ಲೈವ್‌ಬ್ಯಾಂಡ್ ಮುಚ್ಚುವ ವಿಚಾರ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಜೂ.27: ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರದ ಲೈವ್ ಬ್ಯಾಂಡ್‌ಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತರು ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಪೊಲೀಸ್ ಕಮಿಷನರ್ ನೋಟಿಸ್ ಪ್ರಶ್ನಿಸಿ ನಗರದ ಎನ್.ಆರ್. ರಸ್ತೆಯ ಮೆಸೆರ್ಸ್ ಲವರ್ಸ್ ನೈಟ್ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕೆ.ಜಿ. ರಸ್ತೆಯ ಕೋಸ್ಟಾರಿಕ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ರೆಸಿಡೆನ್ಸಿ ರಸ್ತೆಯ ನರ್ತಕಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರಕಾರದ ಪರ ವಾದಿಸಿದ ಎಎಜಿ ಪೊನ್ನಣ್ಣ ಅವರು, ಲೈವ್ ಬ್ಯಾಂಡ್‌ಗಳ ಲೈಸೆನ್ಸ್ ನಿರಾಕರಣೆಯನ್ನು ಮಾಡಿಲ್ಲ. ಕಟ್ಟಡ ಸಾಮರ್ಥ್ಯ ಪ್ರಮಾಣವನ್ನು ಪತ್ರ(ಅಧಿಬೋಗ ಪ್ರಮಾಣ ಪತ್ರ) ಮಾತ್ರ ಕೇಳಿದ್ದೇವೆ. ಅಲ್ಲದೆ, ತುಂಬಾ ಹಳೆಯ ಕಟ್ಟಡಗಳಲ್ಲಿ ಲೈವ್‌ಬ್ಯಾಂಡ್‌ಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಸುರಕ್ಷತೆಯ ದೃಷ್ಟಿಯಿಂದ ಕಟ್ಟಡ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಕೇಳಿದ್ದೇವೆ ಎಂದು ಪೀಠಕ್ಕೆ ತಿಳಿಸಿದರು.
ಕೇವಲ ವಾಸಯೋಗ್ಯ ಪ್ರಮಾಣಪತ್ರ ಆಧರಿಸಿ ಲೈಸೆನ್ಸ್ ನಿರಾಕರಣೆ ಸರಿಯಲ್ಲ. ವಿದ್ಯುತ್ ಸಂಪರ್ಕ ಸೇರಿ ಹಲವು ಸಂಪರ್ಕ ಇವೆ ಎಂದ ಮೇಲೆ ಕಟ್ಟಡಗಳೂ ವಾಸಯೋಗ್ಯವಾಗಿರುತ್ತವೆ ಅಲ್ಲವೇ ಎಂದು ಪ್ರಶ್ನಿಸಿ ನ್ಯಾಯಪೀಠವು ಪರ್ಯಾಯ ಮಾರ್ಗಗಳಿದ್ದರೆ ತಿಳಿಸಿ ಎಂದು ಸೂಚಿಸಿ, ಆದೇಶವನ್ನು ಜೂ.28ಕ್ಕೆ ಕಾಯ್ದಿರಿಸಿತು.