ರೈತರ ಸಾಲ ಮನ್ನಾ ಮಾಡಲು ಆಗ್ರಹ
ಬೆಂಗಳೂರು, ಜೂ.27: ಕಾಂಗ್ರೆಸ್ ಪಕ್ಷ ರೈತರ ಸಾಲ ಮನ್ನಾದ ಬಗ್ಗೆ ಭಿನ್ನಮತವನ್ನು ಕೈ ಬಿಡಬೇಕು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಾಲ ಮನ್ನಾ ಮಾಡಲು ಮುಂದಾಗಿರುವ ಕುಮಾರಸ್ವಾಮಿ ನಿರ್ಧಾರಕ್ಕೆ ಅಡ್ಡಗಾಲು ಹಾಕಲು ಮುಂದಾಗಿರುವುದು ಸರಿಯಲ್ಲ. ಅದೇ ರೀತಿ ಮುಖ್ಯಮಂತ್ರಿ ಮಾತುಗಳಲ್ಲಿ ಕಾಲ ಹರಣ ಮಾಡುವ ಮೊದಲು ತಾವು ನೀಡಿದ ಭರವಸೆಯನ್ನು ಈಡೇರಿಸಲಿ ಎಂದು ಹೇಳಿದರು.
ರೈತರು ಸಾಲ ಪಡೆದಿರುವುದು ಆಹಾರ ಉತ್ಪಾದನೆ ಮಾಡಲು ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಆದರೆ, ಕೆಲವು ಬುದ್ಧಿವಂತರು ಹಾಗೂ ಆರ್ಥಿಕ ತಜ್ಞರು ಈ ವಿಚಾರವಾಗಿ ತಿರುಚಿ ಮಾತನಾಡುತ್ತಿದ್ದಾರೆ. ಬಹಳಷ್ಟು ರೈತರು ಸಾಲ ತೆಗೆದುಕೊಂಡಿದ್ದು ತಮ್ಮ ಸ್ವಾರ್ಥಕ್ಕಾಗಿ ಎನ್ನುತ್ತಿದ್ದಾರೆ. ಅಲ್ಲದೆ, ಸಾಲ ಮನ್ನಾ ಮಾಡುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹೇಳುತ್ತಿರುವುದು ತಮ್ಮ ಮೂರ್ಖತನದ ಆಲೋಚನೆಯಾಗಿದೆ ಎಂದು ದೂರಿದರು.
ರೈತರು ಬೀಜ ಕಂಪೆನಿಗಳಿಂದ ಸಾವಿರಾರು ರೂ.ಗಳು ಖರ್ಚು ಮಾಡಿ ಬೀಜಗಳನ್ನು, ರಸಗೊಬ್ಬರಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರೆ, ಕಷ್ಟದ ಸ್ಥಿತಿಯಲ್ಲಿ ಬೆಳೆ ಬೆಳೆದು ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಮಾಡುತ್ತಿರುವ ಸಾಲದ ಹೊರೆ ಜಾಸ್ತಿಯಾಗುತ್ತಿದೆ. ಆದರೆ, ಸರಕಾರ ರೈತರಿಗೆ ಬೆಂಬಲ ಬೆಲೆ ನೀಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಸರಕಾರಗಳು ತಮ್ಮ ಕರ್ತವ್ಯಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ತನ್ನ ಆಡಳಿತ ಯಂತ್ರಕ್ಕೆ ಬೇಕಾದ ಸಿಬ್ಬಂದಿ, ಸೇವಾ ಕ್ಷೇತ್ರವನ್ನು ಕಾಪಾಡಿಕೊಂಡು ಬಹು ಸಂಖ್ಯಾತರಾದ ರೈತರನ್ನು ಕಳೆದ 70 ವರ್ಷಗಳಿಂದ ತಿರಸ್ಕರಿಸಿರುವುದೇ ಇಂದಿನ ದುರಂತಕ್ಕೆ ಕಾರಣವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಾಗುವ ಅನಾಹುತಗಳನ್ನು ತಪ್ಪಿಸಲು ಎಲ್ಲ ಸಾಲ ರದ್ದು ಮಾಡಬೇಕು ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಸಿ2 ಪ್ಲಸ್ 50 ಸೂತ್ರದ ಅಡಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಅವರು ಸೂಚಿಸಿದರು. ಸುದ್ದಿ ಗೋಷ್ಠಿಯಲ್ಲಿ ರೈತ ಮುಖಂಡ ನಾಗರಾಜು, ಹನುಮಂತಪ್ಪ ಹೊಳೆಯಾಚೆ ಉಪಸ್ಥಿತರಿದ್ದರು.