ಬೆಂಗಳೂರು: ಈದ್ ಮಿಲನ್ ಸೌಹಾರ್ದ ಕೂಟ

Update: 2018-06-24 14:42 GMT

ಬೆಂಗಳೂರು, ಜೂ.24: ದೇಶದಲ್ಲಿ ಬಹು ಸಂಸ್ಕೃತಿ ಉಳಿಸಿಕೊಳ್ಳುವ ಜೊತೆಗೆ, ಸೌಹಾರ್ದತೆ ಗಟ್ಟಿಗೊಳಿಸಬೇಕು ಎಂದು ಪ್ರಗತಿಪರ ಸಂಘಟನಾ ಸಂಚಾಲಕರು ಇಂದಿಲ್ಲಿ ಕರೆ ನೀಡಿದರು.

ರವಿವಾರ ನಗರದ ಬೆನ್ಸನ್‌ಟೌನ್‌ನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್‌ಟಿಟ್ಯೂಟ್(ಐಎಸ್‌ಐ) ಸಭಾಂಗಣದಲ್ಲಿ ವಿಷನ್ ಕರ್ನಾಟಕ ಸಂಘಟನೆಯು ಆಯೋಜಿಸಿದ್ದ, ಈದ್ ಮಿಲನ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.

ಸಮಾಜವಾದಿ ಮಂಗ್ಳೂರು ವಿಜಯ ಮಾತನಾಡಿ, ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಾವಾರು ಪ್ರತ್ಯೇಕತೆಯನ್ನು ಮೀರಿ ನಿಂತು ಸಹೋದರಭಾವ ಮೈಗೂಡಿಸಿಕೊಳ್ಳಬೇಕು. ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಸಮಾಜದ ಮೇಲಿದ್ದು, ಎಲ್ಲ ಧರ್ಮಿಯರು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಬೇಕು ಎಂದು ನುಡಿದರು.

ಹೋರಾಟಗಾರ ಎ.ಜೆ.ಖಾನ್ ಮಾತನಾಡಿ, ನಮ್ಮ ರಾಜಕೀಯ, ಧಾರ್ಮಿಕ ನಿಷ್ಠೆಗಳನ್ನು ಮೀರಿ ವಿಶಾಲವಾದ ಸಾಮಾಜಿಕ ನೆಲೆಯಲ್ಲಿ ಕೋಮುವಾದದ ವಿರುದ್ಧ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಕೋಮು ಸೌಹಾರ್ದತೆ ಸ್ಥಾಪಿಸಲು ಎಲ್ಲ ಕೋಮಿನ ಪ್ರಭಾವಿ ನಾಯಕರು, ಮುಖಂಡರು ಮುಂದೆ ಬರಬೇಕು ಎಂದರು.

ಧರ್ಮದ ಹೆಸರಿನ ದುರ್ಬಳಕೆ ಆಗುತ್ತಿರುವುದರಿಂದ ಧಾರ್ಮಿಕ ನೇತಾರರು, ವಿದ್ವಾಂಸರು, ಮತ್ತು ಆಧ್ಯಾತ್ಮಿಕ ಗುರುಗಳು ಇದರ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಹಿಂದೂ, ಮುಸ್ಲಿಮ್ ಧಾರ್ಮಿಕ ಮತ್ತು ಸಾಂಸ್ಕೃತಿಕ ವರ್ಗಗಳ ಮಧ್ಯೆ ಪರಸ್ಪರ ಸಂಪರ್ಕದ ಒಂದು ಪ್ರಾಮಾಣಿಕ, ವಿಶಾಲ ಮತ್ತು ನಿರಂತರ ಜಾಲವನ್ನು ಸಾಧ್ಯವಿರುವ ಎಲ್ಲ ಮಟ್ಟಗಳಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆಯೋಜಕ ಗುಲಾಮೆ ಗೌಸ್ ಮಾತನಾಡಿ, ಇದೊಂದು ಸಾಂಪ್ರಾದಾಯಿಕ ಕೂಟವಲ್ಲ. ಬದಲಿಗೆ ಸಮಾಜದಲ್ಲಿ ಪ್ರತಿಯೊಂದು ಧರ್ಮದವರ ನಡುವೆ ಶಾಂತಿ, ಸಮಾಧಾನ, ಮಾನವೀಯತೆ ಅರಿವು ಮೂಡಿಸುವಂತಹ ಬದಲಾವಣೆಯ ಗುರಿ ಹೊಂದಲಾಗಿದೆ. ಎಲ್ಲ ಧರ್ಮಿಯರೂ ಈದ್ ಮಿಲನ್‌ನಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಯೋಜಕ ಗುಲಾಮೆ ಗೌಸ್, ಸಂಚಾಲಕ ವಕೀಲ ಅಯ್ಯೂಬ್‌ಖಾನ್, ಜಂಟಿ ಸಂಚಾಲಕ ಮುಖ್ತಾರ್ ಅಹ್ಮದ್, ಟಿಪ್ಪು ಸಂಯುಕ್ತ ರಂಗದ ಸರ್ದಾರ್ ಅಹ್ಮದ್ ಖುರೇಷಿ, ಸತ್ಯ ಸಾಯಿ ಟ್ರಸ್ಟ್‌ನ ಸಂಚಾಲಕಿ ವಿದ್ಯಾ, ಶರತ್, ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಸೇರಿ ಪ್ರಮುಖರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News