ಒಮನ್: ವೀಸಾ ನಿಯಮಗಳಲ್ಲಿ ಪ್ರಮುಖ ಬದಲಾವಣೆ

Update: 2018-06-26 17:09 GMT

ಮಸ್ಕತ್, ಜೂ. 26: ಸಂದರ್ಶಕರು ಮತ್ತು ವಿದೇಶಿಯರಿಗೆ ನೀಡುವ ವೀಸಾ ನಿಯಮಗಳಲ್ಲಿ ಒಮನ್ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ದೇಶಕ್ಕೆ ಹೆಚ್ಚು ಪ್ರವಾಸಿಗರನ್ನು ಹಾಗೂ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ನೂತನ ಆದೇಶದ 8ನೇ ವಿಧಿಯ ಪ್ರಕಾರ, ಒಮನ್‌ನಲ್ಲಿ ಸರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರು ವೀಸಾ ಅರ್ಜಿದಾರರಿಗೆ ಪ್ರಾಯೋಜಕರಾಗಬಹುದಾಗಿದೆ.

ನೂತನ ನಿಯಮಗಳ ಪ್ರಕಾರ, ಒಮನ್‌ನಲ್ಲಿ ಆಸ್ತಿ ಹೊಂದಿರುವ ವಿದೇಶಿಯರು ಪ್ರಾಯೋಜಕರಿಲ್ಲದೇ ವೀಸಾ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ, ಸರಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಉದ್ಯೋಗಿಗಳು ಬೇರೆಯವರಿಗೆ ಪ್ರಾಯೋಜಕರಾಗಬಹುದಾಗಿದೆ.

ಹಾಗಾಗಿ, ನೂತನ ನಿಯಮಗಳನ್ವಯ, ಓರ್ವ ವೀಸಾ ಪ್ರಾಯೋಜಕನು ಒಮನ್ ಪ್ರಜೆಯಾಗಿರಬೇಕು, ನೋಂದಾಯಿತ ವಿದೇಶಿ ಹೂಡಿಕೆದಾರನಾಗಿರಬೇಕು ಅಥವ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿದೇಶಿಯನಾಗಿರಬೇಕು.

‘‘ಇದರ ಪ್ರಕಾರ, ಒಮನ್‌ನಲ್ಲಿ ವಾಸಿಸುವ ವಿದೇಶಿಯರಿಗೆ ತಮ್ಮದೇ ಕುಟುಂಬ ಸದಸ್ಯರ ವೀಸಾಗಳನ್ನು ಪ್ರಾಯೋಜಿಸಲು ಸಾಧ್ಯವಾಗುತ್ತದೆ’’ ಎಂದು ಅಧಿಕಾರಿಯೋರ್ವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಒಮನ್’ ವರದಿ ಮಾಡಿದೆ.

ನೂತನ ಕಿರು ಅವಧಿ ವೀಸಾ

ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ರೋಯಲ್ ಒಮನ್ ಪೊಲೀಸರು ನೂತನ ಕಿರು ಅವಧಿಯ ವೀಸಾ ಮಾದರಿಯೊಂದನ್ನು ಪ್ರಕಟಿಸಿದ್ದಾರೆ. ದೇಶಕ್ಕೆ 10 ದಿನಗಳ ಕಿರು ಭೇಟಿಯನ್ನು ನೀಡುವವರಿಗೆ ಈ ಮಾದರಿಯ ವೀಸಾ ಸಹಕಾರಿಯಾಗುತ್ತದೆ.

ಈ ಕಿರು ಅವಧಿಯ ವೀಸಾಕ್ಕಾಗಿ ಪ್ರವಾಸಿಗರು 5 ಒಮಾನಿ ರಿಯಾಲ್ (885 ರೂಪಾಯಿ) ಪಾವತಿಸಬೇಕಾಗುತ್ತದೆ.

ವೀಸಾ ಹಸ್ತಾಂತರ ಅರ್ಜಿಯ ಶುಲ್ಕ 50 ಒಮಾನಿ ರಿಯಾಲ್ (ಸುಮಾರು 8.850 ರೂಪಾಯಿ) ಹಾಗೂ ಅದನ್ನು ಮರುಪಾವತಿಸಲಾಗುವುದಿಲ್ಲ.

10 ದಿನಗಳು, ಒಂದು ತಿಂಗಳು ಮತ್ತು ಒಂದು ವರ್ಷದ ಪ್ರವಾಸಿ ವೀಸಾವೂ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News