ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಂಪೇಗೌಡ ಕೌಶಲ್ಯಾಭಿವೃದ್ಧಿ ವಿ.ವಿ ಸ್ಥಾಪನೆ: ಸಿ.ಎಂ ಕುಮಾರಸ್ವಾಮಿ

Update: 2018-06-27 13:26 GMT

ಬೆಂಗಳೂರು, ಜೂ.27 : ರಾಜ್ಯದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯ ನಿವಾರಣೆಗಾಗಿ ಕೆಂಪೇಗೌಡ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಾಗೂ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಅದು ನನ್ನ ಕನಸಾಗಿದೆ ಎಂದು ಹೇಳಿದರು.

ಬೆಂಗಳೂರು ನಗರ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಪೈಪೋಟಿಯನ್ನೊಡ್ಡುತ್ತಿದೆ. ದೇಶ-ವಿದೇಶಗಳಲ್ಲಿನ ಖ್ಯಾತ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆಯಾಗಿದೆ. ಅಲ್ಲದೆ, ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಅಭಿವೃದ್ಧಿಯಾಗಲು ಕೆಂಪೇಗೌಡರು ಬುನಾದಿ ಹಾಕಿಕೊಟ್ಟಿದ್ದಾರೆ. ಅವರನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ನಗರದಲ್ಲಿ ಕೇವಲ ಒಂದು ಸಮುದಾಯದವರು ವಾಸ ಮಾಡುತ್ತಿಲ್ಲ. ವಿಭಿನ್ನ ಭಾಷೆ, ಧರ್ಮ, ಜಾತಿಯ ಜನರು ವಾಸಿಸುತ್ತಿದ್ದಾರೆ. ಕೆಂಪೇಗೌಡರು ನಗರವನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲಿ ತಮ್ಮ ದೂರದೃಷ್ಟಿಯಿಂದ ಎಲ್ಲ ಸಮುದಾಯಗಳಿಗೂ ಸಮಾನವಾದ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ. ಹಲವಾರು ಸಮುದಾಯಗಳನ್ನು ರಕ್ಷಿಸಿದ್ದಾರೆ. ಅಲ್ಲದೆ, ಅನೇಕ ಬಡಾವಣೆಗಳನ್ನು ನಿರ್ಮಾಣ ಮಾಡಿರುವುದು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ವ್ಯಕ್ತಿಗಳು ಸೃಷ್ಟಿಸಿದ್ದಾರೆ. ಹಲವಾರು ಕುಟುಂಬಗಳಿಗೆ ಮನೆಗಳಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದು ಅಧಿಕಾರದಲ್ಲಿರುವ ಸರಕಾರದ ಜವಾಬ್ದಾರಿಯಿದೆ. ಅದನ್ನು ನನ್ನ ಅಧಿಕಾರದ ಅವಧಿಯಲ್ಲಿ ಪೂರೈಸುತ್ತೇನೆ ಎಂದು ತಿಳಿಸಿದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಯಾವುದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಇಡೀ ರಾಜ್ಯಕ್ಕೆ ಸೀಮಿತವಾದ ವ್ಯಕ್ತಿ. ಅಂತಹ ವ್ಯಕ್ತಿಯ ಹೆಸರು ಶಾಶ್ವತವಾಗಿ ಉಳಿಯಬೇಕು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಅದಕ್ಕಾಗಿ ಒಂದು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡ ಹೆಸರಿಡಬೇಕು ಹಾಗೂ ಶಾಲಾ ಪಠ್ಯಪುಸ್ತಕಗಳಲ್ಲಿ ಅವರ ಪರಿಚಯ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸರಕಾರ ನಗರವನ್ನು ನಿರ್ಮಾಣ ಮಾಡಿದವರನ್ನು ಸ್ಮರಿಸಿಕೊಳ್ಳಲಿಲ್ಲ ಎಂದರೆ ಕರ್ತವ್ಯಲೋಪವಾಗುತ್ತದೆ. ಕೆಂಪೇಗೌಡ ಜಯಂತಿ ವರ್ಗ, ಜಾತಿಯ ಹಬ್ಬವಲ್ಲ, ಎಲ್ಲರಿಗೂ ಸೇರಿದ ಹಬ್ಬವಾಗಿದೆ. ಅಲ್ಲದೆ, ಬೆಂಗಳೂರಿಗೆ ಸೀಮಿತವಾದ ಜಯಂತಿಯಾಗಿ ಆಚರಣೆಯಾಗಬಾರದು. ಅದೇ ರೀತಿ ಬೆಂಗಳೂರು ನಗರ ಇಲ್ಲಿ ವಾಸಿಸುವವರ ಆಸ್ತಿಯಲ್ಲ. ಅದು ಕರ್ನಾಟಕದ ಆಸ್ತಿಯಾಗಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ವಿದೇಶಗಳಿಂದ ಬರುವ ಜನಪ್ರತಿನಿಧಿಗಳು ದಿಲ್ಲಿಗೆ ಬಂದು ಅನಂತರ ಮುಂಬೈ, ಹೈದರಾಬಾದ್, ಚೆನೈ ಸೇರಿದಂತೆ ವಿವಿಧ ನಗರಗಳಿಗೆ ಭೇಟಿಯಾಗುತ್ತಿದ್ದರು. ಆದರೆ, ಈಗ ಮೊದಲು ಬೆಂಗಳೂರಿಗೆ ಬಂದು ಅನಂತರ ದಿಲ್ಲಿ ಸೇರಿದಂತೆ ಬೇರೆ ನಗರಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಅಲ್ಲದೆ, ಇಂದು ಶೇ.39 ರಷ್ಟು ಐಟಿ ರಫ್ತು ಬೆಂಗಳೂರಿನಿಂದ ನಡೆಯುತ್ತಿದೆ. ಇದಕ್ಕೆ ಮೂಲ ಕಾರಣಕರ್ತರು ಯಾರು ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಜಯಮಾಲ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ, ಮೇಯರ್ ಸಂಪತ್‌ ರಾಜ್, ಉಪ ಮೇಯರ್ ಮಂಜುಳಾ ನಾರಾಯಣಸ್ವಾಮಿ, ಮಾಜಿ ಮೇಯರ್ ಪದ್ಮಾವತಿ, ಶಾಸಕ ಸೋಮಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸರಕಾರಕ್ಕೆ ಅಡ್ಡಿಪಡಿಸಿದರೆ ಸಹಿಸಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಸುಭದ್ರವಾಗಿ ಮುನ್ನಡೆಯಲು ಕೇಂದ್ರ ಸರಕಾರದಿಂದ ಸಕಾರಾತ್ಮಕವಾಗಿ ನ್ಯಾಯಯುತವಾಗಿ ನೀಡಬೇಕಾದುದನ್ನು ನೀಡಬೇಕು. ಕುಮಾರಸ್ವಾಮಿಗೆ ಅನೇಕ ಕನಸುಗಳಿದ್ದು, ಪ್ರಧಾನಿ ಮೋದಿ ಅದಕ್ಕೆ ನೆರವು ನೀಡಬೇಕು. ಅನಗತ್ಯವಾಗಿ ಸರಕಾರಕ್ಕೆ ಅಡ್ಡಿಪಡಿಸಿದರೆ ನಮ್ಮ ಸಮುದಾಯ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ.
-ನಂಜಾವಧೂತ ಸ್ವಾಮೀಜಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News