ಜೀವನ ಕೌಶಲ್ಯಕ್ಕೆ ತರಬೇತಿಗಳು

Update: 2018-06-23 18:49 GMT

ಭಾಗ 5

ಅಧ್ಯಯನ ಮತ್ತು ಅರಿವು

ಕಲಿಸುವ ಕುಶಲಿಗಳು

ಜೀವನ ಕೌಶಲ್ಯವನ್ನು ಕಲಿಸುವಂತಹ ಪ್ರಕ್ರಿಯೆ ಶಾಲೆಯಲ್ಲೂ ಆಗಬೇಕು ಮತ್ತು ಮನೆಯಲ್ಲೂ ಆಗಬೇಕು. ಮಕ್ಕಳಿಗೆ ಜೀವನ ಕೌಶಲ್ಯವನ್ನು ಕಲಿಸುವಂತಹ ಕುಶಲಿಗಳು ಕುಟುಂಬದ ಸದಸ್ಯರು, ಶಾಲೆಯ ಯಾವುದೇ ಸಿಬ್ಬಂದಿ, ಮನೆಗೆ ಬರುವ ಯಾರೇ ಅತಿಥಿಗಳು; ಹೀಗೆ ಯಾರಾದರೂ ಆಗಿರಬಹುದು ಮತ್ತು ಆಗಿರಬೇಕು. ಆದರೆ ನಮ್ಮ ಮಕ್ಕಳಿಗೆ ಅವರಿವರು ಕಲಿಸಲಿ ಎಂಬ ಧೋರಣೆಗಿಂತ ನಾವೇ ಕಲಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು. ಕನಿಷ್ಠ ಪಕ್ಷ ಅವರಿವರು ಕಲಿಸುತ್ತಿರುವಾಗ ಮಗು ಏನನ್ನು ಕಲಿಯುತ್ತಿದೆ ಎಂಬುದನ್ನಾದರೂ ಗಮನಿಸುವಂತಹ ವ್ಯವಧಾನ ಇರಲೇಬೇಕು. ಜೀವನ ಕೌಶಲ್ಯವನ್ನು ಮಕ್ಕಳಿಗೆ ಕಲಿಸಬೇಕು ಎಂದ ಕೂಡಲೇ ನಾವು ಪೋಷಕರೇ ಆಗಿರಲಿ, ಶಿಕ್ಷಕರೇ ಆಗಿರಲಿ ಮೊದಲು ನಾವು ಕುಶಲಿಗಳಾಗಬೇಕು. ಅದಕ್ಕೆ ನಮ್ಮನ್ನು ನಾವು ಸಿದ್ಧ ಪಡಿಸಿಕೊಳ್ಳುವುದಕ್ಕೆ ಹಲವು ಗಮನಾರ್ಹ ಅಂಶಗಳಿವೆ.

ಕುಶಲಿ ಪೋಷಕರು ಮತ್ತು ಶಿಕ್ಷಕರು

ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ಜೀವನ ಕೌಶಲ್ಯ ನೀಡಲು ಏನು ಮಾಡಬೇಕು?

1.ಮೊದಲು ಯೋಜನೆ. ಇದರಲ್ಲಿ ತರಬೇತಿಯ ಮೂಲಕ ಯಾವ ಕೌಶಲ್ಯವನ್ನು ಹೇಳಿಕೊಡುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದು, ಅದಕ್ಕೆ ಬೇಕಾದಂತಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರಲ್ಲಿ ಬೇಕಾದ ಬರವಣಿಗೆ, ಕೆಲಸಕ್ಕೆ ಬೇಕಾದ ವಸ್ತುಗಳು, ಇವಕ್ಕೆ ಎಷ್ಟು ಸಮಯ ಬೇಕಾಗಬಹುದು; ಇತ್ಯಾದಿ ಎಲ್ಲದರ ಸಂಪೂರ್ಣ ಸಿದ್ಧತೆ ಇರಬೇಕು. ಕಡಿಮೆ ಅವಧಿಯಲ್ಲಿ ಕೆಲವು ಕೌಶಲ್ಯಗಳನ್ನು ಹೇಳಿಕೊಡಲಾಗುವುದಿಲ್ಲ. ಅಂತವನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸುವುದು ಅಥವಾ ನಿರ್ದಿಷ್ಟಾವಧಿಯವರೆಗೂ ಮುಂದುವರಿಸಿ ನಂತರ ಕೈ ಚೆಲ್ಲುವುದು ಮಾಡಬಾರದು.

2.ಜೀವನ ಕೌಶಲ್ಯದ ತತ್ವವನ್ನು, ಅದರ ಚಾರಿತ್ರಿಕ ಹಿನ್ನೆಲೆಯನ್ನು ಮತ್ತು ಕಾನೂನಾತ್ಮಕ ವಿಚಾರಗಳನ್ನು ಶಿಕ್ಷಕರು ತಿಳಿದಿರಬೇಕು.

3.ಒಂದೊಂದು ಮಗುವೂ ಒಂದು ರೀತಿಯ ಪ್ರತಿಕ್ರಿಯೆಗಳನ್ನು ತೋರುತ್ತದೆ. ಎಲ್ಲಾ ಮಕ್ಕಳೂ ಎಲ್ಲಾ ತರಬೇತಿಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ಸ್ಪಷ್ಟತೆ ಇರಬೇಕು.

4.ಅದಕ್ಕಾಗಿಯೇ ಮಕ್ಕಳಿಗೆ ಇವುಗಳ ಬಗ್ಗೆ ತಿಳಿಸುವುದಕ್ಕೆಂದೇ ವಿಶೇಷವಾದ ನಿರೂಪಣಾ ತಂತ್ರವನ್ನು ಶಿಕ್ಷಕರು ಅಭ್ಯಾಸ ಮಾಡಬೇಕು. ಹಾಗೆಯೇ ಅದನ್ನು ವಿನ್ಯಾಸಗೊಳಿಸಬೇಕು. ಅದಕ್ಕೆ ಪೂರ್ವಭಾವಿಯಾಗಿ ಬೇಕಾಗಿರುವಂತಹ ಜ್ಞಾನ ನೀಡಬೇಕು. ಶಿಸ್ತು ಕಲಿಸಬೇಕು. ವಿದ್ಯಾರ್ಥಿ, ಸಮುದಾಯ ಮತ್ತು ಶೈಕ್ಷಣಿಕ ಗುರಿ ಈ ಎಲ್ಲದರ ಗಮನ ಜೀವ ಕೌಶಲ್ಯದ ಶಿಕ್ಷಕರಿಗೆ ಇರಬೇಕು. ಅದರಲ್ಲೂ ಅದು ಮೂರರಿಂದ ಇಪ್ಪತ್ತು ವರ್ಷಗಳವರೆಗೆ ಅಭ್ಯಾಸಕ್ಕೆ ಒಳಪಡುವಂತದ್ದಾಗಿರುತ್ತದೆ.

5.ಶಿಕ್ಷಕರಾಗಲಿ, ಪೋಷಕರಾಗಲಿ ಯಾವುದರ ಕೌಶಲ್ಯವನ್ನು ಕಲಿಸಲು ಮುಂದಾಗುತ್ತಾರೋ ಮೊದಲು ಅದರ ಸಂಪೂರ್ಣ ಫಲವನ್ನು, ಕೆಲಸ ಕೊನೆಯ ಹಂತವನ್ನು ಮತ್ತುಅದರ ಉಪಯೋಗ, ಅದರ ವ್ಯಾಪ್ತಿ, ಅದರ ಅಗತ್ಯ; ಹೀಗೆ ಎಲ್ಲವನ್ನೂ ತೋರಿಸಿ ವಿವರಿಸಬೇಕು. ಮಕ್ಕಳಿಗೆ ತಾವೂ ಇದನ್ನು ಮಾಡಬೇಕು ಎಂಬ ಆಸಕ್ತಿ ಹುಟ್ಟಿಸಬೇಕು. ಅದಾದ ನಂತರ ಕೆಲಸವನ್ನು ಆರಂಭಿಸಬೇಕು.

6.ಜೀವನ ಕೌಶಲ್ಯವನ್ನು ಕಲಿಸುವಂತಹ ಶಿಕ್ಷಕರು ತತ್ಕಾಲದ ಮತ್ತು ದೀರ್ಘ ಕಾಲದ; ಎರಡೂ ಬಗೆಯ ಯೋಜನೆಗಳನ್ನು ಹಾಕಿ ಗುರಿಯನ್ನು ನೀಡಬೇಕು. ಪಠ್ಯ ಶಿಕ್ಷಣ ಮತ್ತು ಕಲಿಯುವ ಮಗುವಿನ ಭಿನ್ನ ಸೆಳೆತಗಳು, ಕಲಿಯುವ ಬಗೆ; ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

7.ಯಾವುದೇ ವೃತ್ತಿ ಅಥವಾ ಕಲಾ ಕೌಶಲ್ಯದ ತರಬೇತಿಯನ್ನು ನೀಡುವಾಗ, ಅದರ ಪಾಲಿಸಿಗಳೇನು, ಅದರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನಮಾನಗಳೇನು, ಕಾನೂನಾತ್ಮಕವಾಗಿ ವ್ಯವಸ್ಥೆಯಲ್ಲಿ ಅದನ್ನು ಹೇಗೆ ನೋಡುವುದು, ಅದರ ಇತಿಮಿತಿಗಳೇನು, ವ್ಯಾಪಾರ ಮತ್ತು ಇತರೇ ಸಂಬಂಧದಲ್ಲಿ ಇದನ್ನು ಹೇಗೆ ನೋಡುವುದು - ಇವೆಲ್ಲಾ ಬಹು ಮುಖ್ಯವಾದಂತಹ ವಿಷಯಗಳಾಗಿರುತ್ತವೆ.

8.ಯಾವುದೇ ಕಲೆ ಮತ್ತು ವೃತ್ತಿ ಕೌಶಲ್ಯದ ತರಬೇತಿಯ ಸಮಯದಲ್ಲಿ ಏಳಬಹುದಾದಂತಹ ಸಮಸ್ಯೆಗಳನ್ನು ಮತ್ತು ಅವುಗಳನ್ನು ನಿವಾರಿಸಿಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಗಮನದಲ್ಲಿರಿಸಿಕೊಂಡಿರಬೇಕು.

9.ಮಕ್ಕಳು ವಿವಿಧ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಬಂದಿರುವ ಕಾರಣದಿಂದ ಶಾಲೆಯಲ್ಲಿ ಏಕರೀತಿಯ ಪ್ರತಿಕ್ರಿಯೆಗಳು ಸಿಗುವುದಿಲ್ಲ. ಆದರೆ, ಸಮಗ್ರವಾಗಿ ಮಕ್ಕಳಿಗೆ ಶಾಲಾ ಜೀವನದಲ್ಲಿ ಮತ್ತು ಅದರ ನಂತರವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಹಲವು ವೃತ್ತಿ ಮತ್ತು ಕಲಾ ತರಬೇತಿ ಕೌಶಲ್ಯಗಳ ತರಬೇತಿಗಳನ್ನು ಅವಶ್ಯ ನೀಡಲೇಬೇಕು.

10.ಮಕ್ಕಳ ಮನಸ್ಥಿತಿಗಳು ಅವರ ಕುಟುಂಬದ ಪರಿಸ್ಥಿತಿಗಳ ಮೇಲೆ ಆಧಾರವಾಗಿರುತ್ತದೆ. ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳ ಪರಿಚಯ ಶಿಕ್ಷಕರಿಗೆ ಇದ್ದರೆ ಬಹಳ ಒಳ್ಳೆಯದು. ಅದು ಖಂಡಿತವಾಗಿ ಕೌಶಲ್ಯಗಳನ್ನು ಆಯ್ದುಕೊಳ್ಳುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ.

11.ಮಕ್ಕಳು ಯಾವುದೇ ತರಬೇತಿಯನ್ನು ಪಡೆದರೂ ಅವರು ಅದನ್ನು ಬಳಸುವಂತಿರಬೇಕು. ಇದರಿಂದ ವಸ್ತುವಿನ ಉಪಯುಕ್ತತೆಯನ್ನು ತಿಳಿಯುವುದರಿಂದ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ.

12.ತಾವು ಮಾಡುವ ಕೆಲಸ ಅಥವಾ ಮಾಡುವ ವಸ್ತುವಿನ ಉಪಯುಕ್ತತೆಯನ್ನು ಮಕ್ಕಳು ಅರಿತರೆ ತಾವು ಮಾಡುತ್ತಿರುವುದು ಉತ್ಪಾದನೆ ಎಂಬ ಅರಿವು ಅವರಿಗೆ ಬರುತ್ತದೆ. ಉಪಯುಕ್ತ ವಸ್ತುಗಳ ಉತ್ಪಾದಕರು ತಾವು ಎಂಬ ಅರಿವು ಸಾಮಾನ್ಯವಾಗಿ ವಿನಾಶಕರ ಮನಸ್ಥಿತಿಗಳ ಕಡೆಗೆ ಒಯ್ಯುವುದಿಲ್ಲ.

13.ಶಾಲೆಯಲ್ಲಿ ಈ ತರಬೇತಿಗೆ ಬೇಕಾದಂತಹ ವಾತಾವರಣ ಮತ್ತು ಸ್ಥಳಾವಕಾಶವನ್ನು ಮಾಡಬೇಕು. ಎಲ್ಲಾ ಸಲಕರಣೆಗಳು ಇರಬೇಕು.

14.ಮಾಡಿ ಮತ್ತು ಬಳಸಿ; ಈ ಮಾದರಿಯ ವಸ್ತುಗಳ ತಯಾರು ಮಾಡುವುದು ಮಕ್ಕಳಿಗೆ ಬಹುದೊಡ್ಡ ಮತ್ತು ಉತ್ತಮ ಆರಂಭವಾಗುತ್ತದೆ.

15.ಮಾಡಿರುವ ವಸ್ತುಗಳಲ್ಲಿ ಸೃಜನಾತ್ಮಕವಾಗಿ ಮತ್ತು ಕಲಾತ್ಮಕವಾಗಿ ಪ್ರಯೋಗಗಳನ್ನು ಮಾಡುವುದನ್ನು ಪ್ರೋತ್ಸಾಹಿಸಬೇಕು.

16.ಜೀವನ ಕೌಶಲ್ಯವನ್ನು ಕಲಿಸಿಕೊಡುವಂತಹ ಶಿಕ್ಷಕರು ಪ್ರತಿ ಮಗುವಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದಿರಬೇಕು. ಸಾಮರ್ಥ್ಯವನ್ನು ಉಪಯೋಗಿಸುವುದನ್ನೂ ಮತ್ತು ದೌರ್ಬಲ್ಯವನ್ನು ಮೀರಿ ಸಾಮರ್ಥ್ಯಗಳಿಸುವುದನ್ನೂ ಉದ್ದೇಶವಾಗಿ ಹೊಂದಿರಬೇಕು.

17.ಮಗುವು ತಪ್ಪುಗಳನ್ನು ಮಾಡಿದರೂ ಸಕಾರಾತ್ಮಕವಾದ ವರ್ತನೆ ಮತ್ತು ನಿರ್ದೇಶನಗಳಿಂದ ಮತ್ತೊಂದು ಪ್ರಯೋಗವನ್ನು ಮಾಡಿಸಬೇಕೇ ಹೊರತು, ಇದನ್ನು ಮಾಡಕ್ಕೆ ನಿನ್ ಕೈಯಲ್ಲಿ ಆಗಲ್ವಾ? ಇಷ್ಟನ್ನೂ ಮಾಡದೇ ಹೋದರೆ ಹೇಗೆ? ನಿನ್ ಕೈಯಲ್ಲಿ ಇದಾಗಲ್ಲ ಬಿಡು; ಇತ್ಯಾದಿ ನಕಾರಾತ್ಮಕವಾದ ಮಾತುಗಳನ್ನು ಕಡ್ಡಾಯವಾಗಿ ಆಡಲೇಬಾರದು. ಇದು ಅಪರಾಧ. ಜೀವನ ಕೌಶಲ್ಯ ತರಬೇತಿ ನೀಡುವವರು ಬಹುಮುಖ್ಯವಾಗಿ ತಮ್ಮ ಕಡೆಗೆ ಮಕ್ಕಳನ್ನು ಆಕರ್ಷಿಸಿಕೊಳ್ಳುವಂತಹ ಕುಶಲಿಗಳಾಗಿರಬೇಕು. ಮುಂದೆ ಪ್ರಾಯೋಗಿಕ ತರಗತಿಗಳು ಹೇಗಿರಬೇಕು? ಅವುಗಳನ್ನು ಹೇಗೆ ನಡೆಸಬೇಕೆಂದು ನೋಡೋಣ.

ಜೀವನ ಕೌಶಲ್ಯವೆಂಬುದು ನಿಜಕ್ಕೂ ಏನು?

ಜೀವನ ಕೌಶಲ್ಯವೆಂಬುದು ಮಕ್ಕಳ ವ್ಯಾಪ್ತಿಯಲ್ಲಿ ಕಲಿಸುವ ಸಂಪೂರ್ಣ ಬದುಕಿನ ಪಾಠವಾಗಿರುತ್ತದೆ. ಅದು ವರ್ತಮಾನಕ್ಕೆ ಮಾತ್ರವಲ್ಲದೇ ಭವಿಷ್ಯಕ್ಕೂ ಕೂಡ ಎಂಬ ಸ್ಪಷ್ಟ ಅರಿವು ಹಿರಿಯರಿಗೆ ಇರಬೇಕು. ಇದು ಬರೀ ಪಠ್ಯ ಮಾತ್ರವಲ್ಲದೆ ಕ್ರಿಯಾತ್ಮಕವಾಗಿ ತಮ್ಮನ್ನು ತಾವು ಇಂದು ಮತ್ತು ಮುಂದೂ ತೊಡಗಿಸಿಕೊಳ್ಳುವಂತಹ ಬಹುದೊಡ್ಡ ತರಬೇತಿಯಾಗಿರುತ್ತದೆ. ಇದು ಯಾವುದೋ ಒಂದು ವಯಸ್ಸಿಗೆ ಅಥವಾ ತರಗತಿಗೆ ಪ್ರಾರಂಭಿಸುವುದಲ್ಲ. ಎಳೆಯ ವಯಸ್ಸಿನಿಂದಲೂ ಇದರ ಪಾಠವನ್ನು ಮಾಡುತ್ತಿರುತ್ತೇವೆ ಮತ್ತು ತರಬೇತಿಯನ್ನು ಕೊಡುತ್ತಿರುತ್ತೇವೆ ಎಂಬುದು ತಿಳಿದಿರಲಿ. ಶಾಲೆಯಲ್ಲಿ ಕ್ರಿಯಾತ್ಮಕವಾಗಿರುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದು ಸಾಮೂಹಿಕ ಕಾರ್ಯವಾಗಿರದೆ ವ್ಯಕ್ತಿಗತ ಕೆಲಸಗಳಾಗಿರಬೇಕು. ಹೇಗೆಂದರೆ, ಪರಿಸರದ ದಿನ ತರಗತಿಯಿಂದ ಒಂದು ಗಿಡವನ್ನು ನೆಟ್ಟ್ಟು, ಎಲ್ಲರೂ ಅದರ ಸುತ್ತ ನೆರೆದು ಫೋಟೊ ಹಿಡಿದುಕೊಂಡು, ಆ ಗಿಡವನ್ನು ಪೋಷಿಸಿ ಅದನ್ನು ಮರವನ್ನಾಗಿಸುವುದು ಆ ತರಗತಿಯ ಕೆಲಸ ಎಂದು ಬಿಡುವುದಲ್ಲ. ಎಲ್ಲರ ಕೆಲಸ ಯಾರ ಕೆಲಸವೂ ಆಗಿರುವುದಿಲ್ಲ. ಒಂದೊಂದು ಮಗುವೂ ತಾನೇ ತನ್ನ ಕೈಯನ್ನು ಮಣ್ಣು ಮಾಡಿಕೊಂಡು, ಗಿಡ ನೆಟ್ಟು, ಅದರ ಪಾಲನೆ ಪೋಷಣೆಯನ್ನು ತಾನೇ ಮಾಡುವುದು. ಅದರ ಸಂಪೂರ್ಣ ಬೆಳವಣಿಗೆಯನ್ನು ತಾನೇ ನೋಡಿಕೊಳ್ಳುವುದು. ಹೀಗೆ ಕೆಲಸವನ್ನು ಸಮೂಹದಿಂದ ಒಂದು ಮಗುವಿಗೆ ಹಂಚಿಕೊಡಬೇಕು. ಸಾಮೂಹಿಕವಾಗಿ ಮಾಡುವ ಕೆಲಸಗಳು ಬೇರೆ ಇರುತ್ತವೆ. ಸಾಂಘಿಕ ಮನಸ್ಥಿತಿಯಿಂದ ಪರಸ್ಪರ ಸಹಕರಿಸಿಕೊಂಡು ಕಟ್ಟುವ, ತೋಡುವ, ಮಣ್ಣೆತ್ತುವ, ಅದನ್ನು ಸಾಗಿಸುವ; ಇತ್ಯಾದಿ ಹಲವು ಕೆಲಸಗಳನ್ನು ಮಕ್ಕಳು ಮಾಡಬಹುದು. ಆದರೆ ಕೆಲವು ಕೆಲಸಗಳು ಒಬ್ಬೊಬ್ಬರೇ ಮಾಡುವಂತಹದ್ದಾಗಿರುತ್ತದೆ ಮತ್ತು ತಾವೇ ಜವಾಬ್ದಾರಿಯನ್ನು ಹೊರುವಂತಹುದ್ದಾಗಿರುತ್ತದೆ. ನಿರ್ದೇಶನಗಳನ್ನು ಮತ್ತು ವಿವರಗಳನ್ನು ಸಾಮೂಹಿಕವಾಗಿ ನೀಡಬೇಕು. ಆದರೆ ಅವರು ಕೆಲಸಗಳನ್ನು ಮಾಡುವಾಗ ಒಬ್ಬೊಬ್ಬರೇ ಮಾಡುವಷ್ಟು ಸಶಕ್ತರೂ ಮತ್ತು ಸನ್ನದ್ಧರೂ ಆಗಿರಬೇಕು. ಜೀವನ ಕೌಶಲ್ಯ ತರಬೇತಿಯಲ್ಲಿ ಈ ಅಂಶವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಮಕ್ಕಳು ತಾವೇ ಆ ಒಂದು ಕೆಲಸವನ್ನು ಮಾಡುವಂತಹ ಸಿದ್ಧತೆಯನ್ನು ಹೊಂದಿರಬೇಕು. ಯಾವುದೇ ಉಪಯುಕ್ತ ವೃತ್ತಿ ಅಥವಾ ಕಲೆಯಲ್ಲಿ ಅತೀವ ಆಸಕ್ತಿಯಿಂದ ಪರಿಣತಿಯನ್ನು ಹೊಂದುವುದೇ ನಿಜವಾಗಿಯೂ ಜೀವನ ಕೌಶಲ್ಯದ ಮುಖ್ಯವಾದ ಗುರಿಯಾಗಿರುತ್ತದೆ. ಶಾಲೆಯಲ್ಲಿ ಪ್ರಯೋಗ ಶೀಲ ಪಠ್ಯ ಪುಸ್ತಕಗಳನ್ನು ಅಳವಡಿಸಿಕೊಳ್ಳು ವುದು, ಪರಸ್ಪರ ಸಂಪರ್ಕ ಮತ್ತು ಸಂವಹನವನ್ನು ಸಾಧಿಸುವುದು, ಮನೆ ಗೆಲಸಗಳ ಮಾದರಿಗಳನ್ನು ಒದಗಿಸುವುದು, ಬಿಡುವಿನ ವೇಳೆಯಲ್ಲಿ ಮನರಂಜನೆ ಮತ್ತು ಇತರ ಕೆಲಸಗಳನ್ನು ತಾವು ಮಾಡಿಕೊಳ್ಳುವುದು, ವೃತ್ತಿಪರ ತರಬೇತಿಗಳನ್ನು ಕೊಡುವುದು; ಈ ಎಲ್ಲಾ ವಿಷಯಗಳಿಗೂ ಆದ್ಯತೆಯನ್ನು ಕೊಡಬೇಕು. ಜೀವನ ಕೌಶಲ್ಯದಲ್ಲಿ ನೀಡಬೇಕಾಗಿರುವುದೇ ಗರಿಷ್ಠ ಪ್ರಮಾಣದ ಸ್ವಾತಂತ್ರಕ್ಕೆ ಆದ್ಯತೆ ಮತ್ತು ಅದನ್ನು ಬಳಸಿಕೊಂಡು ರಚನಾತ್ಮಕವಾಗಿ ಕೆಲಸ ಮಾಡುವಂತಹ ಮುಕ್ತ ಅವಕಾಶ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News