ಅಧಿಕಾರ ವ್ಯಾಮೋಹದಿಂದ ಬೆಳವಣಿಗೆ ಅಸಾಧ್ಯ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ

Update: 2018-06-24 13:55 GMT

ಬೆಂಗಳೂರು, ಜೂ.24 : ಅಧಿಕಾರದ ವ್ಯಾಮೋಹ ಹಾಗೂ ಗೌಪ್ಯ ಆಡಳಿತ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಯಾವ ಸಂಸ್ಥೆಗಳೂ ಬೆಳವಣಿಗೆ ಆಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹೇಳಿದ್ದಾರೆ.

ನಗರದ ಉದಯಭಾನು ಕಲಾ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಉದಯಭಾನು ಕಲಾ ಸಂಘದ 54ನೆ ಸಂಸ್ಥಾಪನಾ ದಿನಾಚರಣೆ ಮತ್ತು ತ್ರೈಮಾಸಿಕ ಸುದ್ದಿಪತ್ರಿಕೆ ಉದಯಸೌರಭ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರಕಾರ ಸೇರಿದಂತೆ ಪ್ರತಿ ಸಂಸ್ಥೆಗಳೂ ಅಧಿಕಾರದ ವ್ಯಾಮೋಹದಿಂದ ಕೆಲಸ ನಿರ್ವಹಿಸುತ್ತಿವೆ. ನಿರ್ವಂಚನೆಯಿಂದ ಸೇವೆ ಸಲ್ಲಿಸುವವರ ಸಂಖ್ಯೆ ಅತಿ ವಿರಳ ಎಂದರು.

ಎಲ್ಲ ಸಂಸ್ಥೆಗಳು ಅಧಿಕಾರದ ವ್ಯಾಮೋಹ ಬಿಟ್ಟು ಸೇವೆ ಸಲ್ಲಿಸಬೇಕು. ಆಗ ಪ್ರತಿಯೊಬ್ಬರೂ ಹೃದಯ ತೆರೆದು ನೋಡುತ್ತಾರೆ. ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ಆದರೆ, ನಮ್ಮಲ್ಲಿ ಅಂತಹ ಸಂಸ್ಥೆಗಳು ಇಲ್ಲದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಆಡಳಿತ ಮಂಡಳಿಗಳು ಅಧಿಕಾರ, ಅಲ್ಲಿನ ನಿರ್ಣಯ ಸೇರಿದಂತೆ ಎಲ್ಲವನ್ನೂ ಗೌಪ್ಯವಾಗಿಡುತ್ತವೆ. ಅದನ್ನು ಬಿಟ್ಟು ಸೇವೆ ಮಾಡುವ ಕಡೆಗೆ ಗಮನ ಹರಿಸಬೇಕು. ಎಲ್ಲಿ ಸೇವೆ ನಿರ್ವಂಚನೆಯಿಂದ ಮಾಡಲಾಗುತ್ತದೆ ಅಲ್ಲಿ ಕಾರ್ಯಕರ್ತರು ತಾವಾಗಿಯೇ ಉತ್ಪತ್ತಿ ಆಗುತ್ತಾರೆ. ಹೆಚ್ಚಿನ ಮಂದಿಯ ಸಹಕಾರ, ಪ್ರೋತ್ಸಾಹ ಸಿಗುತ್ತದೆ. ಸಂಘ ಸಂಸ್ಥೆಗಳೂ ಸೇರಿದಂತೆ ಪ್ರತಿಯೊಬ್ಬರೂ ನಮ್ಮ ಭಾಷೆ, ಸಂಸ್ಕೃತಿ, ಆಚಾರ, ವಿಚಾರವನ್ನು ಉಳಿಸಿ, ಬೆಳೆಸಿ, ಅದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತಾವಾಗಿಯೇ ಸಮಾಜ ಸೇವೆ ಮಡಲು ಮುಂದಾಗಬೇಕು ಎಂದು ತಿಳಿಸಿದರು.

ವಿಮರ್ಶಕ ಡಾ.ಜಿ.ಕೃಷ್ಣಪ್ಪ ‘ಸಾಹಿತ್ಯ-ಸಂಸ್ಕೃತಿ’, ಆರ್.ವಿ.ಶಿಕ್ಷಣ ಸಮಿತಿ ಟ್ರಸ್ಟ್‌ನ ನಿರ್ದೇಶಕ ಡಾ.ಟಿ.ವಿ.ರಾಜು ‘‘ ಶಿಕ್ಷಣ-ಉನ್ನತ ಅಧ್ಯಯನ’, ವೈದ್ಯೆ ಡಾ.ಚಂದ್ರಕಲಾ ಎಚ್.ಎನ್.ರಾಜಣ್ಣ ‘ಸಾರ್ವಜನಿಕ ಆರೋಗ್ಯ ಪಾಲನೆ’, ಮಾಜಿ ಉಪ ಮೇಯರ್ ಶ್ರೀರಾಮೇಗೌಡ ‘ನಗರ ಕಲ್ಯಾಣ-ಸಾಮಾಜಿಕ ಸೇವೆ’ ಕುರಿತು ವಿಷಯ ಮಂಡಿಸಿದರು. ನಂತರ ಸಂಘದ ಸಾಧನ ಪಥ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಉದಯ್ ಗರುಡಾಚಾರ್, ಪಾಲಿಕೆ ಸದಸ್ಯ ಡಿ.ಎನ್.ರಮೇಶ್, ಪತ್ರಿಕೆ ಸಂಪಾದಕ ಡಾ.ನಾ.ಗೀತಚಾರ್ಯ, ಪ್ರೊ.ಶಾಂತರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News