ಬೆಂಗಳೂರು: ಹಾಸ್ಟೆಲ್ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ
ಬೆಂಗಳೂರು, ಜೂ.27: ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಹುದ್ದೆಗಳಿಂದ ವಜಾ ಮಾಡುತ್ತಿರುವ ಪ್ರಕ್ರಿಯೆ ಖಂಡಿಸಿ ಸಾವಿರಾರು ಸಿಬ್ಬಂದಿ ಅನಿರ್ದಿಷ್ಟಾವದಿ ಸಾಮೂಹಿಕ ಧರಣಿ ಪ್ರಾರಂಭಿಸಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಸಾವಿರಾರು ಹಾಸ್ಟೆಲ್ ಸಿಬ್ಬಂದಿ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಸಂಘದ ಸಹ ಕಾರ್ಯದರ್ಶಿ ಕೆ.ಹನುಮೇಗೌಡ, ಸರಕಾರ ಕೂಡಲೇ ನೇರ ನೇಮಕಾತಿ ಪ್ರಕ್ರಿಯೆ ನಡೆಸುವ ತೀರ್ಮಾನ ಹಿಂಪಡೆಯಬೇಕು. ಕಳೆದ ಹದಿನೈದು ವರ್ಷಗಳಿಗೂ ಮೇಲ್ಪಟ್ಟು ಸರಕಾರಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಯನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಇಲಾಖೆಯಡಿಯಲ್ಲಿರುವ ಸಾವಿರಾರು ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಆದರೆ, ಸೂಕ್ತ ಸೌಲಭ್ಯ ನೀಡದೆ, ಇದೀಗ ಏಕಾಏಕಿ ಹುದ್ದೆಗಳಿಂದ ವಜಾ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ರಸ್ತೆ ತಡೆ’
ವಸತಿ ಶಾಲೆಯ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಾವಿರಾರು ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಮಾಜ ಕಲ್ಯಾಣ ಸಚಿವರು ಧರಣಿ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಪರಿಣಾಮ ಫ್ರೀಡಂ ಪಾರ್ಕ್ ಸುತ್ತಲೂ ವಾಹನ ಸಂಚಾರ ದಟ್ಟಣೆ ಕಂಡಿತು. ಬಳಿಕ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿ ಫ್ರೀಡಂ ಪಾರ್ಕ್ ಮೈದಾನದೊಳಗೆ ಕರೆತಂದರು.