ಐಸ್‌ಲ್ಯಾಂಡ್‌ಗೆ ಕ್ರೊಯೇಶಿಯ ವಿರುದ್ಧ ಗೆಲ್ಲಲೇಬೇಕಾದ ಪಂದ್ಯ

Update: 2018-06-25 18:56 GMT

ರಾಸ್ಟಾವ್ ಆನ್ ಡಾನ್, ಜೂ.25: ಚೊಚ್ಚಲ ಫಿಫಾ ವಿಶ್ವಕಪ್ ಆಡುತ್ತಿರುವ ಐಸ್‌ಲ್ಯಾಂಡ್ ತಂಡ ನಾಕೌಟ್ ಹಂತಕ್ಕೆ ತೇರ್ಗಡೆಯಾಗುವ ವಿಶ್ವಾಸವನ್ನು ಜೀವಂತವಾಗಿಟ್ಟುಕೊಳ್ಳಲು ಮಂಗಳವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕ್ರೊಯೇಶಿಯ ವಿರುದ್ಧ ಜಯ ಸಾಧಿಸಲೇಬೇಕಾಗಿದೆ. ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಕ್ರೊಯೇಶಿಯ ತಂಡ ಅರ್ಜೆಂಟೀನವನ್ನು 3-0 ಅಂತರದಿಂದ ಮಣಿಸಿ ಆಘಾತ ನೀಡಿತ್ತು. ಇದೀಗ ‘ಡಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಕ್ರೊಯೇಶಿಯ ತಂಡ ಈಗಾಗಲೇ ನಾಕೌಟ್ ಹಂತಕ್ಕೇರಿದ್ದು ನಾಳೆಯ ಪಂದ್ಯದ ಫಲಿತಾಂಶ ಅದಕ್ಕೆ ಹೆಚ್ಚು ವ್ಯತ್ಯಾಸವಾಗದು.

ಅರ್ಜೆಂಟೀನ ವಿರುದ್ಧ ಆಡಿರುವ ತನ್ನ ಮೊದಲ ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಐಸ್‌ಲ್ಯಾಂಡ್ ತಂಡ ಎರಡನೇ ಪಂದ್ಯದಲ್ಲಿ ನೈಜೀರಿಯ ವಿರುದ್ಧ 0-2 ಅಂತರದಿಂದ ಸೋತಿತ್ತು. ಹೀಗಾಗಿ ಕ್ರೊಯೇಶಿಯ ವಿರುದ್ಧ ಗೆಲ್ಲುವುದು ಐಸ್‌ಲ್ಯಾಂಡ್‌ಗೆ ಅನಿವಾರ್ಯವಾಗಿದೆ. ಮಾತ್ರವಲ್ಲ ನೈಜೀರಿಯ-ಅರ್ಜೆಂಟೀನ ಪಂದ್ಯದ ಫಲಿತಾಂಶ ತನ್ನ ಪರವಾಗಿರುವಂತೆ ಪ್ರಾರ್ಥಿಸಬೇಕಾಗಿದೆ.

 ಮತ್ತೊಂದು ಪಂದ್ಯದಲ್ಲಿ ನೈಜೀರಿಯ ತಂಡ ಅರ್ಜೆಂಟೀನವನ್ನು ಮಣಿಸಿದರೆ ಐಸ್‌ಲ್ಯಾಂಡ್ ಮನೆಗೆ ತೆರಳಬೇಕಾಗುತ್ತದೆ. ಅರ್ಜೆಂಟೀನ ಪಂದ್ಯವನ್ನು ಡ್ರಾ ಅಥವಾ ಗೆಲುವು ಸಾಧಿಸಿದರೆ ಗೋಲು ವ್ಯತ್ಯಾಸ ಪರಿಗಣನೆಗೆ ಬರಲಿದೆ.

ಕ್ರೊಯೇಶಿಯ ತಂಡ ನೈಜೀರಿಯ ತಂಡವನ್ನು 2-0 ಅಂತರದಿಂದ ಮಣಿಸುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಿತ್ತು. 2ನೇ ಪಂದ್ಯದಲ್ಲಿ 2014ರ ರನ್ನರ್ಸ್-ಅಪ್ ಅರ್ಜೆಂಟೀನವನ್ನು ಸೋಲಿಸಿ ಸತತ 2ನೇ ಜಯ ಸಾಧಿಸಿತ್ತು.ಆಕ್ರಮಣಕಾರಿ ಫುಟ್ಬಾಲ್ ಆಡುತ್ತಿರುವ ಕ್ರೊಯೇಶಿಯ ಪ್ರಸ್ತುತ ಟೂರ್ನಿಯಲ್ಲಿ ಆಕರ್ಷಣೀಯ ತಂಡವಾಗಿದೆ.

 ಲುಕಾ ಮೊಡ್ರಿಕ್ ಈಗಾಗಲೇ 2 ಗೋಲು ಬಾರಿಸಿ 1998ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿರುವ ಕ್ರೊಯೇಶಿಯ ನಾಕೌಟ್ ಹಂತಕ್ಕೇರಲು ನೆರವಾಗಿದ್ದಾರೆ.

ಕ್ರೊಯೇಶಿಯ ತಂಡ ಐಸ್‌ಲ್ಯಾಂಡ್‌ಗೆ ಗೋಲು ಬಿಟ್ಟುಕೊಡದೇ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. 1986ರಲ್ಲಿ ಬ್ರೆಝಿಲ್, 1990ರಲ್ಲಿ ಇಟಲಿ ಹಾಗೂ 1998ರಲ್ಲಿ ಫ್ರಾನ್ಸ್ ತಂಡ ಗ್ರೂಪ್ ಹಂತದ ಮೂರು ಪಂದ್ಯಗಳಲ್ಲಿ ಒಂದೂ ಗೋಲು ಬಿಟ್ಟುಕೊಡದೇ ದಾಖಲೆ ನಿರ್ಮಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News