ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಬುದ್ಧಿಜೀವಿಗಳು

Update: 2018-06-27 11:02 GMT

ಕೊಲ್ಕತ್ತಾ, ಜೂ.27: ಇಲ್ಲಿನ ಸಭಾಂಗಣವೊಂದರಲ್ಲಿ ನಡೆಯಲಿರುವ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆನ್ನುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆಹ್ವಾನವನ್ನು ರಾಜ್ಯದ ಬುದ್ಧಿಜೀವಿಗಳು, ಚಿಂತಕರು ನಿರಾಕರಿಸಿದ್ದಾರೆ. ಹೀಗೆ ನಿರಾಕರಿಸಿದವರಲ್ಲಿ ಹಿರಿಯ ನಟಿ ಸೌಮಿತ್ರ ಚಟರ್ಜಿ,  ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಅಶೋಕ್ ಗಂಗೂಲಿ, ಲೇಖಕ ಸಂತೋಷ್ ರಾಣಾ, ರಂಗ ಕಲಾವಿದರುಗಳಾದ ರುದ್ರಪ್ರಸಾದ್ ಸೇನಗುಪ್ತಾ, ಚಂದನ್ ಸೇನ್, ಮನೋಜ್ ಮಿತ್ರ, ಗಾಯಕಿ ಅಮರ್ ಪೌಲ್ ಹಾಗೂ ಚಿತ್ರ ಕಲಾವಿದ ಸಮೀರ್ ಐಚ್ ಸೇರಿದ್ದಾರೆ.

ಆದರೆ ನಗರದ ನೂರಾರು ಬುದ್ಧಿಜೀವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಂಬ ಆತ್ಮವಿಶ್ವಾಸ ರಾಜ್ಯ ಬಿಜೆಪಿ ನಾಯಕರಿಗಿದೆ.

ವಂದೇ ಮಾತರಂ ಹಾಡನ್ನು ರಚಿಸಿದ್ದ ಖ್ಯಾತ ಬಂಗಾಳಿ ಲೇಖಕ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಸ್ಮರಣಾರ್ಥ ದಿಲ್ಲಿಯ ಶ್ಯಾಮ ಪ್ರಸಾದ್ ಮುಖರ್ಜಿ  ಫೌಂಡೇಶನ್  ಹಮ್ಮಿಕೊಂಡಿರುವ ಭಾಷಣ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದು ನಂತರ ಬುದ್ಧಿಜೀವಿಗಳು ಹಾಗೂ ಗಣ್ಯರನ್ನು ಭೇಟಿ ಮಾಡಲಿದ್ದಾರೆ.

ನಟಿ ಸೌಮಿತ್ರ ಚಟರ್ಜಿ ತಮಗೆ ನೀಡಿದ ಆಹ್ವಾನವನ್ನು ತಿರಸ್ಕರಿಸಿ, ಅಮಾನ್ಯೀಕರಣ ಹಾಗೂ ಕೆಲವೊಂದು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸುವ ಬಿಜೆಪಿ ನೀತಿಗಳಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಂಗ ನಿರ್ದೇಶಕ ಮನೋಜ್ ಮಿತ್ರ ತಮಗೆ ಹಿರಿಯ ಬಿಜೆಪಿ ನಾಯಕ ಮುಕುಲ್ ರಾಯ್ ಆಹ್ವಾನ ನೀಡಿದರೂ ತಾನು ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆಂಬ ಮಾಹಿತಿಯನ್ನು ಬಿಜೆಪಿ ನಾಯಕರು ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಪಂಕಜ್ ರಾಯ್ ಅವರ ಪ್ರಕಾರ ಸುಮಾರು 650 ಬುದ್ಧಿಜೀವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ``ಆದರೆ ಅವರೆಲ್ಲರ ಮೇಲೂ ಆಡಳಿತ ಪಕ್ಷದ ಒತ್ತಡವಿರುವುದರಿಂದ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅವರಿಗೆ ಬೆದರಿಕೆಗಳು ಬರಬಹುದು'' ಎಂದವರು  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News