿತ ಫಾಂಟುಗಳು: ತೆರೆಯ ಹಿಂದಿನ ಸತ್ಯಕಥೆ

Update: 2018-06-23 17:46 GMT

ಉಚಿತ ತಂತ್ರಾಂಶಗಳನ್ನು ಸಿದ್ಧಪಡಿಸುವಲ್ಲಿನ ಶ್ರಮ, ಹಣ ಮತ್ತು ಕಾಲವನ್ನು ಉಳಿಸುವ ಉದ್ದೇಶದಿಂದ ಫಾಂಟುಗಳ ಹಕ್ಕುಸ್ವಾಮ್ಯದ ನಿಯಮಗಳನ್ನು ಪಾಲಿಸಿ ಉತ್ತಮ ಫಾಂಟುಗಳ ಮೂಲ ತಯಾರಕರ ಅನುಮತಿಯನ್ನು ಪಡೆದು ಅದನ್ನು ಬಳಸಿಕೊಳ್ಳಬಹುದು ಎಂಬುದಕ್ಕೆ ‘ಕುವೆಂಪು ತಂತ್ರಾಂಶ’ದಲ್ಲಿ ಅಳವಡಿಸಲಾಗಿರುವ ‘ಕುವೆಂಪು_ ಪ್ರಜಾ’ ಫಾಂಟುಗಳು ನಿದರ್ಶನವಾಗಿವೆ.

ರಾಜ್ಯ ಸರಕಾರದ ಉಚಿತ ಕನ್ನಡ ತಂತ್ರಾಂಶ ಸಲಕರಣೆಗಳನ್ನು ಈ ಅಂಕಣದಲ್ಲಿ ಪರಿಚಯಿಸುವ ಉದ್ದೇಶದಿಂದ ಜಾಲತಾಣ ವನ್ನು ಜಾಲಾಡುವಾಗ ಒಂದು ವಿಶೇಷ ಕಂಡುಬಂತು. ಹಲವು ತಂತ್ರಾಂಶ ಸಲಕರಣೆಗಳೊಂದಿಗೆ ಫಾಂಟ್ ರೂಪಿಸಿರುವ ಅಕ್ಷರಭಾಗಗಳ (ಗ್ಲಿಫ್) ಬಿಡಿಬಿಡಿ ಸ್ಕ್ಯಾನ್ ಮಾಡಿದ ಚಿತ್ರಗಳನ್ನೂ ಸಹ ಡೌನ್‌ಲೋಡ್ ಮಾಡಿಕೊಳ್ಳಲು ನೀಡಲಾಗಿದೆ. ಇದು ಬಳಕೆದಾರರಿಗೆ ಅಗತ್ಯವಿಲ್ಲ. ಹಿನ್ನೆಲೆ ಹುಡುಕುತ್ತಾ ಹೋದಾಗ ಅರ್ಥವಾದದ್ದು ಇಷ್ಟು: ಕನ್ನಡದ ಉಚಿತ ಲಿಪಿತಂತ್ರಾಂಶಗಳಿಗೆ ಒಂದು ಕಳಂಕವಿದೆ. ಮೊದಲಿಗೆ ಬೇರೆಯವರ ಫಾಂಟುಗಳನ್ನು ನಕಲು ಮಾಡಿಕೊಂಡು ಕನ್ನಡದ ಉಚಿತ ತಂತ್ರಾಂಶಗಳನ್ನು ರೂಪಿಸಲಾಗಿದೆ ಎಂಬ ವಿವಾದಗಳು ಎದ್ದಿದ್ದವು. ಕರ್ನಾಟಕ ಸರಕಾರಕ್ಕೆ ಸಿದ್ಧಪಡಿಸಿ ನೀಡಿರುವ ಯೂನಿಕೋಡ್ ಫಾಂಟ್‌ಗಳು ಮೂಲದಿಂದಲೇ ಸಿದ್ಧಪಡಿಸಿರುವುದು ಎಂಬುದರ ಸಾಕ್ಷ್ಯವಾಗಿ ತಂತ್ರಾಂಶ ತಯಾರಕರು ಒದಗಿಸಿರುವ, ಕಲಾವಿದರಿಂದ ಬರೆಯಿಸಿದ ಅಕ್ಷರಭಾಗಗಳ ಸ್ಕ್ಯಾನ್ ಮಾಡಲಾದ ಇಮೇಜ್‌ಗಳನ್ನು ಅಂತರ್ಜಾಲದಲ್ಲಿ ಹಾಕಲಾಗಿದೆ ಎಂದು ಭಾವಿಸಬಹುದು.

‘‘ಜಗತ್ತಿನ ಎಲ್ಲ ಕವಿಗಳನ್ನು ಅಕ್ಕಪಕ್ಕದಲ್ಲಿ ನಿಲ್ಲಿಸಿದರೆ, ಒಬ್ಬರ ಕೈ ಮತ್ತೊಬ್ಬರ ಜೇಬಿನಲ್ಲಿರುವುದು ಕಾಣಬಹುದು’’ ಎಂಬ ಮಾತು ಹಿಂದೆ ಎಲ್ಲೋ ಓದಿದ ನೆನಪು. ಈ ಮಾತು ಡಿಜಿಟಲ್ ಕನ್ನಡದ ಬಳಕೆಗೂ ಸಹ ಅನ್ವಯಿಸುತ್ತದೆ. ಕನ್ನಡದ ಫಾಂಟುಗಳ ಉಗಮ ಮತ್ತು ವಿಕಾಸದ ಇತಿಹಾಸವನ್ನು ಅವಲೋಕಿಸಿದರೆ. ಹಲವು ಕಹಿಸತ್ಯಗಳು ಹೊರಬರುತ್ತವೆ. ಅದಕ್ಕೇ ‘ನದಿ ಮೂಲ ಮತ್ತು ಋಷಿ ಮೂಲ ನೋಡಬಾರದು’ ಎಂದಿದ್ದಾರೆ ಹಿರಿಯರು. ಕನ್ನಡದ ಉಚಿತ ಲಿಪಿತಂತ್ರಾಂಶಗಳು ರೂಪುಗೊಂಡ ಹಿಂದಿನ ಕಥಾನಕ ಅಂಥ ಹಲವು ಸತ್ಯಗಳನ್ನು ಬಿಚ್ಚಿಡುತ್ತದೆ. ‘ಫಾಂಟುಗಳು’ ಯಾವುದೇ ‘ತಂತ್ರಾಂಶ’ ಕಟ್ಟಡವನ್ನು ಕಟ್ಟಲು ಬಳಸುವ ಇಟ್ಟಿಗೆಗಳಿದ್ದಂತೆ. ಫಾಂಟುಗಳನ್ನು ಸಿದ್ಧಪಡಿಸಿಕೊಳ್ಳುವುದು ಸಮಯ, ಶ್ರಮ ಮತ್ತು ಹಣವನ್ನು ಬೇಡುತ್ತದೆ. ಆದರೆ, ಕಲಾವಿದರ ನೈಪುಣ್ಯದ ಫಲವಾಗಿ ಒಮ್ಮೆ ಸಿದ್ಧಗೊಂಡ ಫಾಂಟುಗಳನ್ನು ಸುಲಭವಾಗಿ ಬೇರೆಯವರು ನಕಲಿಸಿಕೊಂಡು ಬಳಸಬಹುದು. ಫಾಂಟುಗಳಲ್ಲಿನ ಅಕ್ಷರಭಾಗಗಳನ್ನು ಸುವ್ಯವಸ್ಥಿತವಾದ, ಜೋಡಿಸಿ ಓದಬಲ್ಲ ಪಠ್ಯವನ್ನಾಗಿಸಲು (ಟೆಕ್ಸ್ಟ್ ರೆಂಡರಿಂಗ್) ಕೀಲಿಮಣೆಚಾಲಕ ತಂತ್ರಾಂಶವೊಂದು (ಕೀ-ಬೋರ್ಡ್ ಡ್ರೈವರ್) ಅಗತ್ಯವಿದೆ. ಕೀಬೋರ್ಡ್ ಡ್ರೈವರ್ ಅಂದರೆ, ಕೀಲಿಮಣೆಯ ಕೀಲಿಯೊತ್ತುಗಳನ್ನು ಆಧರಿಸಿ, ಫಾಂಟ್‌ನ ಗ್ಲಿಫ್‌ಗಳು ಎಂದು ಕರೆಯಲಾಗುವ ಕನ್ನಡ ಅಕ್ಷರಗಳ ತುಂಡುಗಳು ಅಥವಾ ಬಿಡಿ ಬಿಡಿಯಾದ ಅಕ್ಷರಭಾಗಗಳನ್ನು ಬಳಸಿ, ಪೂಣಾಕ್ಷರ ಗಳನ್ನಾಗಿ ಸಂಯೋಜಿಸಿ ಮೂಡಿಸುವ ಒಂದು ವ್ಯವಸ್ಥೆ. ಇದನ್ನು ಸಿದ್ಧಪಡಿಸುವುದು ತಂತ್ರಾಂಶ ತಯಾರಕರ ಕಾರ್ಯವಾಗಿದೆ.

ಕನ್ನಡದ ಮೊತ್ತಮೊದಲ ಅಂತರ್ಜಾಲ ಪತ್ರಿಕೆಯಾದ ‘ವಿಶ್ವಕನ್ನಡ’ವನ್ನು ಡಾ. ಯು.ಬಿ.ಪವನಜರವರು 1996ರಲ್ಲಿ ಆರಂಭಿಸಿದರು. ಬೆಂಗಳೂರಿನ ಏಸಸ್ ಕನ್‌ಸಲ್ಟೆಂಟ್ಸ್ ನಡೆಸುತ್ತಿದ್ದ ಶ್ರೀ ಎಸ್.ಕೆ.ಆನಂದ್ ‘ಆಕೃತಿ’ ಹೆಸರಿನ ಒಂದು ಕನ್ನಡದ ಟ್ರೂಟೈಪ್ ಫಾಂಟ್‌ನ್ನು ಈ ಅಂತರ್ಜಾಲ ಪತ್ರಿಕೆ ರಚಿಸಲು ಉಚಿತವಾಗಿ ನೀಡಿದ್ದರು. ‘ವಿಶ್ವಕನ್ನಡ’ ಪತ್ರಿಕೆಯನ್ನು ಓದುಗರು ಅಂತರ್ಜಾಲದಲ್ಲಿಯೇ ಓದಲು ಅನುವಾಗುವಂತೆ ಆಕೃತಿಯ ‘ರೀಡ್-ಓನ್‌ಲೀ’ ಫಾಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಲಾಗಿತ್ತು. ಶ್ರೀ ಶೇಷಾದ್ರಿ ವಾಸುರವರು ಈ ಅಂತರ್ಜಾಲತಾಣದಿಂದ ಈ ಫಾಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಆ ಫಾಂಟಿನ ಅಕ್ಷರ ಭಾಗಗಳನ್ನು ಆಧರಿಸಿ, ಸಿ-ಪ್ರೋಗ್ರಾಮಿಂಗ್ ಲಾಂಗ್ವೇಜ್ ಬಳಸಿ ಒಂದು ಕೀಬೋರ್ಡ್ ಡ್ರೈವರ್‌ನ್ನು ಸಿದ್ಧಪಡಿಸಿದರು. ಟ್ರೂಟೈಪ್ ಗ್ಲಿಫ್ ಫಾಂಟ್ ಮತ್ತು ಕೀಬೋರ್ಡ್ ಡ್ರೈವರ್ ಎರಡನ್ನೂ ಸಮಗ್ರೀಕರಿಸಿ, ಇಂಗ್ಲಿಷ್‌ನಲ್ಲಿಯೇ ಒಂದು ಯೂಸರ್ ಇಂಟರ್‌ಫೇಸ್ ಕಲ್ಪಿಸಿ, ‘ಕನ್ನಡದ ಎಡಿಟರ್’ ರೂಪದಲ್ಲಿ, ‘ಬರಹ’ 1.0 ಎಂಬ ಹೆಸರಿನಲ್ಲಿ ಮೊದಲ ಆವೃತ್ತಿಯ್ನು ಉಚಿತವಾಗಿ ಬಿಡುಗಡೆ ಮಾಡಿದರು.

ಬರಹ ತಾಂತ್ರಿಕವಾಗಿ ಸದೃಢವಾದ ತಂತ್ರಾಂಶವಾಗಿದ್ದು, ಕನ್ನಡಕ್ಕೆ ಸೀಮಿತಗೊಳ್ಳದೆ ಭಾರತೀಯ ಭಾಷೆಗಳ ತಂತ್ರಾಂಶವಾಗಿ ಬದಲಾಗಿ ಬಹಳ ಜನಪ್ರಿಯವಾಗಿದೆ. ಎರಡು ದಶಕಗಳಿಂದ ಹತ್ತು ಆವೃತ್ತಿಗಳು ಹೊರಬಂದಿದ್ದು, ಇಂದು ಬರಹ ಉಚಿತ ತಂತ್ರಾಂಶವಾಗಿ ಉಳಿದಿಲ್ಲ. ಅದನ್ನು ಬಳಸಲು ಹಣ ನೀಡಬೇಕಾಗಿದೆ. ಬರಹದ ಮೊದಲ ಆವೃತ್ತಿಯಲ್ಲಿ ಬಳಕೆಯಾಗಿದ್ದು ಮಾಲಕತ್ವದ ಮತ್ತು ಪಾವತಿಸಿ ಬಳಸಬೇಕಾಗಿದ್ದ ‘ಆಕೃತಿ’ ಎಂಬ ಡಿ.ಟಿ.ಪಿ.ತಂತ್ರಾಂಶದ ಫಾಂಟ್‌ನ ಗ್ಲಿಫ್‌ಗಳು. ಅದನ್ನು ಬಳಸಿಕೊಳ್ಳಲು ಶೇಷಾದ್ರಿ ವಾಸು ಮೂಲ ಫಾಂಟ್ ತಯಾರಕರ ಅನುಮತಿಯನ್ನೇನೂ ಪಡೆದಿರಲಿಲ್ಲ. ಕಾಪಿರೈಟ್ ಪ್ರಶ್ನೆಗಳು ಉದ್ಭವಿಸಿ ಇದು ಕಾಲಾನಂತರದಲ್ಲಿ ಒಂದು ವಿವಾದವಾಯಿತು. ಕಾಲಾನಂತರದಲ್ಲಿ ಶೇಷಾದ್ರಿ ವಾಸುರವರು ಅದಕ್ಕಾಗಿ ಕ್ಷಮೆಯನ್ನೂ ಕೋರಬೇಕಾಗಿ ಬಂತು.

ಲಿಪಿತಂತ್ರಾಂಶ ತಯಾರಿಕೆಯಲ್ಲಿ, ಕಲಾವಿದರಿಂದ ಆರಂಭಗೊಂಡು, ತಂತ್ರಜ್ಞರ ಕೈಯಲ್ಲಿ ಕೊನೆಗೊಳ್ಳಬೇಕಾದ ಪ್ರಮುಖವಾದ ಎರಡು ಹಂತಗಳಿವೆ. ಕನ್ನಡದ ಅಕ್ಷರಗಳ ಮೂಡಿಕೆಗಾಗಿ ಮೊದಲಿಗೆ ಕಲಾವಿದರ ಸಹಾಯ ಪಡೆದು ಹಾಳೆಯಮೇಲೆ ಅಕ್ಷರಗಳ ಗ್ಲಿಫ್‌ಗಳನ್ನು ರಚಿಸಿ ಪಡೆಯುವುದು - ಇದು ಮೊದಲ ಹಂತ. ಹಾಳೆಯ ಮೇಲಿನ ಚಿತ್ರರೂಪಿ ಅಕ್ಷರಭಾಗಗಳನ್ನು ಸ್ಕ್ಯಾನ್ ಮಾಡಿ ಬಿಟ್‌ಮ್ಯಾಪ್ ರೂಪದಲ್ಲಿನ ಕಂಪ್ಯೂಟರ್ ಅಕ್ಷರಭಾಗಗಳನ್ನು ಸಿದ್ಧಪಡಿಸುವುದು, ಹಾಗೆ ಸಿದ್ಧವಾದ ಕನ್ನಡ ಗ್ಲಿಫ್‌ಗಳು ಬೆರಳಚ್ಚು ಮೂಲಕ ಒಪ್ಪವಾಗಿ, ಪಠ್ಯವಾಗಿ, ರೂಪುಗೊಳ್ಳಲು ಸಿ-ಲಾಂಗ್ವೇಜ್ ಬಳಸಿ ಕೀಬೋರ್ಡ್ ಡ್ರೈವರ್ ನಿರ್ಮಾಣ ಮಾಡುವುದು; ಇವುಗಳು ತಂತ್ರಜ್ಞರ ಕೆಲಸ - ಇದು ಎರಡನೆಯ ಹಂತ. ‘ಬರಹ’ ರೂಪಿಸಲು ಆಕೃತಿಯ ಒಂದು ಟ್ರೂಟೈಪ್ ಫಾಂಟ್ ಸುಲಭವಾಗಿ ದೊರೆಯಿತು. ಇದರಿಂದ, ‘ಬರಹ’ ತಂತ್ರಾಂಶ ಸಿದ್ಧಪಡಿಸುವಲ್ಲಿ ಚಿತ್ರರೂಪಿ ಅಕ್ಷರಭಾಗಗಳ ತಯಾರಿಕೆಯ ಮೊದಲ ಹಂತದ ಕೆಲಸದ ಅಗತ್ಯವೇ ಉದ್ಭವಿಸಲಿಲ್ಲ. ಹಾಗೂ, ಎರಡನೆಯ ಹಂತದ ಕೆಲಸದಲ್ಲಿ ಅರ್ಧಭಾಗವಾದ ಟ್ರೂಟೈಪ್ ಫಾಂಟ್ ತಯಾರಿಕೆಯ ಕೆಲಸವೂ ಸಹ ಉಳಿಯಿತು. ಆದ್ದರಿಂದ, ಯೂಸರ್ ಇಂಟರ್‌ಫೇಸ್ ಸಹಿತ ಕೀಬೋರ್ಡ್ ಡ್ರೈವರ್ ಮತ್ತು ಫಾಂಟನ್ನು ಅಳವಡಿಸಿ ಒಂದು ‘ಎಡಿಟರ್’ನ್ನು ಸಿದ್ಧಪಡಿಸುವ ಮೂಲಕ ಬರಹದ ಮೊದಲ ಆವೃತ್ತಿಯು ಬಹಳ ಕನಿಷ್ಠ ಕಾಲದಲ್ಲಿ ಸಿದ್ಧವಾಯಿತು ಮತ್ತು ವಿಶ್ವಕೆ್ಕೀ ಉಚಿತವಾಗಿ ಬಳಕೆಗೆ ಲಭ್ಯವಾಯಿತು.

ಕನ್ನಡ ಗಣಕ ಪರಿಷತ್ತು (ಕಗಪ) ಕರ್ನಾಟಕ ಸರಕಾರಕ್ಕಾಗಿ ತಯಾರಿಸಿದ ‘ಕಲಿತ’ ಉಚಿತ ಕನ್ನಡ ಲಿಪಿ ತಂತ್ರಾಂಶವು ಸಾರ್ವಜನಿಕ ಬಳಕೆಗೆ ಬಿಡುಗಡೆಯಾಯಿತು. ಎರಡನೇ ಆವೃತ್ತಿಯನ್ನು ‘ನುಡಿ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ‘ನುಡಿ ಸಿದ್ಧಪಡಿಸುವಾಗಲೂ ಸಹ ಇತಿಹಾಸ ಮರುಕಳಿಸಿತು. ಮೊದಲಿಗೆ ಫಾಂಟ್‌ನ್ನು ಸಿದ್ಧಪಡಿಸಿಕೊಳ್ಳದೆ, ಉಚಿತವಾಗಿ ಲಭ್ಯವಿದ್ದ ಬರಹದ ಫಾಂಟನ್ನೇ ನೇರವಾಗಿ ಬಳಸಿ, ಹೊಸ ಕೀ-ಬೋರ್ಡ್ ಡ್ರೈವರ್ ಒಂದನ್ನು ತಯಾರಿಸಲಾಯಿತು. ಫಾಂಟೋಗ್ರಾಫರ್‌ನಂತಹ ತಂತ್ರಾಂಶವನ್ನು ಬಳಸಿ ‘ಬರಹ’ದಿಂದ ಎತ್ತಿಕೊಳ್ಳಲಾದ ಫಾಂಟಿನ ಗ್ಲಿಫ್‌ಗಳ ಮೂಲಆಸ್ಕಿ-ಸಂಕೇತಗಳನ್ನು ಬದಲಾಯಿಸಲಾಯಿತು. ತಮ್ಮ ಫಾಂಟುಗಳನ್ನು ಕದ್ದು ಉಚಿತ ತಂತ್ರಾಂಶಗಳನ್ನು ತಯಾರಿಸಲಾಗುತ್ತಿದೆ ಎಂದು ಖಾಸಗಿ ತಂತ್ರಾಂಶ ತಯಾರಕರು ಲೋಕಾಯುಕ್ತಕ್ಕೆ ದೂರುವಂತಾಯಿತು. ದೂರಿನಲ್ಲಿ ಹುರುಳಿಲ್ಲ ಎಂಬ ನಿರ್ಣಯ ಹೊರಬಂತು. ಭಾರತದಲ್ಲಿ ಇಂದಿಗೂ ಕಾಪಿರೈಟ್ ಕಾಯ್ದೆಯೇ ಡಿಜಿಟಲ್ ವ್ಯಾಜ್ಯಗಳಿಗೂ ಅನ್ವಯಿಸುತ್ತಿದೆ. ವಿದೇಶಗಳಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಉತ್ತಮ ಕಾನೂನುಗಳಿವೆ ಎಂದು ಹೇಳಲಾಗಿದೆ. ಕನ್ನಡದ ಫಾಂಟುಗಳನ್ನು ನಕಲು ಮಾಡಿ ತಂತ್ರಾಂಶ ತಯಾರಿಸಿರುವ ಅಪರಾಧವನ್ನು ನ್ಯಾಯಾಲಯಗಳಲ್ಲಿ ಸಾಬೀತುಪಡಿಸುಸುವುದು ಅತ್ಯಂತ ಕಷ್ಟಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

ಉಚಿತ ತಂತ್ರಾಂಶಗಳನ್ನು ಸಿದ್ಧಪಡಿಸುವಲ್ಲಿನ ಶ್ರಮ, ಹಣ ಮತ್ತು ಕಾಲವನ್ನು ಉಳಿಸುವ ಉದ್ದೇಶದಿಂದ ಫಾಂಟುಗಳ ಹಕ್ಕುಸ್ವಾಮ್ಯದ ನಿಯಮಗಳನ್ನು ಪಾಲಿಸಿ ಉತ್ತಮ ಫಾಂಟುಗಳ ಮೂಲ ತಯಾರಕರ ಅನುಮತಿಯನ್ನು ಪಡೆದು ಅದನ್ನು ಬಳಸಿಕೊಳ್ಳಬಹುದು ಎಂಬುದಕ್ಕೆ ‘ಕುವೆಂಪು ತಂತ್ರಾಂಶ’ದಲ್ಲಿ ಅಳವಡಿಸಲಾಗಿರುವ ‘ಕುವೆಂಪು_ ಪ್ರಜಾ’ ಫಾಂಟುಗಳು ನಿದರ್ಶನವಾಗಿವೆ. ಪ್ರಕಾಶಕ್ ಹೆಸರಿನ ಡಿ.ಟಿ.ಪಿ.ತಂತ್ರಾಂಶವನ್ನು ದಶಕಗಳ ಹಿಂದೆ ತಯಾರಿಸಿದ ಸೊನಾಟಾ ಕಂಪೆನಿ ತನ್ನ ಹಳೆಯ ತಂತ್ರಾಂಶಗಳಿಗೆ ಈಗ ಬಳಕೆಯ ಬೆಂಬಲವನ್ನು ನಿಲ್ಲಿಸಿದೆ. ‘ಪ್ರಜಾ’ ಹೆಸರಿನ ಫಾಂಟುಗಳು ಪತ್ರಿಕೆ ಮತ್ತು ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಆ ಫಾಂಟ್‌ನ್ನು ಕನ್ನಡಕ್ಕೆ ಮರುಬಳಸಬೇಕೆಂಬುದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಆಶಯವಾಗಿತ್ತು. ಸೊನಾಟಾ ಕಂಪೆನಿಗೆ ಮನವಿ ಸಲ್ಲಿಸಿ ಅವರ ಅನುಮತಿ ಪಡೆದು ‘ಪ್ರಜಾ’ ಫಾಂಟುಗಳನ್ನು ಸೂಕ್ತ ರೀತಿಯಲ್ಲಿ ಸಂಕೇತಗಳನ್ನು ಬದಲಿಸಿ ಕುವೆಂಪು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲಾಯಿತು. ವಿವಾದಗಳ ಕುರಿತು ಮುನ್ನೆಚ್ಚರಿಕೆ ವಹಿಸಿ, ಫಾಂಟ್ ಬಳಕೆಗೆ ಅನುಮತಿ ಪಡೆಯುವಂತೆ ಸಲಹೆಯನ್ನು ನೀಡಿ, ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡದ್ದು ಈ ಅಂಕಣಕಾರನ ಸೌಭಾಗ್ಯ. ‘ಕುವೆಂಪು _ಪ್ರಜಾ’ ಹೆಸರಿನ ಫಾಂಟುಗಳು ಪುಸ್ತಕ ಪ್ರಕಾಶನಕ್ಕೆ ಉತ್ತಮವಾಗಿವೆ. ಇದನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಇಂದಿಗೂ ತನ್ನ ಪ್ರಸಾರಾಂಗದ ಪ್ರಕಟನೆಗಳನ್ನು ಮುದ್ರಿಸಲು ಬಳಸುತ್ತಿದೆ. ಪ್ರಕಾಶನ ಕಾರ್ಯಕ್ಕೆ ಕನ್ನಡದ ಈ ಉಚಿತ ಫಾಂಟನ್ನು ಎಲ್ಲರೂ ಸಹ ಬಳಸಬಹುದು.

Writer - ಡಾ.ಎ. ಸತ್ಯನಾರಾಯಣ

contributor

Editor - ಡಾ.ಎ. ಸತ್ಯನಾರಾಯಣ

contributor

Similar News