ಹಿಂದುಳಿದವರ ಏಳಿಗೆಗೆ ಬದ್ಧ: ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ

Update: 2018-06-24 14:48 GMT

ಬೆಂಗಳೂರು, ಜೂ.24: ನಾನು ವಿಧಾನಪರಿಷತ್ ಸದಸ್ಯನಾಗಿರುವಷ್ಟು ದಿನ ಹಿಂದುಳಿದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಇಂದಿಲ್ಲಿ ಹೇಳಿದ್ದಾರೆ.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ರವಿವಾರ ಆರ್‌ಬಿಐ ಲೇಔಟ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇಂದಿಗೂ ತೀವ್ರ ತುಳಿತಕ್ಕೆ ಒಳಗಾಗುತ್ತಿವೆ. ಈ ನಿಟ್ಟಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ತುಳಿತಕ್ಕೊಳಗಾದ ಹಿಂದುಳಿದ ಅಭಿವೃದ್ಧಿಗೆ ಶ್ರಮಿಸಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ತುಳಿತಕ್ಕೊಳಗಾಗಿದ್ದ ನನ್ನನ್ನು ಪಕ್ಷದಲ್ಲಿ ಗುರುತಿಸಿ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ನಾನು ಎಂದಿಗೂ ಮರೆಯುವುದಿಲ್ಲ. ನಮ್ಮನ್ನು ಮೇಲಕ್ಕೆತ್ತಿ ಕಾಪಾಡಿದ್ದಾರೆ ಎಂದ ಅವರು, ಪಕ್ಷದ ಸಂಘಟನೆಗಾಗಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಶಾಸಕ ಕೃಷ್ಣಪ್ಪ ಮಾತನಾಡಿ, ನಂಜುಂಡಿಯನ್ನು ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ನನಗೆ ಅಪಾರ ಸಂತಸ ತಂದಿದೆ. ಅಲ್ಲದೆ, ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಅವರಿಗೆ ನಾನು ಸೇರಿದಂತೆ ಎಲ್ಲರೂ ಎಲ್ಲ ರೀತಿಯ ನೆರವು ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 5 ನೆ ವರ್ಷದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸೂರ್ಯ ನಾರಾಯಣ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News